ಬಾವಿಗೆ ಬಿದ್ದ ಚಿರತೆ ಮರಿಯನ್ನು ಬಾವಿಗಿಳಿದು ಸೆರೆಹಿಡಿದ ವೈಲ್ಡ್ ಲೈಫ್ ಪಶು ವೈದ್ಯೆ!!

ಮೂಡುಬಿದಿರೆ: ಒಂದು ವರ್ಷ ಪ್ರಾಯದ ಚಿರತೆ ಮರಿಯೊಂದು ನಿಡ್ಡೋಡಿಯ ಬಾವಿಯೊಂದಕ್ಕೆ ಬಿದ್ದಾಗ ಬೋನಿನಲ್ಲಿ ಕುಳಿತು ಬಾವಿಗಿಳಿದು ವೈದ್ಯಕೀಯವಾಗಿ ಸೆರೆಹಿಡಿದ ಚಿಟ್ಟೆಪಿಲಿ ವೈಲ್ಡ್ ಲೈಫ್ ರೆಸ್ ಕ್ಯೂ ಸೆಂಟರ್ ನ ಪಶು ವೈದ್ಯೆ ಸಾಹಸಕ್ಕೆ ಅರಣ್ಯ ಇಲಾಖೆ ಸಹಿತ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಅರಣ್ಯ ಇಲಾಖೆಯವರು ಎರಡು ದಿನಗಳ ಹಿಂದೆ ಬಾವಿಗೆ ಬಿದ್ದಿದ್ದ ಈ ಚಿರತೆ ಮರಿಯನ್ನು ಸೆರೆಹಿಡಿಯಲು ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗಿರಲಿಲ್ಲ. 30 ಅಡಿಗಿಂತಲೂ ಹೆಚ್ಚು ಆಳವಾದ ಬಾವಿಯ ಒಳಗೆ ಗುಹೆಯಂತಿರುವಲ್ಲಿ ಈ ಚಿರತೆ ಮರಿ ಅಡಗಿಕೊಂಡು ಬೋನಿನೊಳಗೆ ಬರಲು ಹಿಂದೇಟು ಹಾಕುತ್ತಿತ್ತು.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯೊಂದಿಗೆ ನಿರಂತರ ಸಹಚರ್ಯ ಹೊಂದಿರುವ ಸ್ವಯಂ ಸೇವಾ ಸಂಸ್ಥೆ ಚಿಟ್ಟೆ ಪಿಲಿ ವೈಲ್ಡ್ ಲೈಫ್ ಸೆಂಟರ್ ನ ತಜ್ಞ ವೈದ್ಯರು ಸ್ಥಳಕ್ಕೆ ಆಗಮಿಸಿ ಈ ತಂಡದ ಡಾ. ಮೇಘನಾ ಪೆಮ್ಮಯ್ಯ ರವರು ಅರಿವಳಿಕೆ ಮದ್ದು ತುಂಬಿದ ಡಾರ್ಟ್ ಗನ್ ಹಿಡಿದುಕೊಂಡು ಬೋನಿನೊಳಗೆ ಕುಳಿತು ಇಲಾಖೆ ಸಿಬ್ಬಂದಿಗಳು ಹಾಗೂ ಊರವರ ಸಹಾಯದೊಂದಿಗೆ ಬೋನನ್ನು ಬಾವಿಗಿಳಿಸಿ ಚಿರತೆ ಮರಿಯನ್ನು ಸೆರೆಹಿಡಿಯಲಾಯಿತು.

ಡಾ. ಮೇಘನಾ ಬೋನಿನಲ್ಲಿ ಕುಳಿತು ಬಾವಿಗಿಳಿದು ಗುಹೆಯೊಳಗೆ ಕುಳಿತ ಚಿರತೆ ಮರಿಯತ್ತ ಗುರಿ ಇಟ್ಟು ಅರಿವಳಿಕೆ ಚುಚ್ಚುಮದ್ದನ್ನು ಪ್ರಯೋಗಿಸಿ ಚಿರತೆಯು ಪ್ರಜ್ಞೆ ತಪ್ಪಿದ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಗ್ಗದ ಮೂಲಕ ಕೆಳಗಿಳಿದು ಹೆಣ್ಣು ಚಿರತೆ ಮರಿಯೊಂದಿಗೆ ಹೆಣ್ಣು ಜೀವ ಡಾ. ಮೇಘನಾ ಬಾವಿಯಿಂದ ಮೇಲಕ್ಕೆ ಬಂದಿರುವುದು ರೋಮಾಂಚಕವಾಗಿದೆ.

 
 
 
 
 
 
 
 
 
 
 

Leave a Reply