ಪರ್ಸೀಡ್ಸ್ ಉಲ್ಕಾವೃಷ್ಟಿ

ಹವ್ಯಾಸಿ ಖಗೋಳ ತಜ್ಞರಿಗೆ ಹಾಗೂ ಖಗೋಳಾಸಕ್ತರಿಗೆ ಆಗಸ್ಟ್ ತಿಂಗಳು ವರದಾನದಂತಾಗಿದೆ. ಏಕೆಂದರೆ ಈ ತಿಂಗಳಲ್ಲಿ ನಮ್ಮ ಸೌರಮಂಡಲದ ಎರಡು ಅತೀ ದೊಡ್ಡ ಗ್ರಹಗಳು ವಿಯುತಿಯನ್ನು ತಲುಪುತ್ತವೆ ಹಾಗೂ ವರ್ಷದ ಅತ್ಯತ್ತಮ ಉಲ್ಕಾವೃಷ್ಟಿ ಎನಿಸಿಕೊಳ್ಳುವ ಪರ್ಸೀಡ್ ಉಲ್ಕಾವೃಷ್ಟಿ ಗೋಚರಿಸುತ್ತದೆ.
1992 ರಲ್ಲಿ ಸ್ವಿಫ್ಟ್-ಟಟ್ಟಲ್ ಧೂಮಕೇತು ಸೂರ್ಯನನ್ನು ಸಮೀಪಿಸಿದಾಗ, ಚಲಿಸಿದ ಪಥದಲ್ಲಿ ಧೂಮಕೇತುವಿನ ಅವಶೇಷಗಳು ಉಳಿದುಕೊಂಡಿದ್ದು, ಭೂಮಿಯು ಸೂರ್ಯನ ಸುತ್ತ ಸುತ್ತುವಾಗ, ಈ ಅವಶೇಷಗಳು ಭೂಮಿಯ ಚಲನೆಗೆ ಎದುರಾದಾಗ, ಅವು ಭೂಮಿಯ ವಾತಾವರಣವನ್ನು ತಲುಪುತ್ತದೆ. ಇದು ನಮಗೆ ಬೆಳಕಿನ ರೇಖೆಯು ಹಾದು ಹೋದಂತೆ ಕಾಣುತ್ತದೆ, ಇದನ್ನು ನಾವು ಉಲ್ಕಾಪಾತ ಎಂದು ಕರೆಯುತ್ತೇವೆ.
 ಯಾವಾಗ, ಕಡಿಮೆ ಸಮಯದಲ್ಲಿ ಹೆಚ್ಚು ಉಲ್ಕೆಗಳು ಕಾಣಿಸಿಕೊಳ್ಳುತ್ತದೆಯೋ ಆಗ ಇದನ್ನು ನಾವು ಉಲ್ಕಾವೃಷ್ಟಿ ಅಥವಾ ಉಲ್ಕಾಪಾತ ಎಂದು ಕರೆಯುತ್ತೇವೆ. ಪರ್ಸೀಡ್ ಉಲ್ಕಾವೃಷ್ಟಿಯಲ್ಲಿ ಶುಭ್ರ ಆಕಾಶದಲ್ಲಿ ಗಂಟೆಗೆ ಗರಿಷ್ಠ 15೦ ಉಲ್ಕೆಗಳನ್ನು ಕಾಣಬಹುದು. ಆದರೆ ಈ ವರ್ಷ ಗಂಟೆಗೆ ಸುಮಾರು 6೦ ಉಲ್ಕೆಗಳನ್ನು ನಾವು ವೀಕ್ಷಿಸಬಹುದು. ಒಂದು ನಿರ್ದಿಷ್ಟ ಬಿಂದುವಿನಿಂದ ಈ ಉಲ್ಕೆಗಳು ಬರುವಂತೆ ಕಾಣುವುದಿಲ್ಲ ಬದಲಾಗಿ, ರಾತ್ರಿ ಆಕಾಶದಾದ್ಯಂತ ಗೋಚರಿಸುತ್ತದೆ. 
ಮಧ್ಯ ರಾತ್ರಿಯ ನಂತರ ಪಾರ್ಥ ನಕ್ಷತ್ರ ಪುಂಜವು, ಈಶಾನ್ಯ ದಿಕ್ಕಿನಲ್ಲಿ ಗೋಚರಿಸುವುದರಿಂದ , ಈ ಉಲ್ಕಾವೃಷ್ಟಿಯನ್ನು ವೀಕ್ಷಿಸಲು ಈ ಸಮಯ ಅತೀ ಉತ್ತಮ ವಾಗಿರುತ್ತದೆ. ಈ ಎಲ್ಲ ಉಲ್ಕೆ ಗಳು ಪಾರ್ಥ ನಕ್ಷತ್ರಪುಂಜದಿಂದ ಉದಯಿಸಿದಂತೆ ಗೋಚರಿಸುತ್ತದೆ.
ಈಶಾನ್ಯ ದಿಕ್ಕಿನಲ್ಲಿ ಪ್ರಕಾಶಮಾನ ನಕ್ಷತ್ರವಾದ ಬ್ರಹ್ಮಹೃದಯವು ಮುಂಜಾನೆ ಸುಮಾರು 2 ಗಂಟೆಯ ಹೊತ್ತಿಗೆ ಉದಯಿಸುತ್ತದೆ, ಅದರ ಮೇಲ್ಭಾಗದಲ್ಲಿ ಪಾರ್ಥ ನಕ್ಷತ್ರಪುಂಜವಿರುವುದರಿಂದ ಈ ಸಮಯವು ಪಾರ್ಥ ನಕ್ಷತ್ರ ಪುಂಜವನ್ನು ಗುರುತಿಸಲು ಅತೀ ಸೂಕ್ತ ವೇಳೆಯಾಗಿರುತ್ತದೆ.
ಆಗಸ್ಟ್ 12 ರಂದು ಪಾರ್ಥ ನಕ್ಷತ್ರಪುಂಜವು ಬೆಳಗಿನ ಜಾವ ಆಕಾಶದ ಎತ್ತರಕ್ಕೆ ತಲುಪುವು ದರಿಂದ, ಬೇಗನೆ ಎದ್ದು ಈ ಉಲ್ಕಾವೃಷ್ಟಿಯನ್ನು ನೋಡಿ ಸಂಭ್ರಮಿಸಬಹುದು. ಪಾರ್ಥ ನಕ್ಷತ್ರ ಪುಂಜವನ್ನು ಗುರುತಿಸಲು ಇನ್ನೊಂದು ಮಾರ್ಗವಿದೆ.
ಉತ್ತರ ದಿಕ್ಕಿನಲ್ಲಿ ಕುಂತಿ ನಕ್ಷತ್ರಪುಂಜದ 5 ನಕ್ಷತ್ರಗಳಿಂದಾದ ಆಂಗ್ಲ ಭಾಷೆಯ w ಆಕಾರ ಹಾಗೂ ಪೂರ್ವ ಆಕಾಶದಲ್ಲಿ ಗೋಚರಿಸುವ ಕೆಂಪು ನಕ್ಷತ್ರವನ್ನು ಹೊಂದಿರುವ ವೃಷಭ ರಾಶಿಯಿಂದ ರೂಪುಗೊಂಡ A ಆಕಾರದ ಮಧ್ಯದಲ್ಲಿ ಪಾರ್ಥ ನಕ್ಷತ್ರಪುಂಜವನ್ನು ಗುರುತಿಸಬಹುದು.

ಈ ತಿಂಗಳಿನ 2 ನೇ ತಾರೀಕು ಶನಿಗ್ರಹವು ವಿಯುತಿಯನ್ನು ತಲುಪಿದ್ದು, 20 ನೇ ತಾರೀಕಿನಂದು ಗುರುಗ್ರಹವು ವಿಯುತಿಯನ್ನು ತಲುಪುತ್ತದೆ. ಗ್ರಹದ ವಿಯುತಿಯೆಂದರೆ, ಗ್ರಹವು ಸೂರ್ಯನ ನೇರ ವಿರುದ್ಧ ದಿಕ್ಕಿನಲ್ಲಿ ಇರುತ್ತದೆ. ಗ್ರಹದ ವಿಯುತಿಯ ಸಮಯದಲ್ಲಿ, ಸೂರ್ಯ ಭೂಮಿ ಹಾಗೂ ಗ್ರಹ ಗಳು ಸರಿ ಸುಮಾರು ಒಂದೇ ರೇಖೆಯಲ್ಲಿ ಇರುವುದರಿಂದ ಹುಣ್ಣಿಮೆಯ ಚಂದ್ರನಂತೆ ಗ್ರಹವು ಸಂಪೂರ್ಣವಾಗಿ ಬೆಳಗುತ್ತದೆ.

ರಾತ್ರಿಯ ವೇಳೆಯಿರುವ ಭೂಮಿಯ ಭಾಗಗಳಿಗೆ ಗ್ರಹಗಳು ಸೂರ್ಯ ನ ನೇರ ವಿರುದ್ಧ ದಿಕ್ಕಿನಲ್ಲಿರುವುದರಿಂದ, ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಈ ಗ್ರಹಗಳು ಗೋಚರಿಸುತ್ತವೆ.
ಶನಿ ಗ್ರಹವು ವಿಯುತಿಯನ್ನು ತಲುಪಿದ್ದು, ಗುರು ಗ್ರಹವು ಇದೇ ತಿಂಗಳು ವಿಯುತಿಯನ್ನು ತಲುಪಲಿರುವುದರಿಂದ, ಈ ತಿಂಗಳು ಸೂರ್ಯಾಸ್ತವಾದ ಸ್ವಲ್ಪ ಸಮಯದಲ್ಲೇ, ಇವೆರಡೂ ಗ್ರಹಗಳು ಪ್ರಕಾಶಮಾನವಾಗಿ ಹಾಗೂ ಭೂಮಿಗೆ ಹತ್ತಿರದಲ್ಲಿ ಗೋಚರಿಸುತ್ತವೆ ಮತ್ತು ಮಧ್ಯರಾತ್ರಿ ಆಕಾಶದಲ್ಲಿ ಎತ್ತರದ ಸ್ಥಾನಕ್ಕೆ ತಲುಪಿ ನಂತರ ಸೂರ್ಯ ಪೂರ್ವದಲ್ಲಿ ಉದಯಿಸಿದಂತೆ ಇವೆರಡು ಗ್ರಹಗಳು ಪಶ್ಚಿಮದಲ್ಲಿ ಮುಳುಗುತ್ತವೆ.
ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು ಎಲ್ಲಾ ಖಗೋಳಾಸಕ್ತರು ಪರ್ಸೀಡ್ ಉಲ್ಕಾವೃಷ್ಟಿಯನ್ನು ಹಾಗೂ ಎರಡು ಗ್ರಹಗಳ ವಿಯುತಿಯನ್ನು ನೋಡಿ ಆನಂದಿಸಲಿ ಎಂದು ಆಶಿಸುತ್ತದೆ.
 
 
 
 
 
 
 
 
 
 
 

Leave a Reply