ಮೀನುಗಾರ ಮಹಿಳೆಯರ ಅಗತ್ಯ ಬೇಡಿಕೆಗಳನ್ನು ಈಡೇರಿಸಲಾಗುವುದು ~ ಶಾಸಕ ಯಶ್ ಪಾಲ ಸುವರ್ಣ

ಉಡುಪಿ: ಉಡುಪಿ ನಗರ ಮಹಿಳಾ ಹೈಟೆಕ್ ಮೀನುಮಾರುಕಟ್ಟೆಗೆ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್‍ಪಾಲ್ ಸುವರ್ಣ ಅವರು ಉಡುಪಿ ನಗರಸಭೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಮೀನುಗಾರ ಮಹಿಳೆಯರಿಂದ ಮನವಿಯನ್ನು ಸ್ವೀಕರಿಸಿ ಮೀನುಗಾರ ಮಹಿಳೆಯರ ಅಗತ್ಯ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.

ಮೀನು ಮಾರುಕಟ್ಟೆಯಲ್ಲಿ ಹೋಲ್‍ಸೇಲ್ ಮೀನುವ್ಯಾಪಾರ ಮಾಡುವ ಸ್ಥಳದಲ್ಲಿ ಗೋಡೆ ಬಿರುಕುಬಿಟ್ಟಿದ್ದು, ಮಳೆಗಾಲದಲ್ಲಿ ನೀರು ಸೋರುತ್ತಿದೆ ಹಾಗೂ ಪ್ರಾಂಗಣದಲ್ಲಿ ನೀರು ನಿಲ್ಲುವುದನ್ನು ತಡೆಗಟ್ಟುವುದು. ಶೌಚಾಲಯ ಮತ್ತು ಅದರ ಪಿಟ್ ನ್ನು ವಿಸ್ತಾರಗೊಳಿಸುವುದು, ಮೀನುಕಟ್ಟಿಂಗ್ ಪ್ರಾಂಗಣವನ್ನು ಮಹಿಳೆಯರಿಗೆ ಅನುಕೂಲವಾಗುವಂತೆ ಸಮತಟ್ಟುಗೊಳಿಸುವುದು, ನಗರ ಸಭೆಯಿಂದ ನೀರಿನ ಸಂಪರ್ಕ ಕಲ್ಪಿಸುವುದು, ಮಾರುಕಟ್ಟೆಯ ಮುಂಭಾಗದ ಬಾವಿಗೆ ಆವರಣ ಗೋಡೆ ನಿರ್ಮಿಸುವುದು, ಮಹಿಳೆಯರಿಗೆ ಡ್ರೆಸ್ಸಿಂಗ್ ಕೊಠಡಿ ನಿರ್ಮಿಸುವುದು, ಮೇಲ್ಮಹಡಿಯಲ್ಲಿ ವಿಶ್ರಾಂತಿ ಕೊಠಡಿ, ಮೇಲ್ಮಹಡಿಯಲ್ಲಿ ಶೌಚಾಲಯ ನಿರ್ಮಿಸುವುದು. ಜನರೇಟರ್ ಮತ್ತು ಸಿಸಿ ಟಿವಿ ಸೌಲಭ್ಯ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಮೀನುಗಾರ ಮಹಿಳಾ ಮುಖಂಡರು ಶಾಸಕರಿಗೆ ಸಲ್ಲಿಸಿದರು.

ಉಡುಪಿ ತಾಲೂಕು ಮಹಿಳಾ ಹಸಿಮೀನುಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್.ಸಾಲ್ಯಾನ್ ಅವರು ಶಾಸಕರಾಗಿ ಉಡುಪಿ ಮೀನುಮಾರುಕಟ್ಟೆಗೆ ಪ್ರಪ್ರಥಮವಾಗಿ ಆಗಮಿಸಿರುವ ಯಶ್‍ಪಾಲ್ ಸುವರ್ಣ ಅವರನ್ನು ಮಹಿಳಾ ಮೀನುಗಾರರ ಪರವಾಗಿ ಅಭಿನಂದಿಸಿದರು. ಬಳಿಕ ಮಾತನಾಡಿ, ಶಾಸಕ ಯಶ್‍ಪಾಲ್ ಸುವರ್ಣ ಅವರು ಮೀನುಗಾರ ಮಹಿಳೆಯರ ಸಮಸ್ಯೆಗಳಿಗೆ ಸದಾ ಸ್ಪಂದನೆ ನೀಡುತ್ತಾ ಬಂದಿದ್ದಾರೆ. ಫೆಡರೇಶನ್, ಮಹಾಲಕ್ಷ್ಮೀ ಬ್ಯಾಂಕ್ ಅಭಿವೃದ್ಧಿಯ ನೇತೃತ್ವವಹಿಸಿರುವ ಯಶ್‍ಪಾಲ್ ಅವರು ಶಾಸಕರಾಗಿ ಉಡುಪಿ ಕ್ಷೇತ್ರದ ಜನತೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂಬ ದೃಡವಿಶ್ವಾಸವಿದೆ ಎಂದರು.

ಶಾಸಕ ಯಶ್‍ಪಾಲ್ ಸುವರ್ಣ ಮಾತನಾಡಿ, ಉಡುಪಿ ನಗರ ಮಹಿಳಾ ಹೈಟೆಕ್ ಮೀನುಮಾರುಕಟ್ಟೆಯ ಅಗತ್ಯ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ಮಹಿಳೆಯರ ಆರೋಗ್ಯದ ದೃಷ್ಠಿಯಿಂದ ಶುದ್ಧ ಕುಡಿಯುವ ನೀರಿನ ಘಟಕ, ಪ್ರಥಮ ಚಿಕಿತ್ಸೆ ಘಟಕವನ್ನು ಶೀಘ್ರವಾಗಿ ಸ್ಥಾಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀಮತಿ ಮಾನಸ ಸಿ. ಪೈ, ನಗರಸಭೆ ಪೌರಾಯುಕ್ತರಾದ ಶ್ರೀ ರಮೇಶ್ ಪಿ. ನಾಯಕ್, ಎ ಇ ಇ ಯಶವಂತ ಪ್ರಭು, ಉಡುಪಿ ತಾಲೂಕು ಮಹಿಳಾ ಹಸಿಮೀನುಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಆನಂದ್, ಜಯಂತಿ ಗುರುದಾಸ್ ಬಂಗೇರ, ಲೀಲಾ ಕುಂದರ್, ಸುಂದರಿ ಸಾಲ್ಯಾನ್, ವನಜ ಸಾಲ್ಯಾನ್, ಮಾಲತಿ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply