ಯಜ್ಞೋಪವೀತಂ ಬಲಮಸ್ತು ತೇಜಃ ~ ರಾಜೇಶ್ ಭಟ್ ಪಣಿಯಾಡಿ

ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಬರುವ ವಿಶೇಷ ಆಚರಣೆಗಳಲ್ಲಿ ಋಗುಪಾಕರ್ಮ ಹಾಗೂ ಯಜುರ್ ಉಪಾಕರ್ಮಗಳೂ ಬಹು ಮುಖ್ಯವಾದವುಗಳು. ಈ ದಿನ ವೇದಾಧ್ಯಯನ ಹಾಗೂ ಆಧ್ಯಾತ್ಮ ಸಾಧನೆಗಾಗಿ ಸಂಕಲ್ಪಿಸುವ ದಿನ ಮತ್ತು ವೇದ ಮಂತ್ರಗಳನ್ನು ಕಾಲನಿಯಾಮಕನಾದ ಭಗವಂತನಿಗೆ ಅರ್ಪಿಸುವ ಪುಣ್ಯ ದಿನ.ಈಗಿನ ಕಾಲಸ್ಥಿತಿಯಲ್ಲಿ ಯೋಚಿಸುವುದಾದರೆ ವಟು ಹಾಗೂ ಬ್ರಾಹ್ಮಣ ತನ್ನ ಕರ್ತವ್ಯಗಳ ಪಟ್ಟಿ ಯನ್ನು ನವೀಕರಿಸುವ ( renewal) ಒಂದು ಕ್ರಮ ಎನ್ನ ಬಹುದು. ಈ ದಿನ ದೇವ, ಋಷಿ, ಪಿತೃಗಳನ್ನು ನೆನಪಿಸಿಕೊಂಡು ಹವಿಸ್ಸು ಒಪ್ಪಿಸಿ ತರ್ಪಣವನ್ನು ನೀಡುವ ಕ್ರಮ ರೂಡಿಯಲ್ಲಿದೆ. ಆತ ಧರಿಸುವ ಪರಮ ಪವಿತ್ರವಾದ ಯಜ್ಞೋಪವೀತದ ಮೂರೆಳೆ ದಾರ ಹಾಗೂ ಬ್ರಹ್ಮಗಂಟನ್ನು ನಾಲ್ಕು ವೇದಗಳಿಗೆ ಹೋಲಿಸಲಾಗುತ್ತದೆ.ತ್ರಿಕಾಲ ಸಂಧ್ಯಾವಂದನೆಯ ಬಗ್ಗೆ ಜಾಗೃತನಾಗಿರಬೇಕೆಂದು ಇದು ಸೂಚಿಸುತ್ತದೆ. ಒಬ್ಬ ವಟು ಹಾಗೂ ವಿಪ್ರನ ದುರಾಲೋಚನೆಗಳಿಗೆ ಕಡಿವಾಣ ಹಾಕಿ ಸಾತ್ವಿಕನನ್ನಾಗಿ ಮಾಡಿ ಸತ್ಕರ್ಮ ಹಾಗೂ ಧರ್ಮ ಮಾರ್ಗದಲ್ಲಿ ನಡೆಯಲು ಇದು ಪ್ರೇರೇಪಿಸುತ್ತದೆ. ಅವನ ಅಧ್ಯಯನದ ಶಕ್ತಿ ಆ ಯಜ್ಞೋಪವೀತದಲ್ಲಿ ಸಂಚಯನಗೊಂಡು ಆತನಿಗೆ ಸದಾ ರಕ್ಷಣೆಯನ್ನು ನೀಡುತ್ತದೆ ಎನ್ನುವುದು ಬಲ್ಲವರ ನಂಬಿಕೆ.

ಈ ನಿಟ್ಟಿನಲ್ಲಿ ಉಡುಪಿಯ ಸಮೀಪದ ಪಣಿಯಾಡಿಯ ಶೇಷಾಸನ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ದೇವರ ದಿವ್ಯ ಸನ್ನಿಧಿಯಲ್ಲಿ ಶನಿವಾರದಂದು ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಭಟ್ ರ ನೇತೃತ್ವದಲ್ಲಿ ಋಗ್ ಉಪಾಕರ್ಮ ಸಾಂಗವಾಗಿ ನೆರವೇರಿತು. ತದ ನಂತರ ಶ್ರೀ ದೇವರಿಗೆ ಅನಂತ ತುಳಸಿ ಅರ್ಚನೆ ರಾತ್ರಿ ದುರ್ಗಾ ಪೂಜೆ ಸುಸಂಪನ್ನಗೊಂಡಿತು.

ಅದೇ ರೀತಿ ನೂಲ ಹುಣ್ಣಿಮೆಯ ದಿನ ಭಾನುವಾರವಾದ ಇಂದು ಯಜುರ್ ಉಪಾಕರ್ಮ ಶ್ರೇಷ್ಟ ಋತ್ವಿಜರು ಹಾಗೂ ವೇದಮೂರ್ತಿಗಳಾದ ಶ್ರೀ ರವಿ ಐತಾಳ್, ರಾಘವೇಂದ್ರ ಭಟ್, ಜ್ಯೋತಿಷಿ ಗೋಪಾಲಕೃಷ್ಣ ಜೋಯ್ಸ, ರಾಮಚಂದ್ರ ಜೋಯ್ಸ, ಹಾಗೂ ಶ್ರೀ ಪ್ರವೀಣ ಮತ್ತು ಗೋಪಾಲ ಆಚಾರ್ಯರ ಉಪಸ್ಥಿತಿಯಲ್ಲಿ ಹೋಮ ಹವನಾದಿ ವೇದ ಮಂತ್ರಗಳ ಮೂಲಕ ವಿಧಿವತ್ತಾಗಿ ಸುಸಂಪನ್ನಗೊಂಡಿತು. ಈ ಕಾರ್ಯಕ್ರಮದಲ್ಲಿ ಪುತ್ತಿಗೆ ವೇದ ಪಾಠಶಾಲೆಯ ವಿದ್ಯಾರ್ಥಿಗಳು ಕೂಡ ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply