“ತೊಟ್ಟಿಲಿನಲ್ಲಿ ಬಾಲಕೃಷ್ಣ”

ಭಾದ್ರಪದ ಮಾಸ ಕೃಷ್ಣ ಪಕ್ಷದ ಅಷ್ಟಮಿ ತಿಥಿ, ರೋಹಿಣಿ ನಕ್ಷತ್ರದಲ್ಲಿ ಒದಗುವ ಕೃಷ್ಣಾಷ್ಟಮಿಯನ್ನು ಈ ಬಾರಿ ಉಡುಪಿ ಕೃಷ್ಣಮಠದಲ್ಲಿ ಸರಳ ಹಾಗೂ ಸಂಪ್ರದಾಯಬದ್ಧವಾಗಿ ಆಚರಣೆ ಮಾಡಲಾಗುತ್ತಿದೆ. ಜನ್ಮಾಷ್ಟಮಿ ಪ್ರಯುಕ್ತ ಗುರುವಾರ ರಾಜಾಂಗಣದಲ್ಲಿ ನೂರರಷ್ಟು ವಿಪ್ರರು ವಿಷ್ಣು ಸಹಸ್ರನಾಮ ಸಹಿತ ವಿಷ್ಣು ಪಾರಾಯಣ ನಡೆಸುತ್ತಿದ್ದಂತೆ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಅವರು ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ ಮಾಡಿದರು.
ಕೃಷ್ಣನ ಜನ್ಮದಿನದ ಅಂಗವಾಗಿ ಕೃಷ್ಣಮಠದ ಒಳಾಂಗಣವನ್ನು ಪುಷ್ಪಾಲಂಕಾರ ಮಾಡಲಾಗಿತ್ತು. ಕಡೆಗೋಲ ಬಾಲಕೃಷ್ಣನಿಗೆ ಸುವರ್ಣ ತೊಟ್ಟಿಲಿನಲ್ಲಿ ಕೃಷ್ಣ  ಅಲಂಕಾರವನ್ನು ಮಾಡಲಾಗಿತ್ತು. ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥಶ್ರೀಪಾದರು ಶ್ರೀ ಕೃಷ್ಣ ದೇವರಿಗೆ “ತೊಟ್ಟಿಲಿನಲ್ಲಿ ಬಾಲಕೃಷ್ಣ” ಅಲಂಕಾರ ಮಾಡಿದರು. ಪರ್ಯಾಯ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಮಹಾಪೂಜೆಯನ್ನು ನೆರವೇರಿಸಿದರು.

ನವಗ್ರಹ ಕಿಂಡಿಯ ಬದಲು ಕನಕನ ಕಿಂಡಿಯಲ್ಲಿ ಕೃಷ್ಣ ದರ್ಶನ: ಪ್ರತೀ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಸಾವಿರಾರು ಮಂದಿ ಭಕ್ತರು ಉಡುಪಿ ಕೃಷ್ಣಮಠಕ್ಕೆ ಆಗಮಿಸಿ, ದೇವರ ದರ್ಶನ ಪಡೆಯುತ್ತಾರೆ. ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 20ರಿಂದ ಕೃಷ್ಣಮಠಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದಾಗಿ ಕೃಷ್ಣಾಷ್ಟಮಿಗೂ ಕೃಷ್ಣನ ದರ್ಶನವನ್ನು ನವಗ್ರಹ ಕಿಂಡಿಯ ಮೂಲಕ ಪಡೆಯಲು ಅವಕಾಶವಿಲ್ಲ. ಭಕ್ತರು ಕನಕನ ಕಿಂಡಿಯ ಮೂಲಕ ದೇವರ ದರ್ಶನ ಪಡೆದು ಕೈಮುಗಿಯುತ್ತಿದ್ದಾರೆ. ಪ್ರತಿ ಜನ್ಮಾಷ್ಟಮಿಯ ಆಕರ್ಷಣೆಯಾದ ಕೃಷ್ಣಮಠ ಸುತ್ತಮುತ್ತಲೂ ಓಡಾಡುವ ಮುದ್ದು ಕೃಷ್ಣ, ಯಶೋದೆ ಕೃಷ್ಣ ,ಬಾಲಕೃಷ್ಣರೂ ಈ ಬಾರಿ ಮನೆಯಲ್ಲಿಯೆ ಇದ್ದಾರೆ

 
 
 
 
 
 
 
 
 
 
 
 

Leave a Reply