ಸಿದ್ದರಾಮಯ್ಯಗೆ ಸಿಎಂ ಪಟ್ಟ, ಡಿಕೆಶಿ ಡಿಸಿಎಂ!

ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಸಿಎಂ ಆಯ್ಕೆಗೆ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆಬಿದ್ದಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.

ಮೇ.20ರಂದು 12.30ಕ್ಕೆ ಪದಗ್ರಹಣ ಸಮಾರಂಭ ನಡೆಯಲಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇಂದು ಸಂಜೆ ನಡೆಯಲಿರುವ ಸಿಎಲ್ ಪಿ ಸಭೆಯಲ್ಲಿ ನಡೆಯಲಿದೆ.

ಬುಧವಾರ ನಡುರಾತ್ರಿ ನಡೆದ ಅಂತಿಮ ಬೆಳವಣಿಗೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಸರ್ವಾನುಮತದ ನಿರ್ಣಯವನ್ನು ದೆಹಲಿಯಲ್ಲಿ ಪ್ರಕಟಿಸಿದ್ದಾರೆ.

ಗುರುವಾರ ಸಂಜೆ 7 ಗಂಟೆಗೆ ಶಾಸಕಾಂಗ ಸಭೆ ಕರೆಯಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬೆಂಗಳೂರಿನ ಕ್ವೀನ್ಸ್‌ರಸ್ತೆಯ ಇಂದಿರಾಭವನದಲ್ಲಿ ಈ ಸಭೆ ಕರೆದಿದ್ದು, ಈ ಸಿಎಲ್ ಪಿ ಸಭೆಯಲ್ಲೇ ನಾಯಕರ ಹೆಸರು ಕೂಡ ಅಧಿಕೃತವಾಗಿ ಘೋಷಣೆಯಾಗಲಿದೆ.

ವಿಧಾನಸಭೆ ಸದಸ್ಯರುಗಳು, ಪರಿಷತ್ ಸದಸ್ಯರುಗಳು ಹಾಗೂ ಸಂಸದರನ್ನು ಒಳಗೊಂಡ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆಯೋಜಿಸಲಾಗಿದೆ. ತಮಗೇ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಗಿಪಟ್ಟು ಹಿಡಿದಿದ್ದರು. ಪಕ್ಷ ಸಂಕಷ್ಟದ ಸಮಯದಲ್ಲಿ ಪಕ್ಷದ ಸಾರಥ್ಯ ವಹಿಸಿಕೊಂಡು ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತಂದ ತಮಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಪಕ್ಷದ ಹೈಕಮಾಂಡ್ ಗೆ ಮನವಿ ಮಾಡಿದ್ದರು.

ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ರಾತ್ರಿ ಹೈಕಮಾಂಡ್ ನ ಮಹತ್ವದ ಸಭೆ ನಡೆದಿದ್ದು ಈ ಸಭೆಯಲ್ಲಿ ವೀಡೀಯೋ ಕಾನ್ಫರೆನ್ಸ್ ಮೂಲಕ ಸೋನಿಯಾ ಗಾಂಧಿ ಸಹ ಭಾಗಿಯಾಗಿದ್ದರು.

ಕೊನೆಗೂ ಡಿ.ಕೆ. ಶಿವಕುಮಾರ್ ಅವರ ಮನವೊಲಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿದ್ದು, ಅವರಿಗೆ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆಂದು ದೆಹಲಿಯ ಅಧಿಕೃತ ಮೂಲಗಳು ತಿಳಿಸಿವೆ.

 
 
 
 
 
 
 
 
 
 
 

Leave a Reply