ಮುಖ್ಯಮಂತ್ರಿ ಚಂದ್ರು ಆಮ್ ಆದ್ಮಿ ಪಕ್ಷದ ನೂತನ ರಾಜ್ಯಾಧ್ಯಕ್ಷ!

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದ ಸಾಧನೆ ಮಾಡದೇ ಇರುವುದು ಹಾಗೂ ಮುಂಬರುವ ವಿವಿಧ ಸ್ಥಳೀಯ ಸಂಸ್ಥೆಗಳು, ಲೋಕಸಭಾ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವ ಉದ್ದೇಶದಿಂದ ಆಮ್‌ ಆದ್ಮಿ ಪಕ್ಷದ ರಾಜ್ಯ ಸಂಘಟನೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ.

ಹಿರಿಯ ನಟ ಹಾಗೂ ಪಕ್ಷದ ಮುಖಂಡ ಮುಖ್ಯಮಂತ್ರಿ ಚಂದ್ರು ಅವರನ್ನು ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇದುವರೆಗೆ ರಾಜ್ಯಾಧ್ಯಕ್ಷರಾಗಿದ್ದ ಪೃಥ್ವಿ ರೆಡ್ಡಿ ಅವರಿಗೆ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ನೀಡಲಾಗಿದೆ.

ಈ ಸಂಬಂಧ ಬುಧವಾರ ರಾತ್ರಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಡಾ.ಸಂದೀಪ್‌ ಪಾಠಕ್‌ ಅವರು ಪ್ರಕಟಣೆ ಹೊರಡಿಸಿದ್ದಾರೆ.

ಇದೇ ವೇಳೆ ಎರಡು ಹೊಸ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ರಾಜ್ಯದ ದಕ್ಷಿಣ ವಿಭಾಗದ ಸಂಘಟನಾ ಕಾರ್ಯದರ್ಶಿಯನ್ನಾಗಿ ಡಾ.ಬಿ.ಟಿ.ನಾಗಣ್ಣ ಅವರನ್ನು ಮತ್ತು ಉತ್ತರ ವಿಭಾಗದ ಸಂಘಟನಾ ಕಾರ್ಯದರ್ಶಿಯನ್ನಾಗಿ ಅರ್ಜುನ್‌ ಪರಪ್ಪ ಹಲಗಿಗೌಡರ್‌ ಅವರನ್ನು ನೇಮಿಸಲಾಗಿದೆ.

ಮುಖ್ಯಮಂತ್ರಿ ಚಂದ್ರು ಅವರು ಈವರೆಗೆ ಪಕ್ಷದ ಪ್ರಚಾರ ಮತ್ತು ಜನಸಂಪರ್ಕ ವಿಭಾಗದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ಇದುವರೆಗೆ ಅಧ್ಯಕ್ಷರಾಗಿದ್ದ ಪೃಥ್ವಿರೆಡ್ಡಿ ಅವರು ಪಕ್ಷದ ಸಂಘಟನೆಗಾಗಿ ಸಾಕಷ್ಟುಹೋರಾಟಗಳನ್ನು ರೂಪಿಸಿದರೂ ಅದು ಹೆಚ್ಚು ಮತಗಳಾಗಿ ಪರಿವರ್ತನೆಯಾಗಲಿಲ್ಲ. ಮೇಲಾಗಿ ವಿಧಾನಸಭಾ ಚುನಾವಣೆಯಲ್ಲಿ 209 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದರೂ ಠೇವಣಿ ಉಳಿಸಿಕೊಳ್ಳಲಾಗಲಿಲ್ಲ. ಹೀಗಾಗಿ, ಮುಂಬರುವ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ಚಂದ್ರು ಅವರಿಗೆ ಸಾರಥ್ಯ ನೀಡಲಾಗಿದೆ.

ಇನ್ನುಳಿದಂತೆ ಈಗಿರುವ ರಾಜ್ಯ ಸಮಿತಿಯಲ್ಲಿ ಇನ್ನೂ ಅನೇಕ ಬದಲಾವಣೆಗಳನ್ನು ಮಾಡಲಿದ್ದು, ಈಗಿರುವ ಕೆಲವರನ್ನು ಉಳಿಸಿಕೊಂಡು ಹಳಬರ ಮತ್ತು ಹೊಸಬರನ್ನು ಒಳಗೊಂಡ ತಂಡ ರಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

 
 
 
 
 
 
 
 
 
 
 

Leave a Reply