ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಲ್ಲದವರು ಕ್ಷೇತ್ರ ತೊರೆಯಲು ಸೂಚನೆ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ: ಜಿಲ್ಲೆಯಲ್ಲಿ ಮೇ 10 ರಂದು ಚುನಾವಣೆ ನಡೆಯಲಿರುವ ಹಿನ್ನೆಲೆ, ಸ್ಥಳೀಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಲ್ಲದ ರಾಜಕೀಯ ಪ್ರಚಾರಕರು, ಕಾರ್ಯಕರ್ತರು, ಮೆರವಣಿಗೆ ಅಯೋಜಕರು ಸೇರಿದಂತೆ ಮತ್ತಿತರರು ಮೇ 8 ರಂದು ಸಂಜೆ 6 ಗಂಟೆಗೆ ಕ್ಷೇತ್ರ ಬಿಡಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಮತದಾನವು ಮೇ 10 ರಂದು ನಡೆಯಲಿದ್ದು, ಚುನಾವಣೆಯು ಮುಕ್ತ , ನ್ಯಾಯ ಸಮ್ಮತ ಹಾಗೂ ಶಾಂತಿಯುತವಾಗಿ ನಡೆಯಬೇಕಾದ ಹಿನ್ನಲೆ, ಮತದಾನದ ಅಂತ್ಯದ 48 ಗಂಟೆ ಮುಂಚಿತವಾಗಿ ಯಾವುದೇ ರೀತಿಯ ಬಹಿರಂಗ ಪ್ರಚಾರಗಳನ್ನು ಕೈಗೊಳ್ಳಲು ಅನುಮತಿ ಇರುವುದಿಲ್ಲ, ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರಲ್ಲದವರು ನಿಗಧಿತ
ಸಮಯಕ್ಕಿಂತ ಮುಂಚೆ ಹೊರಹೋಗಬೇಕು ಎಂದರು.

ಯಾವುದೆ ರಾಜಕೀಯ ಪಕ್ಷಕ್ಕೆ ಸಂಬoದಿಸಿದ ಅಥವಾ ಅಧಿಕೃತ ಅಭ್ಯರ್ಥಿಗಳ ಪ್ರಚಾರಕ್ಕಾಗಿ ವಿಧಾನಸಭಾ ಕ್ಷೇತ್ರದ ಹೊರಗಿನಿಂದ ಬಂದು ಉಳಿದುಕೊಂಡಿದ್ದಲ್ಲಿ ಅಂತಹವರು ನಿಗಧಿಪಡಿಸಿರುವ ಕಾಲಕ್ಕಿಂತ ಮುಂಚೆ ಕ್ಷೇತ್ರದಿಂದ ಹೊರಗೆ ಹೋಗಬೇಕು ಒಂದೊಮ್ಮೆ ಯಾವುದೇ ವಸತಿಗೃಹಗಳಲ್ಲಿ , ಕಲ್ಯಾಣ ಮಂಟಪಗಳಲ್ಲಿ ಉಳಿದುಕೊಂಡಿದ್ದಲ್ಲಿ ಅಂತಹವರಿಗೆ ಆಸ್ಪದ ನೀಡಬಾರದು. ಅನಧಿಕೃತವಾಗಿ
ಉಳಿದುಕೊಂಡಿರುವ ಬಗ್ಗೆ ಮಾಹಿತಿಯಿದ್ದಲ್ಲಿ ಜಿಲ್ಲಾಡಳಿತ ಅಥವಾ ಜಿಲ್ಲಾ ಪೊಲೀಸ್ ಇಲಾಖೆಗೆ ಮಾಹಿತಿಗೆ ನೀಡಬೇಕು ಎಂದರು.
ಈ ಬಗ್ಗೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಆಗಾಗ್ಗೆ ಪರಿಶೀಲಿಸಲಿದ್ದಾರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರಲ್ಲದ ರಾಜಕೀಯ ಕಾರ್ಯಕರ್ತರು ,ಪಕ್ಷದ ಸಂಘಟಕರು, ಸೇರಿದಂತೆ ಮತ್ತಿತರರು ಅನಧಿಕೃತವಾಗಿ ನೆಲೆಸಿದ್ದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಹಾಗೂ ಅವರಿಗೆ ಆಶ್ರಯ ನೀಡುವವರ ಮೇಲೆಯೂ ಸಹ ಕ್ರಮ ಕೈಗೊಳ್ಳಲಾಗುವುದು ಎಂದರು.

ಮತದಾನಕ್ಕೆ ನಿಗಧಿಪಡಿಸಿದ ಅವಧಿ ಕೊನೆಗೊಳ್ಳುವುದಕ್ಕಿಂತ 48 ಗಂಟೆಗಳ ಮುಂಚೆ ಯಾವುದೇ ಮುದ್ರಣ ಮಾದ್ಯಮಗಳಲ್ಲಿ ಜಾಹೀರಾತು ಪ್ರಕಟಸಬೇಕಾದರೆ ಸಂಬoದಪಟ್ಟ ಅಭ್ಯರ್ಥಿಗಳು ಅಥವಾ ಪಕ್ಷವು ಮಾಧ್ಯಮ ಪ್ರಾಮಾಣಿಕರಣ ಸಮಿತಿ ವತಿಯಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದರು.
ಮೇ 8 ರಂದು ಸಂಜೆ 5 ಗಂಟೆಯಿoದ ಮೇ 10 ರ ಮಧ್ಯರಾತ್ರಿ 12 ರ ವರೆಗೆ ಹಾಗೂ ಮೇ 12 ರ ಮಧ್ಯರಾತ್ರಿ 12 ಗಂಟೆಯಿoದ ಮೇ 13 ರ ಮಧ್ಯರಾತ್ರಿ 12 ರ ವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಹಾಗೂ ಸರಬರಾಜನ್ನು ನಿಷೇಧಿಸಲಾಗಿದ್ದು, ಯಾವುದೇ ವಸತಿಗೃಹಗಳಲ್ಲಿ, ಕಲ್ಯಾಣ ಮಂಟಪಗಳು ಸೇರಿದಂತೆ ಮತ್ತಿತರ ಎಲ್ಲಾ ಸಭಾಂಗಣಗಳಲ್ಲಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸದಂತೆ ಎಚ್ಚರಿಕೆ ವಹಿಸಬೇಕು
ಎಂದರು.

ಸಭೆಯಲ್ಲಿ ಮಾದರಿ ನೀತಿ ಸಂಹಿತೆ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಅಪರ ಜಿಲ್ಲಾಧಿಕಾರಿ ವೀಣಾ, ತರಬೇತಿ ನಿರತ ಐ.ಎ.ಎಸ್ ಆಧಿಕಾರಿ ಯತೀಶ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಹಾಗೂ ವಿವಿಧ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply