ಸಂಗೀತ ಸಾರ್ವಭೌಮ ಎಸ್.ಪಿ.ಬಾಲಸುಬ್ರಹ್ಮಣ್ಯಂ~2

ದೇವರು ಅವರನ್ನು ಹಾಡುವುದಕ್ಕಾಗಿ ಸೃಷ್ಟಿಸಿರಬೇಕು ಎಂದು ನನಗೆ ಅನ್ನಿಸುತ್ತದೆ! 54 ವರ್ಷಗಳಿಂದ ಅವರ ಧ್ವನಿ, ಸ್ವರ ಸಂಪತ್ತು, ಸಾಹಿತ್ಯ ಪ್ರಜ್ಞೆ, ಸ್ವರ ವೈವಿಧ್ಯ ಒಂದಿಷ್ಟೂ ಮಸುಕಾಗಿಲ್ಲ! ಅವರೊಬ್ಬ ‘ಗಾಡ್ ಗಿವನ್ ಟ್ಯಾಲೆಂಟ್’ ಎಂದು ನನಗೆ ಅನ್ನಿಸುತ್ತದೆ! SPB ಎಂದರೆ ಇಂದಿಗೂ ಅದೇ ಮಾಧುರ್ಯ, ಅದೇ ಮಿಮಿಕ್ ವಾಯ್ಸ್, ಅದೇ ಸೂಪರ್ಬ್ ರೆಂಡರಿಂಗ್! ಯುಗಳ ಗೀತೆಗಳನ್ನು ಹಾಡುವುದರಲ್ಲಿ ಅವರಿಗೆ ಅವರೇ ಸಮ!
ಬಾಲು ಸರ್ ಜನಿಸಿದ್ದು ನೆಲ್ಲೂರು ಎಂಬ ನಗರದಲ್ಲಿ.  ಅವರ ತಂದೆ SP ಸಾಂಬ ಮೂರ್ತಿ ಅವರು ಹರಿಕಥೆಯ ಕಲಾವಿದ ಮತ್ತು ನಾಟಕದ ಪ್ರತಿಭೆ. ಅವರ ತಾಯಿ ಶಕುಂತಳಮ್ಮ ದಿನವೂ ಮನೆಯಲ್ಲಿ ಭಜನೆ ಹಾಡುವರು.  ಬಾಲುಗೆ ಇಬ್ಬರು ಸಹೋದರರು ಮತ್ತು ಐದು ಸಹೋದರಿಯರು. ಅವರ ತಂಗಿ SP ಶೈಲಜಾ ಭರತನಾಟ್ಯ ಕಲಾವಿದೆ ಮತ್ತು ಹಿನ್ನೆಲೆ ಗಾಯಕಿ. ಅವರು ಕನ್ನಡದಲ್ಲೂ ಬಹಳ ಹಾಡು ಹಾಡಿದ್ದಾರೆ. ಬಾಲು ಸರ್ ಅವರಿಗೆ ಬಾಲ್ಯದಿಂದಲೂ ಸಂಗೀತದ ಸೆಳೆತ. ಶಾಸ್ತ್ರೀಯ ಹೆಚ್ಚು ಕಲಿತವರಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ. ಆದರೆ ಶಂಕರಾಭರಣ, ಸಾಗರ ಸಂಗಂ, ಸ್ವಾತಿ ಮುತ್ಯಂ, ರುದ್ರ ವೀಣಾ ಸಿನೆಮಾದ ಹಾಡುಗಳನ್ನು ಕೇಳಿದಾಗ ವಿಸ್ಮಯ ಮೂಡುತ್ತದೆ! ‘ಬಾಲುಗೆ ಶಾಸ್ತ್ರೀಯ ಸಂಗೀತದ ಗಂಧ ಗಾಳಿ ಇಲ್ಲ’ ಎಂದು ಅಪಮಾನ ಮಾಡಿದ ಬಹಳ ದೊಡ್ಡ ಒಬ್ಬ ಸಂಗೀತ ದಿಗ್ಗಜ  ಅವರ ‘ ಶಂಕರಾಭರಣ ‘  ಸಿನೆಮಾದ ಹಾಡುಗಳನ್ನು ಕೇಳಿದ ಮೇಲೆ ಅವರ ಕ್ಷಮೆ ಯಾಚಿಸಿದ ಘಟನೆ ಕೂಡ ನಡೆದಿತ್ತು!
ಬಾಲು ಕಲಿಕೆಯಲ್ಲಿ ಮಹಾ ಬುದ್ಧಿವಂತರು. ಪ್ರತೀ ಸಲವೂ ತನ್ನ ತರಗತಿಯಲ್ಲಿ ಪ್ರಥಮ ಸ್ಥಾನವು ಕಟ್ಟಿಟ್ಟ ಬುತ್ತಿ!  ಅನಂತಪುರದ JNTU ಇಂಜಿನೀಯರಿಂಗ್ ಕಾಲೇಜಲ್ಲಿ ಮೆರಿಟ್ ಸೀಟ್ ಪಡೆದು ಓದುತ್ತಿದ್ದರು. ಅರ್ಧ ಓದು ಸಾಗುತ್ತಿದ್ದಾಗ ಟೈಫಾಯ್ಡ್  ಜ್ವರದ ಕಾರಣ ಒಂದೂವರೆ ತಿಂಗಳು ಕಾಲೇಜಿಗೆ ರಜೆ ಹಾಕಿದರು. ಅಲ್ಲಿಂದ ಓದುವ ಆಸಕ್ತಿ ಹೊರಟು ಹೋಯಿತು. ಕಾಲೇಜಿಗೆ ಗುಡ್ ಬೈ ಹೇಳಿ ಆರ್ಕೆಸ್ಟ್ರಾ ತಂಡವನ್ನು  ಕಟ್ಟಿದರು.
 ‘ನನಗೆ ಟೈಫಾಯ್ಡ್ ಬಂದದ್ದು ನಿಜವಾಗಿ ದೈವೇಚ್ಛೆ!’ ಎಂದು ಬಾಲು ಸರ್ ಒಮ್ಮೆ ಸಂದರ್ಶನದಲ್ಲಿ ಹೇಳಿದ್ದಾರೆ.  ಅವರ ಆರ್ಕೆಸ್ಟ್ರಾ ತಂಡವೋ ಅದು ಅದ್ಭುತ ಕಲಾವಿದರ ಸಂಗಮವೆ ಆಗಿತ್ತು. ಗಿಟಾರ್ ಮತ್ತು  ಹಾರ್ಮೋನಿಯಂ ವಾದನದಲ್ಲಿ ಇಳಯರಾಜ! ಕೀ ಬೋರ್ಡಿನಲ್ಲಿ ಬಹಳ ಪ್ರಸಿದ್ದ ಸಂಗೀತ ನಿರ್ದೇಶಕರಾದ ಗಂಗೈ ಅಮರನ್!  ಹಾರ್ಮೋನಿಯಂ ವಾದಕರಾಗಿ ಮತ್ತೊಂದು ದೈತ್ಯ ಪ್ರತಿಭೆ ಅನಿರುದ್ಧ! ಈ ತಂಡ ಕಟ್ಟಿಕೊಂಡು ಬಾಲು ಸರ್ ದಕ್ಷಿಣ ಭಾರತದಲ್ಲಿ ಸಾವಿರಾರು ಕಾರ್ಯಕ್ರಮ ನೀಡಿದ್ದರು. ಆ ಸಂದರ್ಭದಲ್ಲಿ ಬಾಲು ಸರ್ ಮಂಗಳೂರಿಗೆ ಕೂಡ ಬಂದು ಹಾಡಿದ್ದರು. ಆಗ ಇಳಯರಾಜ ಒಬ್ಬ ಅನಾಮಧೇಯ ಗಿಟಾರ್ ವಾದಕ ಆಗಿದ್ದರು!
ಒಂದು ರಾಜ್ಯ ಮಟ್ಟದ ಸಂಗೀತದ ಸ್ಪರ್ಧೆಯಲ್ಲಿ ಬಾಲು ಸರ್ ಪ್ರಥಮ ಸ್ಥಾನ ಗೆದ್ದರು. ಆ ದಿನ ನಿರ್ಣಾಯಕರಾಗಿ ಇದ್ದವರು The Legends  ಘಂಟಸಾಲ ಮತ್ತು ಕೋದಂಡ ಪಾಣಿ! ಅಂದು ಬಹುಮಾನ ವಿತರಣೆ ಮಾಡಿದ  ಕೋದಂಡಪಾಣಿ ಅವರು ಬಾಲು ಸರ್ ಬೆನ್ನು ತಟ್ಟಿದ್ದು ಮಾತ್ರವಲ್ಲ “ಹುಡುಗ, ಚಂದ ಹಾಡ್ತೀಯಾ. ನನ್ನ ಸಂಗೀತ ನಿರ್ದೇಶನದ ಮರ್ಯಾದಾ ರಾಮಣ್ಣ ಸಿನೆಮಾ ಬರ್ತಿದೆ. ಒಂದು ಹಾಡು ಹಾಡ್ತೀಯ?” ಎಂದು ಕೇಳಿದಾಗ ಬಾಲುಗೆ ನಂಬಲು ಕಷ್ಟ ಆಯಿತು. “ಮೊದಲ ಹಾಡನ್ನು ಕಣ್ಣು ಮುಚ್ಚಿ ಒಂದೇ ಉಸಿರಲ್ಲಿ ಹಾಡಿ ಮುಗಿಸಿದೆ. ಆದರೆ ಕೊದಂಡಪಾಣಿ ಸರ್ ಗುಡ್ ಹೇಳುವ ಮೊದಲು ನಾನು ನರ್ವಸ್ ಆಗಿದ್ದೆ ” ಎಂದು ಅವರು ಒಂದು ಸಂದರ್ಶನದಲ್ಲಿ  ಹೇಳಿದ್ದಾರೆ.
       ಅಂದು ಒಬ್ಬ ಲೆಜೆಂಡ್ ಸಿಂಗರ್ ಹುಟ್ಟಿದ್ದು ಸ್ವತಃ ಬಾಲುಗೆ ಗೊತ್ತಿರಲಿಲ್ಲ. A Hilarious talented singer was born on that day! ಆದರೆ SP ಎಂಬ ಮಹೊನ್ನತ ಪ್ರತಿಭೆಯ ಬದುಕಿನಲ್ಲಿ ಒಂದು  ಮಹಾತಿರುವು ಬಂದೇ ಬಿಟ್ಟಿತು. ಅದು1980ರ ತೆಲುಗು ಸಿನೆಮಾವಾದ ಶಂಕರಾಭರಣ! ಕೆ. ವಿ. ಮಹಾದೇವನ್ ಸಂಗೀತ ನಿರ್ದೇಶನ ಮಾಡಿದ ಆ ಸಿನೆಮಾದ ಹಾಡುಗಳನ್ನು ಸಂಗೀತ ದಿಗ್ಗಜರಾದ ಬಾಲ ಮುರಳಿಕೃಷ್ಣ ಹಾಡಬೇಕು ಎಂಬ ತೀರ್ಮಾನ ಆಗಿತ್ತು! ಆದರೆ  ಅವರ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಬಾಲು ಸರ್ ಅವರ ಕಾಲ ಬುಡಕ್ಕೆ ಅವಕಾಶ ಬಂದಿತು. ಎಂಥೆಂಥ ಅದ್ಭುತ ಹಾಡುಗಳು! ಶಂಕರಾ.., ರಾಗಂ ತಾನಮ್ ಪಲ್ಲವಿ, ದೊರಕುನಾ…ಎಲ್ಲವೂ ಸೂಪರ್ ಹಿಟ್! ಒಬ್ಬ ಸಂಗೀತ ಗುರುವಿನ ಬದುಕಿನ ಕಥೆ ಅದು. ಬಾಲುಗೆ ಸಂಗೀತ ಶಿಕ್ಷಣ ಇಲ್ಲ ಎಂದು ಹೀಗಳೆದವರಿಗೆ ಝಾಡಿಸಿ ಝಾಡಿಸಿ ಒದ್ದ ಹಾಗೆ ಅದ್ಭುತವಾಗಿ ಅವರು ಆ ಹಾಡುಗಳನ್ನು ಹಾಡಿದ್ದರು!  ಬಾಲು ಸರ್ ಅವರಿಗೆ ಆ ಸಿನೆಮಾದ ಹಾಡಿಗೆ ರಾಷ್ಟ್ರ ಪ್ರಶಸ್ತಿ ಬಂದಿತು!
ಮುಂದೆ ಬಾಲು ಸರ್ ಅವರ ಪ್ರತೀ ಒಂದು ರಸಮಂಜರಿಯ ವೇದಿಕೆಯಲ್ಲಿ ಮಧ್ಯಮಾವತಿ ರಾಗದ “ಶಂಕರಾ ನಾದ ಶರೀರ ಪರಾ” ಹಾಡಲು ಡಿಮ್ಯಾಂಡ್ ಬರುತ್ತಿತ್ತು ಮತ್ತು ಆ ಹಾಡಿಗೆ ಅಮರತ್ವದ ಸ್ಪರ್ಶವನ್ನು ಅವರು ನೀಡುತ್ತಿದ್ದರು! ಮುಂದೆ ಇಳಯರಾಜ ಸಂಗೀತ ನಿರ್ದೇಶಕ ಆಗಿ ತಮಿಳಿಗೆ ಬಂದ ನಂತರ ಬಾಲು ಸಂಗೀತ ಸರಸ್ವತಿಯ ವರಪುತ್ರರೇ  ಆದರು. ಸಾಗರ ಸಂಗಮ ( 1983), ಪಲ್ಲವಿ ಅನುಪಲ್ಲವಿ( 1983) ಸ್ವಾತಿ ಮುತ್ಯಂ ( 1986) ರುದ್ರ ವೀಣಾ (1988), ಅಗ್ನಿ ನಕ್ಷತ್ರ (1989) ಇವುಗಳು ಬಾಲು ಸರ್ ಮತ್ತು ಇಳಯರಾಜ ಅವರ ಕಾಂಬಿನೇಶನ್ ಪಡೆದ ಅದ್ಭುತ ಸಿನೆಮಾಗಳು! ಇಳಯರಾಜ ಎಂಬ ಮಹೋನ್ನತ ಶಿಲ್ಪಿ ಬಾಲು ಸರ್ ಎಂಬ ಅದ್ಭುತ ಶಿಲ್ಪವನ್ನು ಕಡೆದು ನಿಲ್ಲಿಸಿದ್ದರು!
ಎಂಬತ್ತರ ದಶಕದಲ್ಲಿ  ತಮಿಳು ಮತ್ತು ಕನ್ನಡ ಸಿನೆಮಾ ರಂಗದಲ್ಲಿ ಇಬ್ಬರು ಮಹಾನ್ ಸಂಗೀತ ನಿರ್ದೇಶಕರ ಉದಯ ಆಗಿತ್ತು! ಮತ್ತು ಅವರು ಬಾಲು  ಅವರಿಗಾಗಿ  ಕಾಯುತ್ತಿದ್ದರು.. ( ಮುಂದುವರೆಯುತ್ತದೆ)
 
 
 
 
 
 
 
 
 
 
 

Leave a Reply