ದ್ವೇಷ ಮತ್ತು ಸುಳ್ಳಿನ ರಾಜಕೀಯದ ವಿರುದ್ಧ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲೆ ರಾಜ್ಯ ವ್ಯಾಪಿ ಅಭಿಯಾನ

ನಮ್ಮ ದೇಶ ಬಹು ಸಂಸ್ಕೃತಿಯ, ಬಹುಭಾಷೆ, ವಿಚಾರ ಮತ್ತು ಹಲವು ಧಾರ್ಮಿಕ ಹಿನ್ನಲೆಯುಳ್ಳ ವೈವಿದ್ಯಮಯ ದೇಶ. ಈ ವೈವಿಧ್ಯಮಯ ಶಕ್ತಿಯು ನಮ್ಮ ದೇಶವನ್ನು ಅಭಿವ್ರದ್ದಿಯೆಡೆಗೆ ಕೊಂಡೊಯ್ಯುವಲ್ಲಿ ಬಹಳ ಮುಖ್ಯ ಪಾತ್ರವಹಿಸಿದೆ. ಸ್ವಾತಂತ್ರ್ಯ , ಸಮಾನತೆ, ಪ್ರೀತಿ, ಭ್ರಾತೃತ್ವ ಮತ್ತು ಸಹೋದರತ್ವದ ಮೂಲಕ ಮಾತ್ರ ಒಂದು ದೇಶ ಪ್ರಜಾಪ್ರಭುತ್ವ ದೇಶವಾಗಿ ಉಳಿಯಲು ಸಾಧ್ಯ. ಇದರ ಹೊರತು ಯಾವುದೇ ಪ್ರಜಾಪ್ರಭುತ್ವ ದೇಶವಾಗಿ ಉಳಿಯಲು ಸಾಧ್ಯವಿಲ್ಲ. ಗಾಂಧೀಜಿ, ಅಂಬೇಡ್ಕರ್ ಮುಂತಾದವರ ಹೋರಾಟದ ಉದ್ದೇಶವು ಇದೇ ಆಗಿತ್ತು. ನಮ್ಮ ಸಂವಿಧಾನದ ಮೂಲ ಆಶಯವೂ ಇದೇ ಆಗಿದೆ.

 ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಜನರ ನಡುವೆ ಧರ್ಮದ ಹೆಸರಲ್ಲಿ ದ್ವೇಷ ಹುಟ್ಟಿಸುವ ಮತ್ತು ಸುಳ್ಳು ಸುದ್ದಿಗಳನ್ನು ಹರಡಿಸಿ ಜನರ ನೆಮ್ಮದಿ ಕೆಡಿಸುವ ಕಾರ್ಯ ಎಗ್ಗಿಲ್ಲದೆ ನಿರಂತರ ನಡೆಯುತ್ತಿದೆ. ಕೆಲವು ಸ್ವಾರ್ಥ ರಾಜಕಾರಣಿಗಳು ತಮ್ಮ ಅಧಿಕಾರವನ್ನು ಭದ್ರ ಪಡಿಸಲು ಧ್ವೇಷವನ್ನೇ ಮೆಟ್ಟಲನ್ನಾಗಿಸಿ ಜನರ ನಡುವೆ ಕಿಚ್ಚು ಹಚ್ಚುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ದೇಶದಲ್ಲಿ ಮತ್ತು ರಾಜ್ಯದಲ್ಲಿ ಧಾರಾಳ ಉದಾಹರಣೆಗಳಿವೆ*

 ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ನಮ್ಮ ಕನ್ನಡನಾಡಿನಲ್ಲಿ ಪ್ರಚೋದನಕಾರಿ ಭಾಷಣಗಳು ಇತ್ತೀಚೆಗೆ ವ್ಯಾಪಕವಾಗಿ ನಡೆಯುತ್ತಿದೆ. ಇದರ ಪರಿಣಾಮವಾಗಿ ಜಾತಿ ನಿಂದನೆ, ಜಾತಿ ಸಂಘರ್ಷ, ಕೋಮುಗಲಭೆ ನಡೆದು ಅಮಾಯಕರ ಕೊಲೆಯಲ್ಲಿ ಮುಕ್ತಾಯವಾಗುತ್ತಿದೆ. ಇದು ರಾಜ್ಯದ ಸೌಹಾರ್ದ ವಾತಾವರಣ ಮತ್ತು ಅಭಿವೃದ್ಧಿಗೆ ಮಾರಕ ಎಂಬುದು ನಿಸ್ಸಂಶಯ. ಇದು ಎಲ್ಲಾ ರೀತಿಯಲ್ಲಿಯೂ ಹಾನಿಕಾರಕ. ಸಮಾಜದಲ್ಲಿ ಅಶಾಂತಿಯ ವಾತಾವರಣ ಇದ್ದರೆ ಕನ್ನಡಿಗರು ಒಟ್ಟಾಗಿ ನೆಮ್ಮದಿಯಿಂದ ಬದುಕಲು ಸಾಧ್ಯವೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪರಿಸ್ಥಿತಿಯ ಗಾಂಭೀರ್ಯತೆ ಮನಗಂಡು ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ನೆಲೆಯೂರಲಿ ಎಂಬ ಸದಾಶಯದೊಂದಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಘಟಕವು 01-11-2023 ರಿಂದ 10-11-2023 ವರೆಗೆ ದ್ವೇಷ ಅಳಿಸೋಣ ದೇಶ ಉಳಿಸೋಣ ಎಂಬ ಶೀರ್ಷಿಕೆಯಲ್ಲಿ ಹತ್ತು ದಿನಗಳ ಅಭಿಯಾನವನ್ನು ಹಮ್ಮಿಕೊಂಡಿದೆ.

 ಈ ಅಭಿಯಾನದ ಉದ್ದೇಶ ರಾಜ್ಯದ ನಾಗರಿಕರಲ್ಲಿ ದ್ವೇಷ ರಾಜಕೀಯದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು, ಅಲ್ಪ ಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕುಗ್ಗುತ್ತಿರುವ ರಾಜಕೀಯ ಪ್ರತಿನಿಧಿತ್ವ ಮತ್ತು ಅದರ ಪರಿಣಾಮಗಳ ಬಗ್ಗೆ ಜಾಗ್ರತಿ ಮೂಡಿಸುವುದು, ಪ್ರಸ್ತುತ ಸನ್ನಿವೇಶದಲ್ಲಿ ಮೌಲ್ಯಧಾರಿತ ರಾಜಕೀಯದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಮತ್ತು ಪ್ರೀತಿ, ಶಾಂತಿ ಸಹೋದರತೆ ಬಯಸುವ ನಾಗರಿಕರಿಗೆ ಒಗ್ಗೂಡಿಸಿ ದ್ವೇಷ ಮತ್ತು ಸುಳ್ಳಿನ ರಾಜಕೀಯದ ವಿರುದ್ಧ ದ್ವನಿ ಎತ್ತಲು ಪ್ರೇರೇಪಿಸುವುದಾಗಿದೆ.

  ನವೆಂಬರ್ ಒಂದರಂದು ರಾಜ್ಯ ಕಚೇರಿ ಮತ್ತು ರಾಜ್ಯದ ಎಲ್ಲ ಘಟಕಗಳಲ್ಲಿ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣದ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಅಭಿಯಾನದ ಸಂಧರ್ಭದಲ್ಲಿ ಬಿತ್ತಿಪತ್ರ ಬಿಡುಗಡೆ, ಪತ್ರಿಕಾಗೋಷ್ಠಿ, ಅಭಿಯಾನದ ಕುರಿತು ವೀಡಿಯೋ ಬಿಡುಗಡೆ, ವಿಚಾರಗೋಷ್ಠಿ, ಕಾರ್ನರ್ ಮೀಟಿಂಗ್, ಮಾನವ ಸರಪಳಿ, ಸಾರ್ವಜನಿಕ ಸಭೆ, ಜಾಥಾ, ಬೈಕ್ ರ‍್ಯಾಲಿ, ರಾಷ್ಟ್ರಪತಿಗಳಿಗೆ ಮನವಿ, ಮುಂತಾದ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ.

 ಉಡುಪಿ ಜಿಲ್ಲೆಯಲ್ಲೂ ವಿಚಾರಗೋಷ್ಠಿ, ಕಾರ್ನರ್ ಮೀಟಿಂಗ್, ಮಾನವ ಸರಪಳಿ, ಸಾರ್ವಜನಿಕ ಸಭೆ, ರಾಷ್ಟಪತಿಗಳಿಗೆ ಮನವಿ, ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನಾಡಿನ ಸಮಸ್ತ ನಾಗರಿಕರು, ಮಾಧ್ಯಮ ಮಿತ್ರರು ನಮ್ಮ ಜೊತೆ ಕೈಜೋಡಿಸಿ “ದ್ವೇಷ ಅಳಿಸೋಣ ದೇಶ ಉಳಿಸೋಣ” ಅಭಿಯಾನದ ಯಶಸ್ಸಿನಲ್ಲಿ ಭಾಗಿಯಾಗಿ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ನೆರವಾಗಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ.

ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಪತ್ರಿಕಾಗೋಷ್ಟಿ ನಡೆಸಿ ಅಭಿಯಾನದ ಪೋಷ್ಟರ್ ಬಿಡುಗೆಡಗೊಳಿಸಿದರು ,ಪಕ್ಷದ ಇತರ ಸದಸ್ಯರುಗಳಾದ ರಿಯಾಝ್ ಅಹಮ್ಮದ್ ಕುಕ್ಕಿಕಟ್ಟೆ ,ಅನ್ವರ್ ಅಲಿ ಕಾಪು ,ಶಹಜಹಾನ್ ತೋನ್ಸೆ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply