ಕುವೆಂಪು ಕನಸಿನ ಕರ್ನಾಟಕವನ್ನು ಉಳಿಸಿ ಬೆಳೆಸೋಣ~ ಡಾ. ಸುಧಾಕರ ದೇವಾಡಿಗ

ಪುಟ್ಟಪ್ಪನೆನ್ನುವ ಮಲೆನಾಡಿನ ಸಾಮಾನ್ಯ ಬದುಕೊಂದು ಕುವೆಂಪು ಎನ್ನುವ ಕನ್ನಡದ ಅಸ್ಮಿತೆಯಾಗಿ ರೂಪುಗೊಂಡ ಪರಿಯನ್ನು ಅರಿಯಬೇಕಾದರೆ ಆ ಬದುಕು ಕೆನೆಗಟ್ಟಿದ ಹಾದಿಯ ನೆನಪಿನ ದೋಣಿಯೇರುವ ಜೊತೆಗೆ ಯುಗಮನಸ್ಸಿನ ಆ ಮಹಾಚೇತನವು ಕಟ್ಟಿನಿಲ್ಲಿಸಿದ ವೈಚಾರಿಕ ನೆಲೆಗಟ್ಟಿನ ಬರಹದೊಡಲನ್ನೂ ಹೊಕ್ಕುನೋಡುವ ಅಗತ್ಯವಿದೆ ಎಂದು ಡಾ. ಸುಧಾಕರ ದೇವಾಡಿಗ ಅವರು ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗವು ಕುವೆಂಪು ಪ್ರತಿ಼ಷ್ಠಾನ ಕುಪ್ಪಳಿ ಹಾಗೂ ಎಸ್‌ಡಿಎಮ್ ಕಾಲೇಜು ಉಜಿರೆ ಇವುಗಳ ಸಹಯೋಗದಲ್ಲಿ ಆಯೋಜಿಸಿದ ‘ಹೊಸತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ’ – ಎಂಬ ವಿಶೇಷೋಪನ್ಯಾಸ ಕಾರ‍್ಯಕ್ರಮದಲ್ಲಿ ಹೇಳಿದರು.
ಈ ಕರ‍್ಯಕ್ರಮದ ಸಂಪನ್ಮೂಲವ್ಯಕ್ತಿಯಾಗಿ ಕುವೆಂಪು ಅವರ ಬದುಕಿನ ಕೆಲವು ಆಯ್ದ ಘಟನೆಗಳನ್ನೂ, ಬರಹಗಳ ಕೆಲವು ವಿಶಿಷ್ಟ ಉದಾಹರಣೆಗಳನ್ನೂ ಎದುರಿಗಿಟ್ಟು ಮಾತನಾಡಿದ ಅವರು, ಕುವೆಂಪು ಯಾವ ಎತ್ತರಕ್ಕೆ ಬೆಳೆದರು? ಹಾಗೆ ಬೆಳೆಯುವ ಹಾದಿಯಲ್ಲಿ ಏನೇನನ್ನು ಎದುರುಗೊಂಡರು? ಯಾವುದೇ ಪರಿಸರ, ಪರಿಸ್ಥಿತಿಯಲ್ಲೂ ಹೇಗೆ ಕುವೆಂಪುವಾಗಿಯೇ ಉಳಿದ ರೆಂಬುದನ್ನು ವಿವರಿಸುವ ಜೊತೆಗೆ ಕುವೆಂಪು ಅವರ ಬದುಕು ಮತ್ತು ಬರಹಗಳಲ್ಲಿ ಮಿಳಿತವಾದ ವಿಜ್ಞಾನ, ವೈಚಾರಿಕತೆಯ ಮೌಢ್ಯಮುಕ್ತ ಮನೋಧರ್ಮವನ್ನು ಯುವಚೇತನಗಳು ತಮ್ಮ ಬದುಕಿನ ಭಾಗವಾಗಿಸಿಕೊಳ್ಳಬೇಕೆಂದರು.
ಅಷ್ಟೇ ಅಲ್ಲದೆ ಕುವೆಂಪು ಭಾವಚಿತ್ರದೆದುರು ಭಾವುಕರಾಗುವುದಕ್ಕಿಂತ ಅವರೇ ತೋರಿದ ಈ ನೆಲದ ಇತಿಹಾಸದ ಭಾಗವಾದ ತಾಳಿಕೆಯ ಗುಣವನ್ನು ಅರಿತು ಎಲ್ಲರೊಡನೆ ಬೆರೆತು ಬದುಕುವ ಮೂಲಕ  ‘ಸರ್ವಜನಾಂಗದ ಶಾಂತಿಯತೋಟ’ವೆ೦ಬ ಆ ದಾರ್ಶನಿಕ ಪ್ರತಿಭೆಯ ಕನಸಿನ ಕರ್ನಾಟಕಕ್ಕೇ ಮುಕ್ಕಾಗದಂತೆ ಕಾದುಕೊಳ್ಳುವ ಹೊಣೆಯೂ ಕನ್ನಡದ ಯುವಮನಸ್ಸುಗಳ ಮೇಲಿದೆ ಎಂದು ಎಚ್ಚರಿಸಿದರು.
ಕಾರ‍್ಯಕ್ರಮದ ಸಂಯೋಜಕರಾಗಿ ಭಾಗವಹಿಸಿದ ಎಸ್‌ಡಿಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆಯವರು, ಕರ್ನಾಟಕದ ಬೇರೆ ಬೇರೆ ಭಾಗಗಳ ಹೊಸತಲೆಮಾರಿಗೆ ಕುವೆಂಪು ವಿಚಾರಧಾರೆಯನ್ನು ಪಸರಿಸುವ ಕಾಯಕದಲ್ಲಿ ಕುಪ್ಪಳ್ಳಿ ಕುವೆಂಪು ಪ್ರತಿಷ್ಠಾನದ ಜೊತೆಗೆ ಎಸ್‌ಡಿಎಂ ಕಾಲೇಜು ಕೈಗೂಡಿಸಿದ್ದರ ಹಿನ್ನೆಲೆ ಹಾಗೂ ಮಾಡಿದ ಸಾಧನೆಗಳನ್ನು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಪರಿಚಯಿಸಿದರು.
ತೆಂಕನಿಡಿಯೂರು ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್ ರೈಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ‍್ಯಕ್ರಮದಲ್ಲಿ  ಕನ್ನಡವಿಭಾಗದ ಮುಖ್ಯಸ್ಥ ಪ್ರೊ.ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಶ್ರೀಮತಿ ಭಾರತಿ ವಂದಿಸಿದರು. ಶ್ರೀಮತಿ ಅರ್ಚನಾ ನಿರೂಪಿಸಿದರು. ಕರ‍್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗಿಯಾದರು.
 
 
 
 
 
 
 
 
 
 
 

Leave a Reply