ಸರ್ಪಂಗಳ ಯಕ್ಷೋತ್ಸವ, ಪ್ರಶಸ್ತಿ ಪ್ರದಾನ

ಹನ್ನೊಂದನೆಯ ವರ್ಷದ ‘ಸರ್ಪಂಗಳ ಯಕ್ಷೋತ್ಸವ’ವು ಅಕ್ಟೋಬರ್‌ 15 ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಂಡಿತು. ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ‘ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್‌ ಸ್ಮಾರಕ ಯಕ್ಷಗಾನ ಸಾಧಕ’ ಪ್ರಶಸ್ತಿಯನ್ನು ತೆಂಕುತಿಟ್ಟಿನ ಹಿರಿಯ ಭಾಗವತ, ಮದ್ದಲೆವಾದಕ ಪದ್ಯಾಣ ಜಯರಾಮ ಭಟ್‌ ಅವರಿಗೆ ಮತ್ತು ಸರ್ಪಂಗಳ ಕಲಾಪೋಷಕ ಪುರಸ್ಕಾರವನ್ನು ಕಟೀಲು ಮೇಳದ ಹಿರಿಯ ನೇಪಥ್ಯ ಕಲಾವಿದ ಬಡಕ್ಕೋಡಿ ಪುತ್ತು ನಾಯ್ಕ ಅವರಿಗೆ ನೀಡಿ ಸಂಮಾನಿಸಲಾಯಿತು.
ಪರ್ಯಾಯ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ , ‘ಯಕ್ಷಗಾನವನ್ನು ನೋಡಿ ನಾವು ಆನಂದಿಸುತ್ತೇವೆ. ಹಾಗೆಯೇ ಯಶಸ್ವಿ ಯಕ್ಷಗಾನ ಪ್ರದರ್ಶನಕ್ಕೆ ಕಾರಣರಾಗುವ ರಂಗದ ಮೇಲಿನ ಮತ್ತು ನೇಪಥ್ಯದ ಕಲಾವಿದರನ್ನು ಗುರುತಿಸಿ ಸಂಮಾನಿಸುವುದರಲ್ಲಿಯೂ ಆನಂದವನ್ನು ಅನುಭವಿಸುವ ಉನ್ನತಸಂಸ್ಕಾರ ನಮ್ಮದು. ಕಲೋಪಾಸನೆಯೂ ದೇವೋಪಾಸನೆಯ ಒಂದು ವಿಧಾನವೇ. ಕಲೋಪಾಸನೆಯನ್ನು ತಪಸ್ಸಿನಂತೆ ಕೈಗೊಳ್ಳುವ ಕಲಾವಿದರನ್ನು ಪ್ರಶಸ್ತಿ-ಸಂಮಾನಗಳು ಅರಸಿ ಬರುತ್ತವೆ’ ಎಂದರು.

ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್‌ ಅವರು ಸರ್ಪಂಗಳ ಸುಬ್ರಹ್ಮಣ್ಯ ಭಟ್ಟರ ಸಂಸ್ಮರಣ ಭಾಷಣ ಮಾಡಿ, ಸಂಮಾನಿತರ ಪರಿಚಯ ನೀಡಿದರು, ಕೀರ್ತಿಚೇತನರಾಗಿರುವ ಸರ್ಪಂಗಳ ಸುಬ್ರಹ್ಮಣ್ಯ ಭಟ್ಟರು ಯಕ್ಷಗಾನಕ್ಕೆ ನೀಡಿದ ಪ್ರೋತ್ಸಾಹವನ್ನು ನೆನಪಿಸಿಕೊಂಡರು, ‘ಸರ್ಪಂಗಳ’ ಪರಂಪರೆಯನ್ನು ಅರ್ಥಪೂರ್ಣವಾಗಿ ಮುಂದುವರಿಸುತ್ತಿರುವ ಅವರ ಪತ್ನಿ ಮತ್ತು ಮಕ್ಕಳನ್ನು ಅಭಿನಂದಿಸಿದರು. ಸಂಮಾನಿತರ ಕುರಿತ ನುಡಿಗಳಲ್ಲಿ, ತೆಂಕುತಿಟ್ಟು ಯಕ್ಷಗಾನಕ್ಕೆ ಮಹತ್ತ್ವದ ಕೊಡುಗೆ ನೀಡಿರುವ ಪದ್ಯಾಣ ಮನೆತನದಲ್ಲಿ ಹುಟ್ಟಿರುವ ಜಯರಾಮ ಭಟ್ಟರು ಹವ್ಯಾಸಿ ಮತ್ತು ವೃತ್ತಿಪರ ರಂಗಗಳೆರಡರಲ್ಲಿಯೂ ಸಮನ್ವಯ ಭಾವದಿಂದ ಪಾಲ್ಗೊಂಡು ಭಾಗವತಿಕೆ ಮತ್ತು ಮದ್ದಲೆವಾದನದಲ್ಲಿ ವಿಶೇಷ ಸಾಧನೆ ಮಾಡಿರುವುದನ್ನು ಉಲ್ಲೇಖಿಸಿದರು. ಕಟೀಲು ಮೇಳದಲ್ಲಿ ಐದು ದಶಕಗಳ ಕಾಲ ನೇಪಥ್ಯ ಕಲಾವಿದರಾಗಿ ಸೇವೆ ಸಲ್ಲಿಸಿದ ಪುತ್ತು ನಾಯ್ಕರ ಕರ್ತವ್ಯ ಶ್ರದ್ಧೆಯನ್ನು ಕೂಡ ಶ್ಲಾಘಿಸಿದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್‌ ಮತ್ತು ಸರ್ಪಂಗಳ ಪ್ರಶಸ್ತಿಯ ಪ್ರವರ್ತಕರಾದ ನಳಿನಿ ಸುಬ್ರಹ್ಮಣ್ಯ ಭಟ್‌, ಡಾ. ಶೈಲಜಾ ಎಸ್‌, ಡಾ. ನರೇಂದ್ರ ಶೆಣೈ, ಪದ್ಯಾಣ ಜಯರಾಮ ಭಟ್ಟರ ಪತ್ನಿ ಸುಮಂಗಲಾ ಅವರು ಉಪಸ್ಥಿತರಿದ್ದರು.
ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ‘ಹನುಮೋದ್ಭವ- ಮಾರಣಾಧ್ವರ’ ಎಂಬ ಕಥಾನಕದ ಪ್ರದರ್ಶನ ನಡೆಯಿತು.

 
 
 
 
 
 
 
 
 
 
 

Leave a Reply