ಉತ್ಸವಗಳ ಬೀಡಾಗಿರುವ ಉಡುಪಿ ಕೃಷ್ಣಮಠದಲ್ಲಿ ನಿತ್ಯೋತ್ಸವಕ್ಕೆ ತೆರೆ 

ಉಡುಪಿ: ನಿತ್ಯೋತ್ಸವ ನಡೆಯುತ್ತಿದ್ದ ಉಡುಪಿ ಶ್ರೀಕೃಷ್ಣಮಠದಲ್ಲಿ ಭಾಗೀರಥಿ ಜಯಂತಿ ಭಾನುವಾರದಿಂದ ಎಲ್ಲ ಉತ್ಸವಗಳಿಗೆ ತೆರೆ ಬಿದ್ದಿದೆ. ಮುಂದಿನ ಉತ್ಥಾನ ದ್ವಾದಶಿ ವರೆಗೆ ದೇವರು ಶಯನದಲ್ಲಿರುತ್ತಾರೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಉತ್ಸವಮೂರ್ತಿಯನ್ನು ಗರ್ಭಗುಡಿಯಲ್ಲಿರಿಸಲಾಯಿತು. ಶ್ರೀಕೃಷ್ಣಲೀಲೋತ್ಸವದಂದು ರಥೋತ್ಸವ ನಡೆಯುತ್ತದೆಯಾದರೂ ಶ್ರೀಕೃಷ್ಣನ ಮೃಣ್ಮಯಮೂರ್ತಿಗೆ ಉತ್ಸವ ಮಾಡಲಾಗುತ್ತದೆ.​  
ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ಚಿನ್ನದ ರಥದಲ್ಲಿ ಶ್ರೀಕೃಷ್ಣಮುಖ್ಯಪ್ರಾಣ ದೇವರನ್ನಿಟ್ಟು ರಥಬೀದಿಯಲ್ಲಿ ಒಂದು ಸುತ್ತು ಪ್ರದಕ್ಷಿಣೆ ಮಾಡಲಾಯಿತು. ರಥೋತ್ಸವದಲ್ಲಿ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಭಾವೀ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಭಾಗವಹಿಸಿದ್ದರು.  ಬಳಿಕ ಮಧ್ವಸರೋವರ ಬಳಿಯ ಭಾಗೀರಥಿ ಸನ್ನಿಧಿಯಲ್ಲಿ ಶ್ರೀದೇವರನ್ನು ಚಿನ್ನದ ತೊಟ್ಟಿಲಲ್ಲಿಟ್ಟು ತೊಟ್ಟಿಲೋತ್ಸವ ಮಾಡಲಾಯಿತು.
ಅಷ್ಟಮಠಗಳ ಯತಿಗಳಿಗೆ ಮಾಲಿಕಾ ಮಂಗಳಾರತಿ ನಡೆಸಿ ದೇವರನ್ನು ಕೃಷ್ಣಮಠದೊಳಕ್ಕೆ ಕರೆದೊಯ್ಯಲಾಯಿತು. ಬಳಿಕ ಮಠದ ಪರಿಚಾರ ವರ್ಗಕ್ಕೆ ನವಗ್ರಹ ದಾನ ಇತ್ಯಾದಿ ನೀಡಲಾಯಿತು. ದೇವರ ಓಕುಳಿ ನಡೆಸಿ ದೇವರನ್ನು ಗರ್ಭಗೃಹದಲ್ಲಿರಿಸಲಾಯಿತು.​ ಮಠದ ಪಾರುಪತ್ಯಗಾರ  ಲಕ್ಷ್ಮೀಶ ಆಚಾರ್ಯ ಮುದರಂಗಡಿ, ಮಠದ ವ್ಯವಸ್ಥಾಪಕ ಗೋವಿಂದರಾಜ್ ಮೊದಲಾದವರಿದ್ದರು.

 
 
 
 
 
 
 
 
 
 
 

Leave a Reply