ರಾಜ್ಯಾದ್ಯಂತ ‘ಶಕ್ತಿ’ ಯೋಜನೆಗೆ ಗ್ರೀನ್ ಸಿಗ್ನಲ್

ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಅಥವಾ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚಾಲನೆ ನೀಡಿದರು.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು ದೀಪ ಬೆಳಗುವುದರ ಮೂಲಕ ಶಕ್ತಿ ಯೋಜನೆ ಉದ್ಘಾಟಿಸಿದರು. ಬಳಿಕ ಶಕ್ತಿ ಯೋಜನೆಯ ಲೋಗೋ ಮತ್ತು ಸ್ಮಾರ್ಟ್ ಕಾರ್ಡ್ ಮಾದರಿಯನ್ನು ಬಿಡುಗಡೆ ಮಾಡಿದರು. ಇದೇ ವೇಳೆ ಸಾಂಕೇತಿಕವಾಗಿ ಐದು ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಯಿತು.

ಚಾಲನೆ ನೀಡಿದ ಬಳಿಕ ಸಿಎಂ ಸಿದ್ದರಾಮ್ಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು ಬಿಎಂಟಿಸಿ ಬಸ್​ನಲ್ಲಿ ಮೆಜೆಸ್ಟಿಕ್​ಗೆ ಒಟ್ಟಿಗೆ ಪ್ರಯಾಣ ಬೆಳೆಸಿದರು. ಈ ವೇಳೆ ಡಿಸಿಎಂ ಡಿಕೆಶಿ ಅವರು ಮಹಿಳೆಯರಿಗೆ ಉಚಿತವಾಗಿ ಟಿಕೆಟ್​ ಸಹ ವಿತರಣೆ ಮಾಡಿದರು. ಬಸ್​ ಮೆಜಿಸ್ಟಿಕ್ ತಲುಪಿದ ಬಳಿಕ ​ಧರ್ಮಸ್ಥಳಕ್ಕೆ ಹೊರಡುವ ಮೊದಲ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಸಿಎಂ ಸಿದ್ದರಾಮಯ್ಯ ಟಿಕೆಟ್ ವಿತರಣೆ ಮಾಡುವ ಮೂಲಕ ಶಕ್ತಿ ಯೋಜನೆಗೆ ಅಧಿಕೃತ ಚಾಲನೆ ನೀಡಿದರು. ಬಳಿಕ ಮೆಜೆಸ್ಟಿಕ್​ನಿಂದ ಹೊರಟ ಬಸ್​ಗಳಿಗೆ ಬಸ್‌ಗಳಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಮತ್ತು ಸಾರಿಗೆ ಸಚಿವರು ಹಸಿರು ನಿಶಾನೆ ತೋರಿದರು.

ಕಾರ್ಯಕ್ರಮದಲ್ಲಿ  ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಸಚಿವರಾದ ಕೆ. ಜೆ. ಜಾರ್ಜ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕರಾದ ರಿಜ್ವಾನ್ ಅರ್ಷದ್, ಗೋವಿಂದರಾಜ್, ಬಿ ಕೆ ಹರಿಪಸ್ರಾದ್, ಯು. ಬಿ. ವೆಂಕಟೇಶ್, ನಾಗರಾಜ್ ಯಾದವ್ ಹಾಗೂ ಎ. ಸಿ. ವೆಂಕಟೇಶ ಉಪಸ್ಥಿತರಿದ್ದಾರೆ.

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರು (ವಿದ್ಯಾರ್ಥಿನಿಯರು ಸೇರಿದಂತೆ) ಮತ್ತು ಲಿಂಗತ್ವ ಅಲ್ಪಸಂಖ್ಯಾತರು ನಗರ, ಸಾಮಾನ್ಯ ಮತ್ತು ವೇಗದೂತ ಸಾರಿಗೆಗಳಲ್ಲಿ (ಎ.ಸಿ. ಬಸ್ ಮತ್ತು ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ) ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ಶಕ್ತಿ ಯೋಜನೆ ಕುರಿತಂತೆ ಈ ಕೆಳಗಿನ ಷರತ್ತುಗಳನ್ನೂ ವಿಧಿಸಲಾಗಿದೆ:

1. ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ (ಎಲ್ಲಾ ಅಂತರ ರಾಜ್ಯ ಸಾರಿಗೆ ಅನುಸೂಚಿಗಳನ್ನು ಹೊರತುಪಡಿಸಿ) ಈ ಯೋಜನೆ ಅನ್ವಯಿಸುತ್ತದೆ.

2. ಐಷಾರಾಮಿ ಬಸ್‌ಗಳಾದ ರಾಜಹಂಸ, ನಾನ್ ಎ.ಸಿ. ಸ್ಲೀಪರ್ ಹಾಗೂ ವಜ್ರ, ವಾಯುವಜ್ರ, ಐರಾವತ, ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ಡ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಫ್ಲೈ ಬಸ್, ಇವಿ ಪವರ್ ಪ್ಲಸ್ (ಎ.ಸಿ. ಬಸ್‌ಗಳು) ಬಸ್​ಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ.

3. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಹೊರತುಪಡಿಸಿ, ಉಳಿದ ರಸ್ತೆ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಎಲ್ಲ ಬಸ್‌ಗಳಲ್ಲಿ (ಅಂತರರಾಜ್ಯ, ಎ.ಸಿ. ಮತ್ತು ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ) ಶೇ.50 ಆಸನಗಳನ್ನು ಪುರುಷರಿಗೆ ಕಾಯ್ದಿರಿಸಬೇಕು.

4. ಈ ಯೋಜನೆಯಡಿ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ತಗಲುವ ವೆಚ್ಚವನ್ನು ಸರ್ಕಾರದಿಂದ ಶೂನ್ಯ ಟಿಕೆಟ್/ಶಕ್ತಿ ಸ್ಮಾರ್ಟ್ ಕಾರ್ಡ್ ದತ್ತಾಂಶ ಆಧರಿಸಿ ಭರಿಸಲಾಗುವುದು. ಸೇವಾ ಸಿಂಧು ಮೂಲಕ ಅರ್ಜಿಗಳನ್ನು ಪಡೆದು, ಶಕ್ತಿ ಸ್ಮಾರ್ಟ್ ಕಾರ್ಡ್‌ ವಿತರಿಸುವ ಪ್ರಕ್ರಿಯೆ ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಬೇಕು.

4. “ಶಕ್ತಿ ಸ್ಮಾರ್ಟ್ ಕಾರ್ಡ್‌ ವಿತರಿಸುವವರೆಗೆ ಭಾರತ ಸರ್ಕಾರ/ಕರ್ನಾಟಕ ಸರ್ಕಾರದ ಇಲಾಖೆ/ಸರ್ಕಾರಿ ಸ್ವಾಮ್ಯದ ಕಚೇರಿಗಳಿಂದ ವಿತರಿಸಿರುವ ಭಾವಚಿತ್ರ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿಗಳನ್ನು ಶೂನ್ಯ ಟಿಕೆಟ್ ವಿತರಿಸುವ ಸಂದರ್ಭದಲ್ಲಿ ಪರಿಗಣಿಸಬೇಕು.

 
 
 
 
 
 
 
 
 
 
 

Leave a Reply