ದೇವಸ್ಥಾನ ಸರಕಾರೀಕರಣದ ವಿರುದ್ಧ ಪ್ರಬಲ ಹಿಂದೂ ಸಂಘಟನೆ : ದೇವಸ್ಥಾನಗಳ ರಾಜ್ಯ ಮಟ್ಟದ ಪರಿಷತ್ತು

ದೇವಸ್ಥಾನಗಳು ಮತ್ತು ದೇವಸ್ಥಾನದ ಧರ್ಮಪರಂಪರೆಯ ರಕ್ಷಣೆಗಾಗಿ ಸಿದ್ಧರಾಗಿ !

ಪ್ರಸ್ತಾವನೆ : ದೇವಸ್ಥಾನಗಳು ಹಿಂದೂ ಧರ್ಮದ ಆಧಾರಸ್ತಂಭವಾಗಿದೆ. ಸಾವಿರಾರು ವರ್ಷಗಳಿಂದ ಹಿಂದೂ ಸಂಸ್ಕೃತಿಯ ರಕ್ಷಣೆ, ಜೋಪಾಸನೆ ಮತ್ತು ಸಂವರ್ಧನೆಯಲ್ಲಿ ದೇವಸ್ಥಾನದ ಭೂಮಿಕೆ ಅನನ್ಯ ಸಾಧಾರಣವಾಗಿದೆ. ದೇವಸ್ಥಾನಗಳನ್ನು ಹಿಂದೂ ಧರ್ಮದ ವೈಭವವೆಂದು ತಿಳಿಯಲಾಗುತ್ತದೆ. ಅದರಿಂದ ದೊರೆಯುವ ಚೈತನ್ಯದಿಂದಲೇ ಇಂದಿಗೂ ಸಮಾಜವು ದೇವಸ್ಥಾನಗಳ ಕಡೆಗೆ ಆಕರ್ಷಿತಗೊಳ್ಳುತ್ತಿದೆ.

ಹೀಗಿರುವಾಗಲೂ; ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಇಂದು ದೇವಸ್ಥಾನದ ಖಜಾನೆಯ ಮೇಲೆ ವಕ್ರ ದೃಷ್ಟಿಯನ್ನಿಟ್ಟು ಅದರ ನಿಯಂತ್ರಣ ಪಡೆಯಲಾಗುತ್ತಿದೆ. ರಾಜ್ಯದಲ್ಲಿ ಸರಕಾರಿಕರಣಗೊಂಡಿರುವ ಅನೇಕ ದೇವಸ್ಥಾನಗಳ ಸಂಪತ್ತು ದೂರುಪಯೋಗ ವಾಗುವುದು ನೋಡುತ್ತೇವೆ.

ಅಂಕಿ-ಅಂಶಗಳಿಂದ ಸಿಕ್ಕಿದ ಮಾಹಿತಿಗನುಸಾರ ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ, ಮೈಸೂರಿನ ಚಾಮುಂಡೇಶ್ವರಿ, ಕೊಲ್ಲೂರು ಮೂಕಾಂಬಿಕಾ, ಸವದತ್ತಿ ಎಲ್ಲಮ್ಮ ದೇವಸ್ಥಾನ ಸೇರಿದಂತೆ  35,559 ದೇವಸ್ಥಾನಗಳು, ಕೇರಳದಲ್ಲಿ ಶಬರಿಮಲೆ, ಗುರು ವಾಯೂರು ಸೇರಿ 2992 ದೇವಸ್ಥಾನಗಳು, ತಮಿಳುನಾಡಿನಲ್ಲಿ ಮದುರೈ ಮೀನಾಕ್ಷಿ ಸೇರಿದಂತೆ 44121 ದೇವಸ್ಥಾನ ಗಳು, ಆಂಧ್ರಪ್ರದೇಶದಲ್ಲಿ ತಿರುಪತಿ ಸೇರಿದಂತೆ 24,632 ದೇವಸ್ಥಾನಗಳು, ತೆಲಂಗಣದಲ್ಲಿ 12,300 ಹೀಗೆ, ಒಟ್ಟು ಕೇವಲ ದಕ್ಷಿಣ ಭಾರತದಲ್ಲಿ  1.18 ಲಕ್ಷ ಹಿಂದೂಗಳ ದೇವಸ್ಥಾನಗಳು ಜಾತ್ಯಾತೀತ ಸರಕಾರದ ನಿಯಂತ್ರಣದಡಿಯಲ್ಲಿವೆ.

ಒಟ್ಟು ಇಡೀ ದೇಶದಲ್ಲಿ ಸರಿಸುಮಾರು 4 ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಡಿಯಲ್ಲಿ ತರಲಾಯಿತು. ಈ ಮೂಲಕ ಲಕ್ಷಾಂತರ ಕೋಟಿ ಮೌಲ್ಯದ ದೇವಸ್ಥಾನಗಳ ಚಿನ್ನ, ಆಭರಣಗಳು, ಹುಂಡಿಯಲ್ಲಿರುವ ದೇವನಿಧಿ, ಹಾಗೂ ಲಕ್ಷಾಂತರ ಎಕರೆ ಬೆಲೆಬಾಳುವ ಜಮೀನುಗಳನ್ನು ಜಾತ್ಯತೀತ ಸರಕಾರಕ್ಕೆ ಒಪ್ಪಿಸಲಾಯಿತು.

ಇದರಲ್ಲಿನ ಅನೇಕ ದೇವಸ್ಥಾನ ಸಮಿತಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆಗಳು ನಡೆಯುತ್ತಿವೆ. ಸರಕಾರಿಕರಣ ಗೊಂಡಿರುವ ದೇವಸ್ಥಾನಗಳ ಧರ್ಮಪರಂಪರೆಗಳ ಮೇಲೆ ಹಸ್ತಕ್ಷೇಪ ಮಾಡಲಾಗುತ್ತಿದೆ. ಈ ಎಲ್ಲವನ್ನು ತಡೆಯಲು ದೇವಸ್ಥಾನದ ಪ್ರತಿನಿಧಿಗಳ ಪ್ರಬಲ ಸಂಘಟನೆಯಾಗುವುದು ಆವಶ್ಯಕವಾಗಿದೆ. ಆದ್ದರಿಂದ ಹಿಂದೂಗಳು ಕೇವಲ ಜಾಗೃತರಾಗುವುದಷ್ಟೇ ಅಲ್ಲ, ಇದರ ವಿರುದ್ಧ ವ್ಯಾಪಕ ಜನಾಂದೋಲನ ನಡೆಸುವ ಸಮಯ ಬಂದಿದೆ.

ಆ ದಿಶೆಯಲ್ಲಿ ಮುಂದಡಿಯಿಟ್ಟು ದೇವಸ್ಥಾನಗಳ ರಾಜ್ಯ ಮಟ್ಟದ ಪರಿಷತ್ತು ನಡೆಯಲಿದೆ ! ಬೆಂಗಳೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿ ಮತ್ತು ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಡಿಸೆಂಬರ್ 16 ಮತ್ತು 17 2023 ರಂದು ದೇವಸ್ಥಾನಗಳು ಮತ್ತು ದೇವಸ್ಥಾನದ ಧರ್ಮಪರಂಪರೆಯ ರಕ್ಷಣೆಗಾಗಿ ದೇವಸ್ಥಾನಗಳ ರಾಜ್ಯ ಮಟ್ಟದ ಪರಿಷತ್ತು ಆಯೋಜನೆಯಾಗಿದೆ. ಅದರಲ್ಲಿ ದೇವಸ್ಥಾನ ಸರಕಾರಿಕರಣದ ವಿರುದ್ಧ ಅಭೇದ್ಯ ಹಿಂದೂ ಸಂಘಟನೆ ಏಕೆ ಅವಶ್ಯಕವಾಗಿದೆ, ಈ ವಿಷಯದ ಕುರಿತು ಯೋಗ್ಯ ದಿಶಾದರ್ಶನ ಸಿಗಲಿದೆ. ಇದೇ ಈ ಲೇಖನದ ಉದ್ದೇಶವಾಗಿದೆ.

ರಾಜ್ಯದ ವಿವಿಧ ದೇವಸ್ಥಾನಗಳ ಜಮೀನು ಲೂಟಿ :
17 ಸೆಪ್ಟೆಂಬರ್ 2020 ರಲ್ಲಿ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ಸೌ. ರೋಹಿಣಿ ಸಿಂಧೂರಿ ಇವರು ಹೇಳಿಕೆಯಂತೆ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಬಳಿ ದೇವಸ್ಥಾನದ  10,000 ಕೋಟಿ ಮೌಲ್ಯದ ಜಮೀನು ಸರ್ವೇ ಯಾಗದೆ ಹಾಗೆ ಪಾಳು ಬಿದ್ದಿದೆ. 2007 ರಲ್ಲಿ ವಿಧಾನ ಸಭೆಯಲ್ಲಿ ಮಂಡನೆಯಾದ ಎ.ಟಿ ರಾಮಸ್ವಾಮಿ ಸಮಿತಿಯ ವರದಿಯಂತೆ ಕೇವಲ ಬೆಂಗಳೂರು ನಗರ ದೇವಸ್ಥಾನದ 39.09 ಎಕರೆಯ, 165.55 ಕೋಟಿ ಮೌಲ್ಯದ ಜಮೀನು ಅತಿಕ್ರಮಣವಾಗಿದೆ. ಇದುವರೆಗೆ ಅಧಿಕಾರಿಗಳು ಭೂಗಳ್ಳರಿಂದ ದೇವಸ್ಥಾನದ ಜಮೀನು ವಾಪಸು ಪಡೆಯಲು ಯಾವುದೇ ಪ್ರಯತ್ನ ಮಾಡಿಲಿಲ್ಲ.

೧. ಮಹಾರಾಷ್ಟ್ರ ಸರಕಾರದ ನಿಯಂತ್ರಣದಲ್ಲಿರುವ ದೇವಸ್ಥಾನದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ : ದೇವಸ್ಥಾನ ದೈವಿ ಚೈತನ್ಯದ ಕೇಂದ್ರವಾಗಿದೆ. ಆದರೆ ಈ ದೇವಸ್ಥಾನಗಳ ಸಂಪತ್ತಿನ ಮೇಲೆ ವಕ್ರ ದೃಷ್ಟಿ ಬೀರಿ ಕೆಲವು ದೇವಸ್ಥಾನಗಳ ಸರಕಾರಿಕರಣ ಮಾಡಲಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರ, ತುಳಜಾಪುರ, ಫಂಡರಪುರ ಮುಂತಾದ ಕೆಲವು ಪ್ರಸಿದ್ಧ ತೀರ್ಥಕ್ಷೇತ್ರಗಳು ಸರಕಾರೀಕರಣವಾಗಿವೆ. ಸರಕಾರೀಕರಣಗೊಂಡಿರುವ ದೇವಸ್ಥಾನಗಳ ಟ್ರಸ್ಟಿನಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ, ಹಾಗೂ ದುರಾಡಳಿತ ಕಂಡು ಬರುತ್ತಿದೆ.

ಒಟ್ಟಾರೆ ನೋಡಿದಾಗ ಅನೇಕ ದೇವಸ್ಥಾನಗಳು ಸರಕಾರದ ನಿಯಂತ್ರಣದಲ್ಲಿದ್ದು, ಆ ಪ್ರತಿಯೊಂದು ದೇವಸ್ಥಾನದಲ್ಲಿ ಈ ರೀತಿಯ ಹಗರಣಗಳನ್ನು ನೋಡಿದರೆ ಆಶ್ಚರ್ಯವೇನಲ್ಲ. ಸರಕಾರೀಕರಣಗೊಂಡಿರುವ ಸಾಯಿಬಾಬಾ ಸಂಸ್ಥಾನದಿಂದ ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಇವರ ಕೆಲವೇ ಗಂಟೆಗಳ ಪ್ರವಾಸಕ್ಕಾಗಿ 93 ಲಕ್ಷ ರೂಪಾಯಿ ಖರ್ಚು ಮಾಡಿತ್ತು. ಪಂಡರಪುರದ ದೇವಸ್ಥಾನ ಸಮಿತಿಯಂತೂ ಗೋಶಾಲೆಯ ಗೋವುಗಳನ್ನು ಕಸಾಯಿಖಾನೆಗೆ ಮಾರಿ ಅದರಿಂದ ಹಣ ಒಟ್ಟು ಮಾಡಿತ್ತು. ಮುಂಬಯಿದಲ್ಲಿನ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಕೋಟ್ಯಾಂತರ ರೂಪಾಯಿ ರಾಜಕಾರಣಿಗಳ ಖಾತೆಗೆ ವರ್ಗಾಯಿಸಲಾಗಿದೆ. ಇದರಿಂದಲೇ ದೇವಸ್ಥಾನಗಳ ಸರಕಾರಿಕರಣದ ಭಯಾನಕತೆ ಗಮನಕ್ಕೆ ಬರುತ್ತದೆ.

೨. ದೇವಸ್ಥಾನದ ಸಂಪತ್ತಿನ ಮೇಲೆ ವಕ್ರದೃಷ್ಟಿಯೆಂದರೆ ಹಿಂದೂಗಳ ಮೇಲಿನ ಆಘಾತವೇ !
ಸದ್ಯದ ಸ್ಥಿತಿಯಲ್ಲಿ ದೇವಸ್ಥಾನಗಳ ಸಂಪತ್ತಿನ ಮೇಲೆ ಸರಕಾರದ ವಕ್ರದೃಷ್ಟಿ ಬೀರಿದ್ದು, ದೇವಾಲಯಕ್ಕೆಂದು ಹಿಂದೂಗಳು ನೀಡುವ ಹಣ ಸರಕಾರದ ಬೊಕ್ಕಸ ಸೇರುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಹಿಂದೂಗಳ ಶ್ರೀಮಂತ ದೇವಸ್ಥಾನಗಳ ಬಳಿಯಿರುವ ಸಂಪತ್ತಿನ ಮಾಹಿತಿ ಸಾರ್ವಜನಿಕಗೊಳಿಸುವಂತೆ  ಆದೇಶ ನೀಡಿದೆ. ಇದು ಖಂಡಿತವಾಗಿಯೂ ಹಿಂದೂಗಳ ಮೇಲಿನ ಆಘಾತವೇ ಆಗಿದೆ.

೩. ದೇವರ ಹುಂಡಿಯ ಹಣದ ದುರುಪಯೋಗ : ಕೇವಲ ದೇವಸ್ಥಾನಗಳ ಸರಕಾರಿಕರಣವಷ್ಟೇ ಅಲ್ಲದೆ ದೇವರ ಹುಂಡಿಯ ಹಣವನ್ನೂ ದುರುಪಯೋಗ ಮಾಡಲಾಗುತ್ತಿದೆ. ದೇವಸ್ಥಾನಗಳನ್ನು ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರಿಸುವ ಕುರಿತು ಮಹಾರಾಷ್ಟ್ರದ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಟ್ರಸ್ಟ್ ನಿಂದ ಜನವರಿ 28 ಮತ್ತು 29. 2006 ರಲ್ಲಿ ಸೆವೆನ್ ಸ್ಟಾರ್ ಹೋಟೆಲ್ ಐಟಿಸಿ ಗ್ರೇಟ್ ಶೇರೆಟನ ಹೋಟೆಲ್ ನಲ್ಲಿ ಎರಡು ದಿನದ ಅಂತರಾಷ್ಟ್ರೀಯ ಪರಿಷತ್ತಿನ ಆಯೋಜನೆ ಮಾಡಲಾಗಿತ್ತು. ಅದರಲ್ಲಿ ಭಕ್ತರು ದೇವಾಲಯಕ್ಕೆಂದು ಅರ್ಪಿಸಿದ್ದ 93 ಲಕ್ಷ ರೂಪಾಯಿ ಸರಕಾರಿ ಟ್ರಸ್ಟ್ ನಿಂದ ಖರ್ಚು ಮಾಡಲಾಯಿತು.

ಈ ಹಿಂದೆಯೂ ಸರಕಾರಿಕರಣಗೊಂಡಿರುವ ಅನೇಕ ದೇವಸ್ಥಾನಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು ಸ್ಪಷ್ಟವಾಗಿದೆ. ಇದರೊಂದಿಗೆ ದೇವಸ್ಥಾನಗಳ ಸರಕಾರೀಕರಣದ ನಂತರ ಪ್ರಾಚೀನ ಕಾಲದಿಂದ ನಡೆದು ಬರುತ್ತಿರುವ ಪದ್ಧತಿಗಳನ್ನು ನಿಲ್ಲಿಸುವುದು, ಅದರಲ್ಲಿ ಬೇಕಾಬಿಟ್ಟಿ ಬದಲಾವಣೆ ಮಾಡುವುದು, ಧಾರ್ಮಿಕ ವಿಧಿಗಳಿಗಾಗಿ ಆವಶ್ಯಕ ಸಮಯ ಕಡಿಮೆ ಗೊಳಿಸುವುದು, ಜೊತೆಗೆ ಪರಂಪರೆಗಳಿಂದ ಇರುವ ಅರ್ಚಕರನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ.

೪. ಧರ್ಮಶಾಸ್ತ್ರಗಳ ಪಾಲನೆ ಮಾಡದಿರುವುದು :
ಕೊಲ್ಹಾಪುರದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಟ್ರಸ್ಟ್ ನಿಂದ ನಡೆದಿದ್ದ ಭ್ರಷ್ಟಾಚಾರದ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದ ಸರಕಾರವು ತ್ವರಿತವಾಗಿ ಮಾರ್ಚ್ 2018 ರಲ್ಲಿ ದೇವಸ್ಥಾನದಲ್ಲಿ ವೇತನ ನೀಡಿ ಅರ್ಚಕರನ್ನು ನೇಮಿಸುವ ನಿರ್ಣಯ ತೆಗೆದುಕೊಂಡಿತು. ಪಶ್ಚಿಮ ಮಹಾರಾಷ್ಟ್ರ ದೇವಸ್ಥಾನ ಆಡಳಿತ ಸಮಿತಿಯಿಂದ ಮಹಾಲಕ್ಷ್ಮೀ ದೇವಸ್ಥಾನದಲ್ಲಿರುವ ಪ್ರಾಚೀನ ಮನಕರ್ಣಿಕಾ ಕಲ್ಯಾಣಿಯನ್ನು ಮುಚ್ಚಿಸಿ ಅಲ್ಲಿ ಶೌಚಾಲಯ ಕಟ್ಟುವ ದುಷ್ಕರ್ಮ ಮಾಡಿದರು.

ಇದರ ವಿರುದ್ಧ ಅನೇಕ ಬಾರಿ ಮನವಿ ನೀಡಲಾಯಿತು, ಜೊತೆಗೆ ಪ್ರತಿಭಟನೆ ನಡೆಸಿದರೂ ಯಾವುದೇ ಕೃತಿಯಾಗದಿದ್ದಾಗ ಶಿವಸೇನೆಯ ಕೊಲ್ಹಾಪುರದ ಆಗಿನ ಶಾಸಕ ರಾಜೇಶ ಕ್ಷೀರಸಾಗರ್ ಇವರ ನೇತೃತ್ವದಲ್ಲಿ ಶಿವಸೈನಿಕರಿಂದ ಅದನ್ನು ನೆಲಸಮ ಮಾಡಲಾಯಿತು. 2014 ರಲ್ಲಿ ಸರಕಾರಿ ಇಲಾಖೆಯಲ್ಲಿನ ಕೆಲವು ಧರ್ಮ ವಿರೋಧಿಗಳಿಂದ ಪಂಡರಪುರದ ದೇವಸ್ಥಾನದಲ್ಲಿ ಶ್ರೀ ವಿಠಲನ ಪೂಜೆ ಮಾಡುವ ಕೆಲವು ನಿಯಮಿತ ಪೂಜಾರಿಗಳನ್ನು ಬದಲಿಸಿ ಅಲ್ಲಿ ಹೊಸ ಪೂಜಾರಿಗಳನ್ನು ನೇಮಕಗೊಳಿಸಿದರು. ಇಂತಹ ಅನೇಕ ಉದಾಹರಣೆಗಳು ಇವೆ.

೫. ದೇವಸ್ಥಾನದ ವಿಶ್ವಸ್ಥರು ಮತ್ತು ಪೂಜಾರಿಗಳ ಸಹಭಾಗ : 
ಅನ್ಯಪಂಥೀಯರಿಗೆ ಅವರ ಪಂಥದ ಅಥವಾ ಅವರ ಪಂಥದಲ್ಲಿನ ಶಾಸ್ತ್ರದ ಅನೇಕ ಮಾಹಿತಿ ತಿಳಿದಿರುತ್ತದೆ. ಕೆಲವು ಪ್ರಸಂಗಗಳಲ್ಲಿ ಅವರು ಸಂಬಂಧಿತ ಸಂಪ್ರದಾಯಗಳಿಗೆ ಮಾರ್ಗದರ್ಶಕರಿಂದ ಸಲಹೆ ಪಡೆದು ತಮ್ಮ ರಣನೀತಿಯನ್ನು ತಯಾರಿಸುತ್ತಾರೆ. ಆದರೆ ಇದೇ ವಿಷಯ ಹಿಂದೂ ಜನಪ್ರತಿನಿಧಿಗಳ ಸಂದರ್ಭದಲ್ಲಿ ಬಂದಾಗ, ಅವರಿಗೆ ದೇವಸ್ಥಾನದ ಮಹತ್ವ, ಹಿಂದೂ ಧರ್ಮ ಮತ್ತು ಧರ್ಮಶಾಸ್ತ್ರದ ಮಾಹಿತಿ ಇರುವುದಿಲ್ಲವೆಂದು ತಿಳಿದು ಬರುತ್ತದೆ. ಆದ್ದರಿಂದ ಹಿಂದೂ ಧರ್ಮ, ಧರ್ಮಶಾಸ್ತ್ರ, ಹಾಗೂ ದೇವರ ಮೇಲೆ ಶ್ರದ್ಧೆ ಇರುವವರೇ ದೇವಸ್ಥಾನದ ಪ್ರತಿನಿಧಿತ್ವ ವಹಿಸಿಕೊಳ್ಳಬೇಕು, ಎಂದು ಹಿಂದೂಗಳು ಸ್ಪಷ್ಟವಾಗಿ ಹೇಳುವ ಸಮಯ ಈಗ ಬಂದಿದೆ.

ದೇವಸ್ಥಾನದ ವಿಶ್ವಸ್ಥರು ಹಾಗೂ ಪೂಜಾರಿಗಳು ದೇವಸ್ಥಾನದ ರಕ್ಷಣೆಗಾಗಿ ಈ ರೀತಿಯಲ್ಲಿ ಸಹಭಾಗಿಯಾದರೆ, ಖಂಡಿತವಾಗಿಯೂ ದೇವಸ್ಥಾನದ ಪಾವಿತ್ರ‍್ಯತೆ ಶಾಶ್ವತವಾಗಿರುವುದು.

೧. ದೇವಸ್ಥಾನದ ಸರಕಾರಿಕರಣ ಹಾಗೂ ಸರಕಾರದಿಂದ ನಡೆಯುವ ದೇವಸ್ಥಾನಗಳ ಅಕ್ರಮಗಳ ವಿರುದ್ಧ ಕಾನೂನು ಮಾರ್ಗ ದಲ್ಲಿ ಎಲ್ಲಾ ಸ್ತರದ ಜನರಿಗೆ ಜಾಗೃತಿ ಮೂಡಿಸಿ.

೨. ದೇವಸ್ಥಾನಕ್ಕೆ ಸಂಬಂಧಿತ ಪ್ರಸ್ತುತ ಕಾನೂನಿನ (ಉದಾ. ಪ್ಲೇಸಸ್ ಆಫ್ ವರ್ಷಿಪ್) ಕಾರಣದಿಂದಾಗುವ ದುಷ್ಪರಿಣಾಮಗಳ ಅಧ್ಯಯನ ಮಾಡಿ ಅಂತಹ ಕಾನೂನುಗಳನ್ನು ತೆರವುಗೊಳಿಸಲು  ಆವಶ್ಯಕ ಪ್ರಯತ್ನ ಮಾಡುವುದು.

೩. ಪ್ರತಿ ಕ್ಷೇತ್ರದ ದೇವಸ್ಥಾನದ ವಿಶ್ವಸ್ಥರು, ಪೂಜಾರಿಗಳು, ಭಕ್ತರು, ಹಿತಚಿಂತಕರು, ಮುಂತಾದವರ ಸಂಘಟನೆ ಮಾಡುವುದು.

೪. ದೇವಸ್ಥಾನದ ಧಾರ್ಮಿಕ ಸಂಪ್ರದಾಯಗಳ ಪಾಲನೆ, ಪದ್ಧತಿಗಳನ್ನು ರಕ್ಷಿಸುವುದು, ಜೊತೆಗೆ ದೇವಸ್ಥಾನದ ಪಾವಿತ್ರ‍್ಯತೆ ರಕ್ಷಣೆ, ಸ್ವಚ್ಛತೆ, ನಿಯಮಗಳ ಪಾಲನೆ, ಶಿಸ್ತು ಮುಂತಾದರ ಪಾಲನೆ ಮಾಡಲು ಹೆಚ್ಚಿನ ಗಮನ ನೀಡುವುದು.

೫. ಹಿಂದೂಗಳಿಗೆ ಧರ್ಮಶಿಕ್ಷಣ ದೊರೆಯಲು ಗುರುಕುಲ, ವೇದಪಾಠ ಶಾಲೆಗಳು, ಜೊತೆಗೆ ಗೋಶಾಲೆಗಳನ್ನು ಆರಂಭಿಸಿ ದೇವಸ್ಥಾನಗಳ ವಾಸ್ತವಿಕ ಲಾಭ ಹಿಂದೂ ಸಮಾಜಕ್ಕೆ ಸಿಗುವಂತೆ ಪ್ರಯತ್ನಿಸುವುದು.

೬. ದೇವಸ್ಥಾನ ಪರಿಷತ್ತಿನ ಕಾರ್ಯದಲ್ಲಿ ಸಹಭಾಗಿಯಾಗಿರಿ ಹಾಗೂ ಇತರರನ್ನೂ ಸಹಭಾಗ ಮಾಡಿಸಿ.

ಸಂಗ್ರಹ: ಶ್ರೀ. ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು,  ಹಿಂದೂ ಜನಜಾಗೃತಿ ಸಮಿತಿ
(ಸಂಪರ್ಕ : 9343017001)
 
 
 
 
 
 
 
 
 
 
 

Leave a Reply