ಕನ್ನಡಿಯೆದುರಲಿ ಕುಳಿತಾಗ”~ ರಾರಾ.

ರನ್ನಗನ್ನಡಿಗೆದುರು ಹೂಮುಡಿದು ಕುಳಿತಾಗ
ಮುನ್ನುಡಿಯು ಬಾಳೆಂಬ ಕವಿತೆಗಂತೆ /
ತನ್ನ ಚೆಲುವಿಗೆ ಕೆನ್ನೆ ನಾಚಿ ಕೆಂಪಾದಾಗ
ಬೆನ್ನ ಹಿಂದಿನಲಾರೋ ಬಳಸಿದಂತೆ //1//

ಎತ್ತರದ ಎದೆ ಏರಿ ಕೊರಳ ಮುತ್ತಿನ ಮಾಲೆ
ಹತ್ತಿಳಿದು ಹರಿಯುತಿಹ ಗಂಗೆಯಂತೆ /
ಹೆತ್ತತಾಯಿಯ ಮಡಿಲ ಅರಿವಿರದ ಎಳೆ ಬಾಲೆ
ಮುತ್ತಿನಂದದಿ ನೀರು ಜಿನುಗಿದಂತೆ //2//

ಬಣ್ಣಬಣ್ಣದ ಸೀರೆ ಮೈತುಂಬ ಸಿಂಗಾರ
ಹೆಣ್ಣಕಾಣಲು ಕಣ್ಣು ಮರೆಯಲಂತೆ /
ಸಣ್ಣಕಾಡಿಗೆ ಚುಕ್ಕಿ ಗಲ್ಲದಲಿ ಕಂಡಾಗ
ತಣ್ಣನೆಯ ಹೂಗಾಳಿ ಚಿವುಟಿದಂತೆ //3//

ಕಲಕಲದ ಕೈಬಳೆಗೆ ಕೋಣೆ ಕಿವಿಗೊಟ್ಟಾಗ
ಮೆಲುಮಾತು ತುಟಿಯಲ್ಲೆ ನಿಂತಿತಂತೆ /
ನೆಲದಲಿರಿಸಿದ ಹೆಜ್ಜೆ ಝಣರೆಂದು ಉಲಿದಾಗ
ಕೆಲಹೊತ್ತು ಹೊಸರಾಗ ಹಾಡಿದಂತೆ //4//

 
 
 
 
 
 
 
 
 
 
 

Leave a Reply