ಕೋಟ್ಯಂತರ ರಾಮಭಕ್ತರ ಶತಮಾನಗಳ ಭಕ್ತಿಗೆ ಒಲಿದ ಶ್ರೀ ರಾಮ!

ಕೋಟಿ ಕಂಗಳ ಕನಸು, ಜಗತ್ತಿನಾದ್ಯಂತ ಭಕ್ತರ ನಿರೀಕ್ಷೆಯಂತೆ ಅಯೋಧ್ಯಾ ಪುರಿಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಆಗಿದೆ. ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯ ವಿಧಿಬದ್ಧವಾಗಿ ನೆರವೇರಿದೆ.

12 ಗಂಟೆ 30 ನಿಮಿಷ 32 ಸೆಕೆಂಡು ಶುಭಘಳಿಗೆಯಲ್ಲಿ ಅಭಿಜಿತ್‌ ಮುಹೂರ್ತದಲ್ಲಿ (ʼಅಭಿಜಿತ್‌ʼ ಅಂದ್ರೆ ʼಜಯಶಾಲಿʼ ಎಂದರ್ಥ) ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಇದಕ್ಕೂ ಮುನ್ನ ಪ್ರಧಾನಿಯವರ ಸಾರಥ್ಯದಲ್ಲಿ ಮೂಲ ವಿಗ್ರಹದ ಎದುರು ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಗರ್ಭಗುಡಿಯಲ್ಲಿ ಪೂಜಾ-ಕೈಂಕರ್ಯಗಳು ನಡೆದವು. ಬಳಿಕ ಬಾಲರಾಮನ ಹಣೆಗೆ ಮೋದಿ ತಿಲಕವಿಟ್ಟರು. ಈ ಸಂದರ್ಭದಲ್ಲಿ ಶಂಖ, ಜಾಗಟೆಗಳು ಮೊಳಗಿದವು. ಪ್ರತಿಷ್ಠಾ ಕಾರ್ಯ ನೆರವೇರುತ್ತಿದ್ದಂತೆ ಮೊದಲ ಬಾರಿಗೆ ಸರ್ವಾಲಂಕೃತ ಬಾಲರಾಮನ ಮೂರ್ತಿಯನ್ನು ನೇರ ಪ್ರಸಾರದಲ್ಲಿ ತೋರಿಸಲಾಯಿತು.

ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಪೂಜಾ ವಿಧಿವಿಧಾನಗಳು 11 ಗಂಟೆ ವೇಳೆಗೆ ಆರಂಭಗೊಂಡಿತ್ತು. 12:05 ರಿಂದ 12:55 ರವರೆಗೆ ಸುಮಾರು 50 ನಿಮಿಷಗಳ ಕಾಲ ಪ್ರಾಣ ಪ್ರತಿಷ್ಠಾಪನೆಯ ಪೂಜಾ ಕಾರ್ಯ ನಡೆಸಲಾಯಿತು. ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್‌, ಉತ್ತರ ಪ್ರದೇಶ ರಾಜ್ಯಪಾಲರು ಸೇರಿದಂತೆ ಐವರು ಗಣ್ಯರಿಗೆ ಮಾತ್ರ ಗರ್ಭಗುಡಿಯಲ್ಲಿ ಅವಕಾಶ ನೀಡಲಾಗಿದೆ. ಮೋದಿ ಮತ್ತು ಮೋಹನ್ ಭಾಗವತ್ ಸ್ವತಃ ಹೂವಿನ ಅಭಿಷೇಕ ಮತ್ತು ಆರತಿ ಎತ್ತಿ ಪೂಜೆ ನೆರವೇರಿಸಿದ್ದಾರೆ. ಆಚಾರ್ಯ ಗಣೇಶ್ವರ್ ದ್ರಾವಿಡ್, ಲಕ್ಷ್ಮೀಕಾಂತ ದೀಕ್ಷಿತ್ ನೇತೃತ್ವದಲ್ಲಿ ನೂರಾರು ರಿತ್ವಿಜರು ಪ್ರತಿಷ್ಠಾ ಪೂಜಾ ಕೈಂಕರ್ಯ ನಡೆಸಿದ್ದಾರೆ.  

ಸಾಧು ಸಂತರು, ಪ್ರಮುಖ ಕೈಗಾರಿಕೋದ್ಯಮಿಗಳು, ಬಾಲಿವುಡ್‌ ತಾರೆಯರು ಸೇರಿದಂತೆ ಸುಮಾರು ಎಂಟು ಸಾವಿರ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ 14 ದಂಪತಿ ‘ಯಜಮಾನ’ರಾಗಿ ಪಾಲ್ಗೊಂಡಿದ್ದಾರೆ. ರಾಮ ಮಂದಿರ ಸುತ್ತಮುತ್ತ ಸೇರಿದಂತೆ ಅಯೋಧ್ಯೆ ನಗರದಲ್ಲಿ ಭಾರಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಿರುವ ಅಯೋಧ್ಯೆ ನಗರಿ ಸಂಪೂರ್ಣವಾಗಿ ಸಾವಿರಾರು ಕ್ವಿಂಟಾಲ್‌ ಹೂಗಳಿಂದ ಅಲಂಕೃತಗೊಂಡಿದೆ. ಅಯೋಧ್ಯೆ ಸೇರಿದಂತೆ ದೇಶಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಮ ಮಂತ್ರ ಮೊಳಗುತ್ತಿದೆ. ನೂರಾರು ಕಡೆ ಹಿಂದು ಸಂಘಟನೆಗಳ ವತಿಯಿಂದ ರಾಮ ತಾರಕಯಜ್ಞ ನೆರವೇರಿದೆ.

ಪ್ರಾಣ ಪ್ರತಿಷ್ಠೆ ಎನ್ನುವುದು ಹಿಂದೂ ಮತ್ತು ಜೈನ ಧರ್ಮದ ಪ್ರಮುಖ ಆಚರಣೆಯಾಗಿದೆ. ವಿಗ್ರಹವು ಕೇವಲ ದೇವರ ರೂಪವನ್ನು ಚಿತ್ರಿಸುವ ಒಂದು ಕಲಾಕೃತಿಯಷ್ಟೆ. ಪ್ರಾಣ ಪ್ರತಿಷ್ಠೆಯ ನಂತರವೇ ವಿಗ್ರಹವು ದೈವಿಕವಾಗುತ್ತದೆ. ಅದಕ್ಕಾಗಿ ವಿಗ್ರಹವನ್ನು ಪವಿತ್ರಗೊಳಿಸಿ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುತ್ತದೆ. ಪ್ರಾಣ ಎಂದರೆ ‘ಜೀವಶಕ್ತಿ, ಉಸಿರು, ಚೈತನ್ಯ’ ಮತ್ತು ಪ್ರತಿಷ್ಠೆ ಎಂದರೆ ‘ಸ್ಥಾಪನೆ’. ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಪೂಜಾ ವಿಧಾನ, ವೈದಿಕ ಸ್ತೋತ್ರಗಳ ಪಠಣ ನಡೆಸಲಾಗುವುದು. ಪ್ರಾಣ ಪ್ರತಿಷ್ಠೆ ಎಂದರೆ, ವಿಗ್ರಹಕ್ಕೆ ಜೀವಶಕ್ತಿ ತುಂಬಿ ದೈವಿಕವಾಗಿಸುವ ಆಚರಣೆ ಎನ್ನುತ್ತಾರೆ ಹಿರಿಯರು.

ಪ್ರಾಣ ಪ್ರತಿಷ್ಠೆ ಪ್ರಕ್ರಿಯೆಗೂ ಮೊದಲು ವಿಗ್ರಹದಲ್ಲಿ ದೈವಿಕ ಶಕ್ತಿ ಇರುವುದಿಲ್ಲ. ಪ್ರಾಣ ಪ್ರತಿಷ್ಠೆ ನಂತರವೇ ವಿಗ್ರಹಕ್ಕೆ ವಿಶೇಷ ಶಕ್ತಿ ಬರುತ್ತದೆ. ಬಳಿಕ ವಿಗ್ರಹವು ದೈವಿಕ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ. ಆಗ ದೇವಾಲಯಗಳಲ್ಲಿ ಭಕ್ತರು ವಿಗ್ರಹವನ್ನು ಪೂಜಿಸಬಹುದು ಎಂಬ ನಂಬಿಕೆಯಿದೆ.

 
 
 
 
 
 
 
 
 
 
 

Leave a Reply