ಎಂಇಎಸ್​ ಪುಂಡಾಟಿಕೆ ವಿರುದ್ಧ ಮಹೇಶ ಜೋಶಿ ಗುಡುಗು

ಉತ್ತರಕನ್ನಡ: ಗಡಿ ಪ್ರದೇಶದಲ್ಲಿ ಪುಂಡಾಟಿಕೆ ನಡೆಸುವ ಎಂಇಎಸ್ ಸಂಘಟನೆ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಗುಡುಗಿದ್ದು, ಹೀಗೇ ಮುಂದುವರಿದರೆ ಕನ್ನಡಿಗರ ಶಕ್ತಿ ಪ್ರದರ್ಶನ ಮಾಡಬೇಕಾದ್ದು ಅನಿವಾರ್ಯವಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಎಂಇಎಸ್​ ಗಡಿ ವಿವಾದಗಳ ಕುರಿತಾಗಿ ಇಂದು ಉತ್ತರಕನ್ನಡ ಜಿಲ್ಲೆಯ ಅಂಕೋಲದಲ್ಲಿ ಮಾತನಾಡಿದ ಅವರು, ರಾಜಕೀಯ ಕಾರಣಗಳಿಗಾಗಿ ಎಂಇಎಸ್ ಪುಂಡರ ಮೇಲಿನ ದೇಶದ್ರೋಹ ಪ್ರಕರಣ ವಾಪಸ್ ತೆಗೆದುಕೊಳ್ಳುವುದು ಸರಿಯಲ್ಲ. ಸರ್ಕಾರಕ್ಕೆ ಈ ಬಗ್ಗೆ ಮನದಟ್ಟು ಮಾಡುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡಲಿದೆ ಎಂದು ಹೇಳಿದ್ದಾರೆ.

ಕನ್ನಡಿಗರ ಮನೋಭಾವನೆಯನ್ನು ಕೆರಳಿಸುವ ಪ್ರಯತ್ನವನ್ನು ಎಂಇಎಸ್​ ನಿರಂತರವಾಗಿ ಮಾಡುತ್ತಿದೆ. ಎಂಇಎಸ್ ಗಡಿವಿವಾದ ಹೇಳಿಕೆಗಳನ್ನು ಸರ್ಕಾರ ಮೊದಲ ಖಂಡಿಸಬೇಕು ಎಂದ ಅವರು, ಎಂಇಎಸ್​ನಿಂದ ಇಂಥವು ಹೀಗೇ ಮುಂದುವರಿದರೆ ಕನ್ನಡಿಗರ ಶಕ್ತಿ ಪ್ರದರ್ಶನ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ, ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಹೇಳಿದರು.

ರಾಜ್ಯ ಸರ್ಕಾರ ಎಂಇಎಸ್​ ಪುಂಡಾಟಿಕೆ ವಿರುದ್ಧ ಸ್ಪಷ್ಟ ನಿಲುವು ತೆಗೆದುಕೊಳ್ಳುವ ಅವಶ್ಯಕತೆ ಇದೆ. ಮಹಾರಾಷ್ಟ್ರದ ಹಲವು ಹಳ್ಳಿಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಅಧಿಕವಾಗಿದೆ. ಅವೆಲ್ಲವೂ ಕರ್ನಾಟಕಕ್ಕೆ ಸೇರಬೇಕೆಂಬ ಹೋರಾಟ ಅನಿವಾರ್ಯವಾಗಲಿದೆ ಎಂದ ಜೋಶಿ, ನಾವೆಲ್ಲ ಭಾತೃತ್ವದ ಭಾವನೆಯಲ್ಲಿ ಇದ್ದಾಗ ಎಂಇಎಸ್ ಪುಂಡಾಟಿಕೆ ಬಿಡಬೇಕು ಎಂದರು.

 
 
 
 
 
 
 
 
 
 
 

Leave a Reply