ಯಾವುದನ್ನು ವಿರೋಧಿಸಬೇಕು ಅನ್ನುವ ಪರಿಜ್ಞಾನ ಇಲ್ಲದ ವಿರೋಧ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿದೆ~ ಸಚಿವ ಕೆ.ಎಸ್.ಈಶ್ವರಪ್ಪ  

ಯಾವುದನ್ನು ವಿರೋಧಿಸಬೇಕು ಅನ್ನುವ ಪರಿಜ್ಞಾನ ಇಲ್ಲದ ವಿರೋಧ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿದೆ. ಕೋವಿಡ್ ಲಸಿಕೆ ವಿಚಾರದಲ್ಲೂ ರಾಜಕೀಯ ಮಾಡಬೇಡಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಪಂಚ ಮೆಚ್ಚುವ ರೀತಿಯಲ್ಲಿ ಕೋವಿಡ್ ನಿಯಂತ್ರಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಿಯಂತ್ರಣದಲ್ಲೂ ಯಶಸ್ವಿಯಾಗಿದ್ದೇವೆ ಎಂದರು.

ಯಾವುದರಲ್ಲಿ ರಾಜಕೀಯ ಮಾಡಬೇಕು ಅನ್ನುವುದು ವಿಪಕ್ಷಗಳಿಗೆ ಗೊತ್ತಿಲ್ಲ ಎಂದು ಟೀಕಿಸಿದ ಈಶ್ವರಪ್ಪ, ಲಸಿಕೆ ಹಂಚಿಕೆ ವಿಚಾರದಲ್ಲಿ ಪಕ್ಷ, ಜಾತಿ ಯಾವುದನ್ನು ನೋಡುವುದಿಲ್ಲ. ಕಾಂಗ್ರೆಸ್ ಸಹಕಾರ ಕೊಟ್ಟರೆ ಸಂತೋಷ, ಸಹಕಾರ ಕೊಡದಿದ್ದರೆ ನಮ್ಮ ಕೆಲಸವನ್ನು ಮಾಡಿಕೊಂಡು ಹೋಗುತ್ತೇವೆ ಎಂದು ಹೇಳಿದರು.

ಸಚಿವ ಸಂಪುಟ ವಿಸ್ತರಣೆಯ ನಂತರ ರಾಜ್ಯ ಸರಕಾರದಲ್ಲಿ ಭಿನ್ನಮತ ಸ್ಪೋಟವಾಗುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಈಶ್ವರಪ್ಪ ಅವರು, ಸಿದ್ದರಾಮಯ್ಯರಿಗೆ ಅವರ ವಿಪಕ್ಷ ನಾಯಕ ಸ್ಥಾನ ಉಳಿಯಲಿ, ಡಿ.ಕೆ. ಶಿವಕುಮಾರ್ ಆ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಅವರು ಮೊದಲು ತಮ್ಮ ಪಕ್ಷವನ್ನು ನೋಡುವ ಬದಲು ಭಂಡತನದ ಮಾತನಾಡುತ್ತಾರೆ. ಬಿಜೆಪಿ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳಿಂದ ಅವರು ಕಂಗಾಲಾಗಿದ್ದಾರೆ. ಅವರ ಹೋರಾಟ ಏನೂ ಇಲ್ಲ, ಕೇವಲ ಟ್ವೀಟ್ ಮಾಡುವುದೇ ಅಭ್ಯಾಸವಾಗಿದೆ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷವನ್ನೇ ನಿರ್ನಾಮ ಮಾಡಿದರು. ಜನ್ಮದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಆದರೂ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮತ್ತೆ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ಹೇಳಿದರು.

ಚುನಾವಣೆಯಲ್ಲಿ ಗೆದ್ದವರು ಸಚಿವ ಸ್ಥಾನಕ್ಕೆ ಅಪೇಕ್ಷೆ ಪಡುವುದು ತಪ್ಪಲ್ಲ. ನಮಗೆ ಪೂರ್ಣ ಪ್ರಮಾಣದ ಬಹುಮತ ಸಿಗದೇ ಇದ್ದಾಗ ಅನ್ಯ ಪಕ್ಷಗಳಿಂದ ಬಂದವರಿಗೆ ಸಚಿವ ಸ್ಥಾನದ ಭರವಸೆ ಕೊಟ್ಟಿದ್ದೇವೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಜವಾಬ್ದಾರಿ ಇದೆ. ಸಚಿವ ಸಂಪುಟದ ಶೇ. 50ರಷ್ಟು ಸ್ಥಾನಗಳನ್ನು ಅವರಿಗೆ ನೀಡ ಬೇಕಾಗುತ್ತದೆ. ಹಾಗಾಗಿ ಸಹಜವಾಗಿಯೇ ರಾಜ್ಯ ಸರಕಾರದ ಮೇಲೆ ಒತ್ತಡ ಇದೆ. ಕೇಂದ್ರ ನಾಯಕರು ಮತ್ತು ಮುಖ್ಯಮಂತ್ರಿಯವರು ಯಾರು ಸಚಿವರಾಗಬೇಕು ಎಂದು ತೀರ್ಮಾನಿಸುತ್ತಾರೆ ಎಂದು ಈಶ್ವರಪ್ಪ ತಿಳಿಸಿದರು.

 
 
 
 
 
 
 
 
 
 
 

Leave a Reply