ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ : ಬೋಳ ಸದಾಶಿವ ಶೆಟ್ಟಿ

ಕಳೆದ 45 ವರ್ಷಗಳಿಂದ ಸಹಕಾರ ಭಾರತಿ ದೇಶಾದ್ಯಂತ ಸಂಘಟನಾತ್ಮಕವಾಗಿ 28 ರಾಜ್ಯಗಳ 650 ಕ್ಕಿಂತಲೂ ಹೆಚ್ಚಿನ ಜಿಲ್ಲೆಗಳಲ್ಲಿ ನಿರಂತರ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದು, ಉಡುಪಿ ಜಿಲ್ಲೆಯ ಏಳು ತಾಲೂಕುಗಳಲ್ಲಿ ಸಕ್ರಿಯವಾದ ತಾಲೂಕು ಘಟಕಗಳ ಮೂಲಕ, ಗ್ರಾಮೀಣ ಭಾಗದ ಎಲ್ಲಾ ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ನಿರಂತರ ಸಂಪರ್ಕದ ಮೂಲಕ, ಸಹಕಾರಿ ಕ್ಷೇತ್ರದ ಬಲವರ್ಧನೆಗಾಗಿ ಕಾರ್ಯೋನ್ಮುಖವಾಗಿದೆ ಎಂದು ಉಡುಪಿ ಜಿಲ್ಲಾ ಸಹಕಾರ ಭಾರತಿ ಜಿಲ್ಲಾಧ್ಯಕ್ಷರಾದ ಶ್ರೀ ಬೋಳ ಸದಾಶಿವ ಶೆಟ್ಟಿ ತಿಳಿಸಿದರು.

 ಅವರು ಮಾರ್ಚ್ 2, ಶನಿವಾರದಂದು ಕಾಪು ಕೆವನ್ ಹೋಟೆಲ್ ಸಭಾಂಗಣದಲ್ಲಿ ಜರುಗಿದ ತಾಲೂಕು ಅಭ್ಯಾಸ ವರ್ಗದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.

ಉದ್ಘಾಟನಾ ಸಮಾರಂಭದಲ್ಲಿ, ಜ್ಯೋತಿ ಪ್ರಜ್ವಲನೆಯ ಬಳಿಕ ಅತಿಥಿ ಗಣ್ಯರು ಭಾರತ ಮಾತೆ ಮತ್ತು ಸಹಕಾರ ಭಾರತಿ ಸಂಸ್ಥಾಪಕರಾದ ಮಾನನೀಯ ಶ್ರೀ ಲಕ್ಷ್ಮಣ್ ರಾವ್* ಇನಾಮ್ದಾರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ರವರು ಮಾತನಾಡುತ್ತಾ, ಹೈನುಗಾರರು ಸೊಸೈಟಿಗಳಿಗೆ ಪೂರೈಸುವ ಹಾಲಿಗೆ ವೈಜ್ಞಾನಿಕ ದರ ನಿಗದಿ, ದುಬಾರಿಯಾಗುತ್ತಿರುವ ನಂದಿನಿ ಪಶು ಆಹಾರಕ್ಕೆ ಸಬ್ಸಿಡಿ, ಆರು ತಿಂಗಳಿನಿಂದ ಬಾಕಿ ಇರುವ ಹೈನುಗಾರರ ಸಬ್ಸಿಡಿ ಹಣದ ಬಿಡುಗಡೆ, ಪಶು ವೈದ್ಯರ ಕೊರತೆ ನೀಗಿಸಲು ಖಾಲಿ ಇರುವ ಹುದ್ದೆಗಳ ಭರ್ತಿ, ಹಾಲು ಉತ್ಪಾದಕ ಸಂಘಗಳನ್ನು ವಿವಿಧೋದ್ದೇಶ ಸಂಘಗಳಾಗಿ ಕಾರ್ಯನಿರ್ವಹಿಸಲು ಯೋಜನೆ, ಯಶಸ್ವಿ ಯೋಜನೆ ಅಡಿಯಲ್ಲಿ ಚಿಕಿತ್ಸೆ ಪಡೆಯಲು‌ ಪ್ರಮುಖ ಖಾಸಗಿ ಆಸ್ಪತ್ರೆಗಳ ಸೇರ್ಪಡೆ ಮೊದಲಾದ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ಹೈನುಗಾರರ ಪರವಾಗಿ ಮುಂದಿನ ದಿನಗಳಲ್ಲಿ ಆಂದೋಲನ_ ಚಳವಳಿ ಹಾಗೂ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.

ಕಾಪು ತಾಲೂಕು ಸಹಕಾರ ಭಾರತೀಯ ಕೋಶಾಧ್ಯಕ್ಷರಾದ ಶ್ರೀ ಸುಧಾಮ ಶೆಟ್ಟಿ, ಮಲ್ಲಾರು ಇವರ ಅಧ್ಯಕ್ಷತೆಯಲ್ಲಿ ಜರುಗಿದ ಉದ್ಘಾಟನಾ ಸಮಾರಂಭದಲ್ಲಿ,

ಜಿಲ್ಲಾ ಪ್ಯಾಕ್ಸ್ ಪ್ರಕೋಷ್ದದ ಸಂಚಾಲಕರಾದ ಶ್ರೀ ಕುತ್ಯಾರು ಪ್ರಸಾದ್ ಶೆಟ್ಟಿಯವರು ಸ್ವಾಗತಿಸಿ, ಸಹಕಾರ ಭಾರತಿ ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀ ಕೇಶವ ಮೋಯ್ಲಿಯವರು ಧನ್ಯವಾದ ಸಮರ್ಪಿಸಿದರು.

ಅವರಾಲು ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಅಕ್ಷತಾ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಸಮಾರಂಭದ ಬಳಿಕ ನಡೆದ ಮಾಹಿತಿ ಕಾರ್ಯಾಗಾರದ ಮೊದಲ ಅವಧಿಯಲ್ಲಿ ಮೂಡಬಿದ್ರೆಯ ಸಹಕಾರಿ ಆಡಳಿತ ಕಾಲೇಜಿನ ಉಪನ್ಯಾಸಕಿ *ಶ್ರೀಮತಿ ಬಿಂದು .ಬಿ .ನಾಯರ್ ರವರು “ಸಹಕಾರಿ ವ್ಯವಸ್ಥಾಪನೆ” ಎನ್ನುವ ವಿಚಾರದ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.

ಸಹಕಾರ ಭಾರತಿ ಮೈಸೂರು ವಿಭಾಗದ ಸಂಘಟನಾ ಪ್ರಮುಖರಾದ ಶ್ರೀ ಮೋಹನ್ ಕುಮಾರ್ ಕುಂಬಳೇಕರ್ ರವರು “ಸಹಕಾರ ಭಾರತಿ ಹುಟ್ಟು ಮತ್ತು ಬೆಳವಣಿಗೆ”ಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ಕಾಪು ತಾಲೂಕಿನ ಪ್ಯಾಕ್ಸ್, ಹಾಲು, ಸೌಹಾರ್ದ ಮತ್ತು ಮೀನುಗಾರಿಕಾ ಸೊಸೈಟಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರುಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿಗಳು ಮಾಹಿತಿ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply