ಬಾಲ ಲೀಲಾ ಚಿಣ್ಣರ ಬೇಸಿಗೆ ಶಿಬಿರದ ಮತ್ತು ಭಾಗವತ ಪುರಾಣಾಂತರ್ಗತ ಸರಣಿ ತಾಳಮದ್ದಲೆಯ ಸಮಾರೋಪ

ಭಾವನಾ ಪೌಂಡೇಶನ್(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಗ್ರಾಮೀಣ ಭಾಗದಲ್ಲಿ ಸಂಯೋಜಿಸುತ್ತಿರುವ ಬಾಲ ಲೀಲಾ ಚಿಣ್ಣರ ಬೇಸಿಗೆ ಶಿಬಿರದ ಮತ್ತು ಭಾಗವತ ಪುರಾಣಾಂತರ್ಗತ ಸರಣಿ ತಾಳಮದ್ದಲೆಯ ಸಮಾರೋಪ ಸಮಾರಂಭವು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕಲಾಸಿಂಧು ಪುರಸ್ಕಾರವನ್ನು ಸ್ವೀಕರಿಸಿದ ಬಹುಶ್ರುತ ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣುಭಟ್ಟರು ಹಿಂದಿನ ತಲೆಮಾರಿನವರ ಸಾಧನೆ ಮತ್ತು ಪರಿಶ್ರಮಗಳನ್ನು ಸೂಕ್ಷ್ಮವಾಗಿ  ಅವಲೋಕಿಸಿದಾಗ ಅವರ ಬದುಕು ಮತ್ತು ಪ್ರೀತಿ ಇವೆರಡರ ಅರಿವು ನಮಗಾಗುತ್ತದೆ ಎಂದು ಶಿಬಿರಾರ್ಥಿಗಳಿಗೆ ತಿಳಿ ಹೇಳುತ್ತ ಭಾವನಾ ಸಂಸ್ಥೆಯ ಹಲವಾರು ಕಲಾತ್ಮಕ ಚಟುವಟಿಕೆಗಳನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾದ ಸಂಸ್ಕöÈತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಯು. ವಿಶ್ವನಾಥ ಶೆಣೈ ಯವರು ತಾವು ನಡೆದು ಬಂದ ದಾರಿಯನ್ನು ಮಕ್ಕಳಿಗೆ ವಿವರಿಸುತ್ತ ಈ ತೆರನಾದ ಚಿಣ್ಣರ ಶಿಬಿರವು ಹೇಗೆ ಮಕ್ಕಳ ಬದುಕನ್ನು ಹಸನಾಗುವಂತೆ ರೂಪಿಸಬಲ್ಲುದು ಎಂಬುದಾಗಿ ವಿವರಿಸಿದರು. ರೋಟರಿ ಕ್ಲಬ್ ಮಣಿಪಾಲ ಟೌನ್‌ನ ಅಧ್ಯಕ್ಷರಾದ ರೋ. ನಿತ್ಯಾನಂದ ನಾಯಕ್ ನರಸಿಂಗೆ, ಪರ್ಕಳದ ಮಹಾಗಣಪತಿ ಸ್ಟೀಲ್ಸ್ನ ಸಚ್ಚಿದಾನಂದ ನಾಯಕ್ ಬೆಲ್ಪತ್ರೆ, ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮಮತಾ ಮೊರಾರ್ಜಿ ಹಾಗೂ ಭಾವನಾ ಪ್ರತಿಷ್ಠಾನದ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು.
ಶಿಕ್ಷಣದ ಜೊತೆಗೇ ಕರಕುಶಲಕಲೆಯಲ್ಲೂ ತಮ್ಮ ಅಭಿರುಚಿಯನ್ನು ಬೆಳೆಸಿಕೊಂಡಿರುವ ಶುಭಲಕ್ಷ್ಮೀ ಶೆಟ್ಟಿಯವರಿಗೆ ಭಾವನಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸುಮಾರು ಒಂದು ವರ್ಷಗಳಷ್ಟು ಕಾಲ ನಡೆದ ಭಾಗವತ ಪುರಾಣಾಂತರ್ಗತ ಸರಣಿ ತಾಳಮದ್ದಳೆಯ ಎಲ್ಲ ಕಲಾವಿದರಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.

ದಯಾನಂದ ಕರ್ಕೇರ ಉಗ್ಗೆಲ್‌ಬೆಟ್ಟು ಕಾರ್ಯಕ್ರಮ ನಿರೂಪಿಸಿ, ಶಿಬಿರ ನಿರ್ದೇಶಕರಾದ ಡಾ. ಜನಾರ್ದನ ಹಾವಂಜೆ ಪ್ರಸ್ತಾವನೆಗೈದು, ಅಕ್ಷತಾ ವಿಶು ರಾವ್ ಸನ್ಮಾನ ಪತ್ರವನ್ನು ವಾಚಿಸಿ, ವಿಶು ರಾವ್ ಹಾವಂಜೆ ವಂದಿಸಿದರು. ಸಮಾರಂಭದ ನಂತರ ಯಕ್ಷಗಾನ ತಾಳಮದ್ದಲೆಯು ಪ್ರಸ್ತುತಗೊಂಡಿತು.

 
 
 
 
 
 
 
 
 
 
 

Leave a Reply