ಮೂಲ್ಕಿ: ಉಕ್ಕಿ ಹರಿದ ಶಾಂಭವಿ ನದಿ; ಬಪ್ಪನಾಡು ದೇವಸ್ಥಾನಕ್ಕೆ ನುಗ್ಗಿದ ನೀರು

ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಮತ್ತೆ ರೆಡ್ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜುಲೈ 6 ಮತ್ತು 7ರಂದು ಬೆಳಗ್ಗಿನ ವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಬುಧವಾರ ವರದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅರೆಂಜ್ ಅಲರ್ಟ್ ನೀಡಲಾಗಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಸೂಚನೆ ಇತ್ತು. ಗುರುವಾರ ಮಧ್ಯಾಹ್ನ ಬಂದ ಹವಾಮಾನ ವರದಿಯಲ್ಲಿ ಕರಾವಳಿಯ ಮೂರು ಜಿಲ್ಲೆಗಳಿಗೂ ಕಟ್ಟೆಚ್ಚರ ಸೂಚನೆ ನೀಡಲಾಗಿದ್ದು ಭಾರೀ ಗಾಳಿ, ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಅಲ್ಲದೆ, ಜುಲೈಲ 10ರ ವರೆಗೂ ಭಾರೀ ಮಳೆಯಾಗುವ ಸೂಚನೆ ನೀಡಲಾಗಿದೆ.

ಸದ್ಯಕ್ಕೆ ಮಂಗಳೂರಿನಲ್ಲಿ ಗುರುವಾರ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಮಳೆಯ ತೀವ್ರತೆ ಕಡಿಮೆ ಇತ್ತು. ನಿನ್ನೆ ರಾತ್ರಿ ಭಾರೀ ಮಳೆಯಾಗಿದ್ದರಿಂದ ತಗ್ಗಿನ ಪ್ರದೇಶಗಳಲ್ಲಿ ನೆರೆ ನೀರು ನುಗ್ಗಿತ್ತು. ಮೂಡುಬಿದ್ರೆಯಲ್ಲಿ ಭಾರೀ ಮಳೆಯಾಗಿದ್ದರಿಂದ ಮೂಲ್ಕಿ ಭಾಗದಲ್ಲಿ ಹರಿಯುವ ಶಾಂಭವಿ ನದಿಯಲ್ಲಿ ನೆರೆ ಆವರಿಸಿದೆ. ಮೂಲ್ಕಿ ಬಪ್ಪನಾಡು ದೇವಸ್ಥಾನಕ್ಕೆ ನೀರು ನುಗ್ಗಿದ್ದರಿಂದ ಅಂಗಣದಲ್ಲಿ ಮೊಣ ಕಾಲು ಮುಳುಗುವಷ್ಟು ನೀರು ನಿಂತಿತ್ತು. ಇದಲ್ಲದೆ, ಮೂಲ್ಕಿ ಅತಿಕಾರಿಬೆಟ್ಟು ಗ್ರಾಮದ ಮಟ್ಟು ಎಂಬ ಪ್ರದೇಶದಲ್ಲಿ ನೀರು ಆವರಿಸಿದ್ದು, ಅಲ್ಲಿನ ಹತ್ತು ಮನೆಗಳ ನಿವಾಸಿಗಳಿಗೆ ದಿಗ್ಬಂಧನ ವಿಧಿಸಿದೆ. ನೀರು ಕಡಿಮೆಯಾಗದೇ ಇದ್ದರೆ ಅವರನ್ನು ಸ್ಥಳಾಂತರ ಮಾಡಬೇಕಾದೀತು ಎಂದು ಸ್ಥಳೀಯ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply