ದಾವಣಗೆರೆಯಲ್ಲಿ ಮತ್ತೊಬ್ಬ ಶಂಕಿತ ಉಗ್ರ ಸೆರೆ!

ಬೆಂಗಳೂರನ್ನು ಟಾರ್ಗೆಟ್ ಮಾಡ್ಕೊಂಡು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಐವರು ಉಗ್ರರು ಸೆರೆಸಿಕ್ಕ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯಲ್ಲಿಯೂ ಮತ್ತೊಬ್ಬ ಉಗ್ರ ಸೆರೆ ಸಿಕ್ಕಿದ್ದು, ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರಿನ ಫಯಾಜ್ (32) ಬಂಧಿತ ವ್ಯಕ್ತಿ. ದಾವಣಗೆರೆ ನಗರದ ಆಜಾದ್ ನಗರದಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಬೆಂಗಳೂರು, ಚಿತ್ರದುರ್ಗದಲ್ಲಿ ವುಡ್ ಪಾಲಿಶ್ ಕೆಲಸ ಮಾಡುತ್ತಿದ್ದ ಫಯಾಜ್, ಬೆಂಗಳೂರಿನಲ್ಲಿ ಸೆರೆ ಸಿಕ್ಕವರ ಜೊತೆಗೆ ಸಂಪರ್ಕದಲ್ಲಿರುವ ಮಾಹಿತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗುತ್ತಿದೆ. ದಾವಣಗೆರೆಯಲ್ಲಿ ಈತನ ಎರಡನೇ ಪತ್ನಿ ಇದ್ದು, ಆಗಾಗ್ಗೆ ಇಲ್ಲಿಗೆ ಬಂದು ಹೋಗುತ್ತಿದ್ದ. ಬೆಂಗಳೂರಿನಲ್ಲಿ ಒಂದು ಮದುವೆಯಾಗಿದ್ದರೂ ದಾವಣಗೆರೆಯಲ್ಲಿಯೂ ಮದುವೆಯಾಗಿ ಸಂಸಾರ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. 

ಬೆಂಗಳೂರು, ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನಿಂದ ಬಂದು ದಾವಣಗೆರೆಯಲ್ಲಿ ಒಂದೆರಡು ದಿನ ಇರುತ್ತಿದ್ದರೂ ಆತನ ಬಗ್ಗೆ ಅಕ್ಕಪಕ್ಕದವರಿಗೆ ಹೆಚ್ಚಿನ ಮಾಹಿತಿ ಇಲ್ಲ. ಫಯಾಜ್ ಈ ಹಿಂದೆಯೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪಗಳಿದ್ದವು. ಬೆಂಗಳೂರಿನಲ್ಲಿ ಡ್ರಗ್ಸ್, ಆಯುಧ ಮಾರಾಟ ಸೇರಿ ಐದು ಪ್ರಕರಣ ಎದುರಿಸುತ್ತಿದ್ದ. ಅಕ್ರಮ ಆಯುಧ ಮಾರಾಟ ಪ್ರಕರಣದಲ್ಲಿ ಜೈಲು ಸೇರಿದ್ದು ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಎಂದು ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಮಾಹಿತಿ ನೀಡಿದ್ದಾರೆ.

ಇದೇ ವೇಳೆ, ಬೆಂಗಳೂರಿನಲ್ಲಿ ಸೆರೆಸಿಕ್ಕ ಐದನೇ ಆರೋಪಿ ಮನೆಯಲ್ಲಿ 4 ಜೀವಂತ ಗ್ರೆನೇಡ್‌ ಪತ್ತೆಯಾಗಿದೆ. ಬಂಧಿತ ಜಾಹೀದ್‌ನ ಕೊಡಿಗೆಹಳ್ಳಿ ನಿವಾಸದಲ್ಲಿ ಗ್ರೆನೇಡ್‌ಗಳು ಸಿಕ್ಕಿದ್ದು ಬೆಂಗಳೂರಲ್ಲಿ ದೊಡ್ಡ ಮಟ್ಟದ ದಾಳಿಗೆ ಉಗ್ರರು ಸಂಚು ರೂಪಿಸಿದ್ದರೆಂಬುದು ಬಹಿರಂಗವಾಗಿದೆ. 

ಜಾಹೀದ್‌ನ ಬೆಂಗಳೂರಿನ ಕೊಡಿಗೆಹಳ್ಳಿಯ ನಿವಾಸದಲ್ಲಿ ಗ್ರೆನೇಡ್‌ಗಳನ್ನು ಕೆಮಿಕಲ್ ಮತ್ತು ಮರಳು ತುಂಬಿದ್ದ ಚೀಲದಲ್ಲಿ ಗ್ರೆನೇಡ್‌ಗಳನ್ನು ಇಡಲಾಗಿತ್ತು ಎಂಬುದನ್ನು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಡಾ ಎಸ್‌ಡಿ ಶರಣಪ್ಪ ಖಚಿತಪಡಿಸಿದ್ದಾರೆ. ಅಲ್ಲದೇ ಐವರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿ ವಶಕ್ಕೆ ಪಡೆದಿದ್ದೇವೆ ಎಂದು ಹೇಳಿದ್ದಾರೆ. 

5ನೇ ಆರೋಪಿ ಜಾಹೀದ್‌ ತಲೆಮರೆಸಿಕೊಂಡಿರುವ ಜುನೈದ್‌ ಜೊತೆ ಸಂಪರ್ಕದಲ್ಲಿದ್ದ. ಪ್ರಮುಖ ಆರೋಪಿ ನೀಡಿದ್ದ ಗ್ರೆನೇಡ್‌ಗಳನ್ನು ಮನೆಯಲ್ಲಿ ಸುರಕ್ಷಿತವಾಗಿಟ್ಟಿದ್ದ. ಆರೋಪಿ ನೀಡಿದ ಮಾಹಿತಿ ಮೇರೆಗೆ ನಮ್ಮ ತಂಡ ಮನೆಗೆ ತೆರಳಿ ಪರಿಶೀಲಿಸಿದಾಗ 4 ಜೀವಂತ ಗ್ರೆನೇಡ್‌ಗಳು ಸಿಕ್ಕಿವೆ ಎಂದು ಹೇಳಿದರು. ಪ್ರಕರಣ ಸಂಬಂಧ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ತಲೆಮರೆಸಿಕೊಂಡಿರುವ ಆರೋಪಿ ಜುನೈದ್‌ ವಿದೇಶದಲ್ಲಿರುವ ಮಾಹಿತಿ ಇದ್ದು, ಆರೋಪಿಯ ಪತ್ತೆಗಾಗಿ ಬೇರೆ ಬೇರೆ ತನಿಖಾ ಸಂಸ್ಥೆಗಳನ್ನು ಸಂಪರ್ಕಿಸಿದ್ದೇವೆ ಎಂದು ಡಾ.ಎಸ್‌.ಡಿ ಶರಣಪ್ಪ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply