ಕಲೆಯಲ್ಲಿ ಸ್ವಾರ್ಥ ಚಿಂತನೆ ತ್ಯಜಿಸಲು ಬಾ. ಸಾಮಗ ಕರೆ

ಉಡುಪಿ: ಒಂದು ಕಲೆಯನ್ನು ಅದರ ಸಮಗ್ರತೆಯೊಂದಿಗೆ ಆಸ್ವಾದಿಸಬೇಕಾದುದು ಕಲೆಯ ಬೆಳವಣಿಗೆ ದೃಷ್ಟಿಯಿಂದ ಅಗತ್ಯವಾಗಿರುವುದರಿಂದ ಕರಾವಳಿಯ ಜಾನಪದ ಕಲೆ ಯಕ್ಷಗಾನದಲ್ಲಿ ಸ್ವಾರ್ಥ ಚಿಂತನೆ ತ್ಯಜಿಸಿ ಯಕ್ಷಗಾನವನ್ನು ವಿಶ್ವದ ಅಗ್ರ ಕಲೆಯಾಗಿ ಬೆಳೆಸಬೇಕೆಂದು ದೆಹಲಿ ಕನ್ನಡಿಗ, ತುಳುವೆರ್ ಪತ್ರಿಕೆಗಳ ಸಂಪಾದಕ ಬಾ. ಸಾಮಗ ಅವರು ಕರೆ ನೀಡಿದರು.
ಸಾಮಗ ಅವರು ಶ್ರೀ ಮಹಾ ಗಣಪತಿ ಯಕ್ಷಗಾನ ಕಲಾ ಸಂಘ ಮಾ. ೧೬ರಂದು ಉಡುಪಿ ಬೆಳ್ಕಳೆಯಲ್ಲಿ ಏರ್ಪಡಿಸಿದ ೪೪ನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಯಕ್ಷಗಾನದಲ್ಲಿ ಕೇವಲ ಒಂದೊoದೇ ಅಂಶವನ್ನು ನೋಡಿ ತೃಪ್ತಿ ಪಡುವವರಿಂದಾಗಿ ಗಾನ ವೈಭವ, ನಾಟ್ಯ ವೈಭವ, ಅರ್ಥ ವೈಭವ ಇವುಗಳನ್ನು ಹಿಗ್ಗಿಸಿ ಪ್ರೇಕ್ಷಕರಿಗೆ ಉಣ ಬಡಿಸುವುದರಿಂದ ಕಲೆಯ ಸ್ವರೂಪಕ್ಕೆ ದಕ್ಕೆ ತರುತ್ತಿದೆಯೆಂದ ಸಾಮಗ ಅವರು ಮಹಿಳಾ, ಮಕ್ಕಳ ಯಕ್ಷಗಾನ ಪ್ರದರ್ಶನಗಳಿಗೆ ಪ್ರೇಕ್ಷಕರ ಕೊರತೆಯಾಗದಿದ್ದರೂ ತಮ್ಮವರ ಕಾರ್ಯಕ್ರಮ ಮುಗಿದ ಬಳಿಕ ಸಮಗ್ರ ಪ್ರಸಂಗ ನೋಡದೇ ಹೊರಹೋಗುತ್ತಿರುವುದಲ್ಲದೆ ತಮ್ಮವರ ಪ್ರದರ್ಶನ ಮಾತ್ರ ಪ್ರಶಂಸಿಸಿಕೊಳ್ಳುವ ಕಲಾ ಸ್ವಾರ್ಥ ತ್ಯಜಿಸಬೇಕಾಗಿದೆಯೆಂದರು. ಯಾವುದೋ ಅಸಂಬದ್ಧ ರೂಪಗಳನ್ನು ಯಕ್ಷಗಾನವೆಂದೇ ತಿಳಿಯುವಂತಾಗದಿರಲು ಉತ್ತಮ ಚಿಂತನೆಗಳಿಗೆ ಪ್ರಚೋದನೆ ಕೊಡುವ ಯಕ್ಷಗಾನವನ್ನು ನಾವು ಹೆಚ್ಚು ಹೆಚ್ಚು ಬೆಳೆಸಬೇಕಾಗಿದೆಯೆಂದ ಸಾಮಗ ಅವರು ಯಕ್ಷಗಾನವು ಪ್ರೇಕ್ಷಕರಿಗೆ ಭಾವನಾತ್ಮಕ ಮತ್ತು ಬೌದ್ಧಿಕ ಸಂಸ್ಕಾರವನ್ನು ಕೊಡುವುದಿಲ್ಲವೋ ಆಗ ಅದು ನಿಧಾನವಾಗಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎಂದರು.
ಸುಪ್ರಸಿದ್ಧ ಯಕ್ಷಗಾನ ವೇಶಧಾರಿ ಕೃಷ್ಣ ನಾಯ್ಕ ಹಳ್ಳಾಡಿ ಅವರನ್ನು ಸನ್ಮಾನಿಸಲಾಯಿತು. ಗುರುವಂದನಾ ಕಾರ್ಯಕ್ರಮದಲ್ಲಿ ರತ್ನಾಕರ ಆಚಾರ್ಯ ಅವರನ್ನು ಗೌರವಿಸಲಾಯಿತು. ಯಕ್ಷಗಾನ ಭಾಗವತ ಪಿ. ಎನ್ ಲಕ್ಷ್ಮಣ ಹಂದೆ ಅವರು ಅಧ್ಯಕ್ಷತೆ ವಹಿಸಿದ್ದರು. ಗೋಪಾಲಕೃಷ್ಣ ಭಟ್, ಪ್ರೊ. ಎಮ್. ಎಲ್. ಸಾಮಗ, ಕೆ.ಟಿ. ಪೂಜಾರಿ, ಗುಂಡಿಬೈಲ್ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸುಧಾಕರ ಜತ್ತನ್ನ ಕಾರ್ಯಕ್ರಮ ನಿರ್ವಹಿಸಿದರು. ಚಕ್ರ ಚಂಡಿಕಾ ಪ್ರಸಂಗದ ಪ್ರದರ್ಶನ ನಡೆಯಿತು. ಚಿತ್ರದಲ್ಲಿ ಬಾ. ಸಾಮಗ ಮಾತನಾಡುತ್ತಿರುವುದು. ಕೆ.ಟಿ. ಪೂಜಾರಿ, ಕೃಷ್ಣ ನಾಯ್ಕ ಗೋಪಾಲಕೃಷ್ಣ ಭಟ್
ಪ್ರೊ. ಎಮ್. ಎಲ್. ಸಾಮಗ, ಸುಧಾಕರ ಜತ್ತನ್ನ ಚಿತ್ರದಲ್ಲಿ ಇದ್ದಾರೆ.

 
 
 
 
 
 
 
 
 
 
 

Leave a Reply