ಜಿಲ್ಲಾ ಮಟ್ಟದ ಅಂಚೆ ಚೀಟಿ ಪ್ರದರ್ಶನ “ಕೃಷ್ಣಾ ಪೆಕ್ಸ್ 2023” ‘

ಉಡುಪಿ ಅಂಚೆ ವಿಭಾಗವು ನವೆಂಬರ್ 18 ಮತ್ತು 19 ರಂದು ಎಮ್ ಜಿ ಎಮ್ ಕಾಲೇಜಿನ  ನೂತನ ರವೀಂದ್ರ ಮಂಟಪ ಆವರಣದಲ್ಲಿ ಜಿಲ್ಲಾ ಮಟ್ಟದ ಅಂಚೆ ಚೀಟಿ ಪ್ರದರ್ಶನ “ಕೃಷ್ಣಾ ಪೆಕ್ಸ್ 2023″ ನ್ನು ಆಯೋಜಿಸಿಕೊಂಡಿದೆ. ಬಹುಶಃ ಉಡುಪಿ ಅಂಚೆ ವಿಭಾಗದ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ಕಾರ್ಯಕ್ರಮ.
ಯಾಕೆಂದರೆ ಉಡುಪಿ ಅಂಚೆ ವಿಭಾಗವು 1973 ಯಲ್ಲಿ ರಚನೆಯಾಗಿದ್ದು ಈ ವರ್ಷ ಸುವರ್ಣ ಸಂಭ್ರಮೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಬಹಳ ವಿಶೇಷ ವಾಗಿರುತ್ತದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಉಡುಪಿ ಅಂಚೆ ಅಧೀಕ್ಷಕ ರಮೇಶ್ ಪ್ರಭು ತಿಳಿಸಿದರು.
ಅದರಲ್ಲೂ ಉಡುಪಿ ಜಿಲ್ಲೆ 1997 ರಲ್ಲಿ ರಚನೆಯಾಗಿದ್ದು ಇದೇ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಅಂಚೆಚೀಟಿ ಪ್ರದರ್ಶನ ನಡೆಯುವುದು ಈ ಹಿರಿಮೆಗೆ ಇನ್ನೊಂದು ಗರಿಯಾಗಿದೆ .ಅಂಚೆ ಚೀಟಿ ಸಂಗ್ರಹಣೆ ಒಂದು ಹವ್ಯಾಸ ಮಾತ್ರವಲ್ಲದೆ ನಮ್ಮ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ  ದೇಶ- ವಿದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ‌‌ ಅದಕ್ಕಾಗಿ ಇಂತಹ ಸಂಪತ್ ಭರಿತ ಹವ್ಯಾಸವನ್ನು ಹವ್ಯಾಸಗಳ ರಾಜ ಎಂದು ಕರೆಯುತ್ತಾರೆ.
ಇಂದಿನ ಯುವ ಪೀಳಿಗೆಯಲ್ಲಿ ಈ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ಅಂಚೆ ಇಲಾಖೆಯು ಇಂತಹ ಅಂಚೆ ಚೀಟಿ ಪ್ರದರ್ಶನವನ್ನು ನಡೆಸುತ್ತಾ ಬರುತ್ತಿದೆ. ಅದೇ ರೀತಿ ನಮ್ಮ ಅಂಚೆ ವಿಭಾಗದಿಂದ ಎರಡು ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.  ಈ ಪ್ರದರ್ಶನದಲ್ಲಿ ಜಿಲ್ಲೆಯ ಪ್ರತಿಷ್ಠಿತ ಅಂಚೆ ಚೀಟಿ ಸಂಗ್ರಹಕಾರರು ಭಾಗವಹಿಸಲಿದ್ದು  ತಮ್ಮ ಸಂಗ್ರಹವನ್ನು ಪ್ರದರ್ಶಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕ ಅಂಚೆ ವೃತ್ತದ ಗೌರವಾನ್ವಿತ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ರವರಾದ ಶ್ರೀ ಕೆ ಪ್ರಕಾಶ್ ಸರ್ ರವರು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಲಿದ್ದಾರೆ.
ಹಾಗೂ ನಮ್ಮ ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ರವರಾದ ಶ್ರೀ ಎಲ್ ಕೆ  ದಾಸ್ ಸರ್ ಮತ್ತು ಡೈರೆಕ್ಟರ್ ರವರಾದ ಶ್ರೀ ಟಿ ಎಸ್ ಅಶ್ವತ ನಾರಾಯಣ ಸರ್ ರವರು ಕೂಡ ಭಾಗವಹಿಸಲಿದ್ದು ಜಿಲ್ಲೆಯ ಇತರ ಗಣ್ಯ ವ್ಯಕ್ತಿಗಳು ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ‌. ಈ ಪ್ರದರ್ಶನದಲ್ಲಿ ಸುಮಾರು 150ಕ್ಕೂ ಅಧಿಕ ಫಲಕ (Frame)ಗಳಲ್ಲಿ ವಿವಿಧ ಅಂಚೆ ಚೀಟಿಗಳು ಹಾಗೂ ಅಂಚೆ ಪರಿಕರಗಳನ್ನು ಪ್ರದರ್ಶಿಸಲಾಗುವುದು‌.
ಈ ಪ್ರದರ್ಶನವು ಮೂರು ವಿಭಾಗಗಳಲ್ಲಿ ನಡೆಯಲಿದ್ದು ಪ್ರಥಮವಾಗಿ ಇನ್ವಿಟೇಶನ್ ಕ್ಲಾಸ್( ಆಹ್ವಾನಿತರು) ನಲ್ಲಿ  ಈ ಹಿಂದೆ   ವಿವಿಧ  ಪ್ರದರ್ಶನದಲ್ಲಿ ಪ್ರಶಸ್ತಿ ವಿಜೇತರಾದ ಜಿಲ್ಲೆಯ ಸಂಗ್ರಹಕಾರರು ತಮ್ಮ ಸಂಗ್ರಹವನ್ನು ಪ್ರದರ್ಶಿಸಲಿದ್ದಾರೆ. ಎರಡನೇ ವಿಭಾಗದಲ್ಲಿ ಜಿಲ್ಲೆಯ ಸಂಗ್ರಹಣಕಾರರು ತಮ್ಮ ಅಂಚೆಚೀಟಿಗಳ ಸಂಗ್ರಹವನ್ನು ಪ್ರದರ್ಶಿಸಲಿದ್ದು ಉತ್ತಮ ಪ್ರದರ್ಶನಗಳಿಗೆ ಪ್ರಶಸ್ತಿಗಳನ್ನು ನೀಡಲಾಗುವುದು‌ ಮೂರನೇ ವಿಭಾಗದಲ್ಲಿ ಜಿಲ್ಲೆಯ ಯುವ ಜನ ಹಾಗು ಮಕ್ಕಳು ತಮ್ಮ ಸಂಗ್ರಹವನ್ನು ಪ್ರದರ್ಶಿಸಲಿದ್ದು ಉತ್ತಮ ಪ್ರದರ್ಶನಗಳಿಗೆ ಪ್ರಶಸ್ತಿಗಳನ್ನು ನೀಡಲಾಗುವುದು.
ಈ ಪ್ರದರ್ಶನ ದಲ್ಲಿ ಮಕ್ಕಳಿಗಾಗಿ ಅಂಚೆ ಚೀಟಿ ಸಂಗ್ರಹಣೆಯ ಬಗ್ಗೆ ಕಾರ್ಯಾಗಾರವನ್ನು ಕೂಡಾ ಏರ್ಪಡಿಸಲಾಗುವುದು.ಈ ಸಂದರ್ಭದಲ್ಲಿ   ನಾಲ್ಕು ವಿಶೇಷ ಅಂಚೆ ಲಕೋಟೆಗಳು ಮತ್ತು   ಹನ್ನೊಂದು ಪಿಕ್ಚರ್ ಪೋಸ್ಟ್ ಕಾರ್ಡ್ (ಸಚಿತ್ರ ಅಂಚೆ ಕಾರ್ಡ್ ) ಗಳು ಅನಾವರಣಗೊಳ್ಳಲಿವೆ.ಈ ಕಾರ್ಯಕ್ರಮದಲ್ಲಿ  ಮಕ್ಕಳು ಹಾಗು ಯುವ ಜನರು ಹೆಚ್ಚಿನ  ಸಂಖ್ಯೆಯಲ್ಲಿ ಭಾಗವಹಿಸಲು ಪ್ರೇರಣೆ ನೀಡಲಾಗುತ್ತಿದೆ.
ಈ ಸಂದರ್ಭದಲ್ಲಿ  ಕೃಷ್ಣಾ ಪೆಕ್ಸ್ 2023 ಉಪಾಧ್ಯಕ್ಷ ಕೃಷ್ಣರಾಜ ವಿಠಲ ಭಟ್ , ಜೊತೆ ಕಾರ್ಯದರ್ಶಿ ವಸಂತ್, ಕಾರ್ಯಕ್ರಮ ಸಂಯೋಜಕಿ‌  ಪೂರ್ಣಿಮಾ ಜನಾರ್ದನ್,  ಮಾಧ್ಯಮ ಪ್ರಾತಿನಿಧಿ ಸುರೇಶ್ ಕೆ. ಉಪಸ್ಥಿತರಿದ್ದರು
 
 
 
 
 
 
 
 
 
 
 

Leave a Reply