ಅಧಿಕಾರ ಕೈತಪ್ಪಿದ ಹತಾಶೆಯಿಂದ ಸೊರಕೆಯವರು ಆರೋಪ ಮಾಡುತ್ತಿರುವುದು ~ ಸಂತೋಷ್ ಕುಮಾರ್

ಕಾಪು: ಪಡುಬಿದ್ರಿ ಪೊಲೀಸ್ ಠಾಣೆ ಪಿಎಸ್‌ಐ ಸುಬ್ಬಣ್ಣ ಅವರ ವರ್ಗಾವಣೆ ವಿಷಯವಾಗಿ ಮಾಜಿ ಸಚಿವ, ಕಾಪು ಮಾಜಿ ಶಾಸಕ ಶ್ರೀ ವಿನಯ್ ಕುಮಾರ್ ಸೊರಕೆಯವರು, ‘ಮಾಮೂಲು ಕೊಡಲು ನಿರಾಕರಿಸಿದ ಕಾರಣಕ್ಕೆ ಪಿಎಸ್‌ಐ ವರ್ಗಾವಣೆ ಮಾಡಲಾಗಿದೆ’ ಎಂದು ಕಾಪು ಶಾಸಕರಾದ ಲಾಲಾಜಿ ಮೆಂಡನ್  ಅವರ ವಿರುದ್ಧ ವೃಥಾ ಆರೋಪಿಸಿರುವುದು ಪತ್ರಿಕೆಗಳಲ್ಲಿ ವರದಿಯಾಗಿ ರುತ್ತದೆ. 
ಇದು ಸಂಪೂರ್ಣ ಸುಳ್ಳು ಹೇಳಿಕೆಯಾಗಿದೆ. ಅಧಿಕಾರ ಕೈತಪ್ಪಿದ ಹತಾಶೆಯಿಂದ ಹಾಗೂ ಕ್ಷೇತ್ರ ದಲ್ಲಿ ಕಾಪು ಶಾಸಕರಾದ ಶ್ರೀ ಲಾಲಾಜಿ ಆರ್ ಮೆಂಡನ್ ಅವರ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಅವರ ಸರಳ, ಪರಿಶುದ್ಧ ವ್ಯಕ್ತಿತ್ವದಿಂದ ಪಡೆದುಕೊಂಡ ಜನಪ್ರಿಯತೆಯನ್ನು ಸಹಿಸಲಾಗದೆ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಂಡು ಸೊರಕೆಯವರು ಈ ಸುಳ್ಳು ಹೇಳಿಕೆಯನ್ನು ನೀಡಿ ರುತ್ತಾರೆ ಎಂದು ಹಿಂದುಳಿದ ವರ್ಗಗಳ ಮೋರ್ಚಾ, ಕಾಪು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ಮೂಡುಬೆಳ್ಳೆ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್ ಅವರು ಕೊರೋನಾ ಸಂದಿಗ್ಧದ ನಡುವೆಯೂ ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಆಯಾಮಗಳಲ್ಲಿ ಶ್ರಮಿಸುತ್ತಿದ್ದಾರೆ. ಕಾಪು ಕ್ಷೇತ್ರ ಮಾದರಿ ಕ್ಷೇತ್ರವಾಗಿ ರೂಪುಗೊಳ್ಳುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದ ಹೆಚ್ಚಿನ ಅನುದಾನವನ್ನು ಪಡೆದು ಸತತ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. 

ಈ ನಡುವೆ ವಿನಯಕುಮಾರ್ ಸೊರಕೆಯವರು ಕಾಮು ಮಿನಿ ವಿಧಾನ ಸೌಧ ಶಿಲಾನ್ಯಾಸ ಹಾಗೂ ಬೆಳಪು ತಾಂತ್ರಿಕ ಶಿಕ್ಷಣ ಸಂಸ್ಥೆಯ ಉದ್ಘಾಟನೆ ಸಂದರ್ಭ ಹೈಡ್ರಾಮಾ ಸೃಷ್ಟಿಸಿ, ಶಾಸಕರ ಸಾಧನೆಗೆ ಮಸಿ ಬಳಿಯುವ ವ್ಯರ್ಥ ಪ್ರಯತ್ನ ಮಾಡಿ ನಗೆಪಾಟಲಿಗೀಡಾಗಿರುವುದನ್ನು ಕ್ಷೇತ್ರದ ಜನರು ಇನ್ನೂ ಮರೆತಿರುವುದಿಲ್ಲ ಎಂದು ಅವರು ತಿಳಿಸಿದರು.

ಸೊರಕೆಯವರು, ಶಾಸಕ, ಸಚಿವರಾಗಿದ್ದಾಗ ಸಂಪೂರ್ಣ ವಿಫಲ ಆಡಳಿತವನ್ನು ನೀಡಿದ್ದು, ಯಾವುದೇ ದೂರದೃಷ್ಟಿ, ಪೂರಕ ಅನುದಾನ ಇಲ್ಲದೆ ಕೇವಲ ಪ್ರಚಾರಕ್ಕಾಗಿ ಯೋಜನೆಗಳನ್ನು ಶಿಫಾರಸು ಮಾಡಿದ್ದು, ಈಗಿನ ಮಾನ್ಯ ಶಾಸಕರಾದ ಶ್ರೀ ಲಾಲಾಜಿ ಆರ್. ಮೆಂಡನ್ ರವರು ಈ ಯೋಜನೆಗಳನ್ನು ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರದ ಮೂಲಕ ಅನುಷ್ಠಾನಿಸುವ ಹಾಗೂ ಹತ್ತು ಹಲವು ಶಾಶ್ವತ ಯೋಜನೆಗಳನ್ನು ಅನುಷ್ಠಾನಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 

ಆದರೆ ವಿನಯ ಕುಮಾರ್ ಸೊರಕೆಯವರು ಬರೀ ಪತ್ರದ ಮೂಲಕ ಶಿಫಾರಸು ಮಾಡಿದ ಯೋಜನೆಗಳನ್ನು ತಾನೇ ಮಾಡಿದಂತೆ ಬಿಂಬಿಸುತ್ತಿರುವುದು ವಿಪರ್ಯಾಸ, ಕ್ಷೇತ್ರದ ಅಭಿವೃದ್ಧಿ ಯನ್ನು ಸಹಿಸದೆ ಸೊರಕೆಯವರು ಶಾಸಕರ ನೈತಿಕ ಧೈರ್ಯವನ್ನು ಕುಗ್ಗಿಸುವ ವಿಫಲ ಪ್ರಯತ್ನ ನಡೆಸುವಂಥ ಕೀಳು ಮಟ್ಟಕ್ಕಿಳಿದಿರುವುದು ಎಲ್ಲರೂ ತನ್ನಂತೆಯೇ ಇರುತ್ತಾರೆ ಎಂದು ಭಾವಿಸಿರುವ ಅವರ ಮನಸ್ಥಿತಿಯ ಸೂಚಕವಾಗಿದೆ.

ಕಾಪು ಕ್ಷೇತ್ರದ ಜನತೆ ಶಾಸಕರೊಂದಿಗೆ ಸದಾ ಇದ್ದಾರೆ ಎಂಬುದನ್ನು ಈ ಮೂಲಕ ವಿನಯ ಕುಮಾರ್‌ ಸೊರಕೆಯವರ ಗಮನಕ್ಕೆ ತರಲು ಬಯಸುತ್ತೇವೆ ಎಂದು ಹೇಳಿಕೆ ನೀಡಿದರು.

 
 
 
 
 
 
 
 
 
 
 

Leave a Reply