ಹದಿನಾಲ್ಕರ ಚಿಂತನೆ ಸಾಕಾರಗೊಳ್ಳುವ ವ್ರತ |ನೋಂಪು -ಅನಂತ ಚತುರ್ದಶಿ|~ • ಕೆ .ಎಲ್ .ಕುಂಡಂತಾಯ

ಕ್ಷೀರಸಾಗರದಲ್ಲಿ ಮಹಾಶೇಷನ ಮೇಲೆ ಮಲಗಿರುವ ಶ್ರೀಮನ್ನಾರಾಯಣ’ ಈ ನೋಟ ಅಥವಾ ದೃಶ್ಯದ ಯಥಾವತ್ತಾದ ಪರಿಕಲ್ಪನೆ – ಅನುಸಂಧಾನದೊಂದಿಗೆ ನೆರವೇರುವ ಉಪಾಸನೆಯೇ ‘ಶ್ರೀಮದನಂತವ್ರತ’ , ‘ಅನಂತವ್ರತ, ಅಥವಾ ‘ನೋಂಪು’. ಭಾದ್ರಪದ ಶುದ್ಧ ಚತುರ್ದಶಿ ತಿಥಿಯಲ್ಲಿ ‘ಅನಂತ ಚತುರ್ದಶಿ’ ಆಚರಣೆ .ಇದು ವ್ರತವಾಗಿ ನೆರವೇರುತ್ತದೆ .
ಕ್ಷೀರ ಸಾಗರವನ್ನು ಸಾಂಕೇತಿಸುವ ಜಲ ಪೂರಿತ ಕಲಶ .

ಅದರ ಮೇಲೆ ದರ್ಭೆಯಿಂದ ನಿರ್ಮಿಸಿರುವ ಏಳು ಹೆಡೆಯುಳ್ಳ ಶೇಷಾಕೃತಿ . ಈ ಶೇಷಾಕೃತಿಯ ಮೇಲೆ ಶಾಲಗ್ರಾಮ .ಈ ಕಲ್ಪನೆಯಲ್ಲಿ ಅನಂತನಾಮಕನಾದ ಶೇಷನ ಮೇಲೆ ಶಯನ ಮಾಡಿದ ಅನಂತಪದ್ಮನಾಭನ ಚಿಂತನೆಯೊಂದಿಗೆ ಆರಾಧನೆ ನೆರವೇರುವುದು .ವೈಕುಂಠವನ್ನೆ ಸಾಕಾರ ಗೊಳಿಸುವ , ವಾಸ್ತವದ ಸ್ಥಾಪನೆಯಾಗಿ ವ್ರತ ನಡೆಯುವುದು . ಲೌಕಿಕದಲ್ಲಿ ಅಲೌಕಿಕವನ್ನು ನಿರ್ಮಿಸುವ ವೈದಿಕದ ಉಪಾಸನಾ ವಿಧಾನ ಅದ್ಭುತ .

ಹದಿನಾಲ್ಕು ಗಂಟುಗಳುಳ್ಳ ಕೆಂಪು ಬಣ್ಣದ “ದಾರ ಅಥವಾ ದೋರ”ವನ್ನು ಪ್ರತಿಷ್ಠಾಪಿತ ಕಲಶದಲ್ಲಿ ಪ್ರಧಾನ ಪೂಜಾಕಾಲದಲ್ಲಿ ಇರಿಸಿ ಪೂಜಾನಂತರದಲ್ಲಿ ಧರಿಸಿಕೊಳ್ಳುವುದು ಅನಂತವ್ರತದ ಮುಖ್ಯ ಅಂಗ .ಪುರುಷರಾದರೆ ಬಲಕೈಯ ತೋಳಿನಲ್ಲಿ , ಸ್ತ್ರೀಯರಾದರೆ ಎಡಕೈಯ ತೋಳಿನಲ್ಲಿ ಕಟ್ಟಿಕೊಳ್ಳುವುದು ಸಂಪ್ರದಾಯ .

ಪೂಜೆ – ದೋರ ಬಂಧನ‌ : ಶ್ರೀಮದನಂತವ್ರತ ಕಲ್ಪೋಕ್ತ ಪೂಜಾವಿಧಿಯು ಹಂತಹಂತವಾಗಿ ಸಂಪನ್ನಗೊಳ್ಳುತ್ತದೆ.
‌‌ ಯಮುನಾ ಪೂಜೆ , ಅಂಗಪೂಜೆ , ಪತ್ರಪೂಜೆ , ಪುಷ್ಪಪೂಜೆ ,ನಾಮಪೂಜೆ , ಧೂಪದೀಪಾದಿ ಸಮರ್ಪಣೆ .ಕಲಶಸ್ಥಾಪನೆ ,
ಶೇಷ ಪೂಜೆ , ಧ್ಯಾನಾವಾಹನಾದಿ , ಅಭಿಷೇಕ ,ವಸ್ತ್ರಯುಗ್ಮ ಸಮರ್ಪಣೆ , ಅಂಗಪೂಜೆ , ಅನಂತಪೂಜೆ ,ಧ್ಯಾನಮ್ ,ಮಂಟಪ ಧ್ಯಾನಮ್ , ಪೀಠಪೂಜೆ , ನವಶಕ್ತಿಪೂಜೆ , ಆವಾಹನಮ್ , ನವದೋರ ಸ್ಥಾಪನೆ ,ಷೋಡಶೋಪಚಾರ ಪೂಜೆ , ಅಂಗಪೂಜೆ ,ಷೋಡಶಾವರಣ ಪೂಜೆ ,ಶಕ್ತಿಪೂಜೆ , ದೋರಪೂಜೆ ,ಪತ್ರಪೂಜೆ, ಪುಷ್ಪಪೂಜೆ , ಅಷ್ಟೋತ್ತರನಪೂಜೆ ,ಧೂಪದೀಪ ನೈವೇದ್ಯ, ಫಲನಿವೇದನೆ , ನೀರಾಜನ ,ಪ್ರಸನ್ನಾರ್ಘ್ಯ, ಪ್ರದಕ್ಷಿಣ ನಮಸ್ಕಾರ, ಪ್ರಾರ್ಥನೆ, ದೋರಪ್ರಾರ್ಥನೆ , ದೋರನಮಸ್ಕಾರ – ಬಂಧನ ,ಜೀರ್ಣದೋರ ವಿಸರ್ಜನೆ ,ಉಪಾಯನದಾನಮ್ ,……….. ಉದ್ವಾಸನ ,ಕ್ಷಮಾಪಣ ,ಸಮಾಪನ .ಹೀಗೆ ವಿವಿಧ ಹಂತಗಳಲ್ಲಿ ಪೂಜೆ ನೆರವೇರಿ ಒಂದು ಭಕ್ತಿ ಭಾವದ ವ್ರತಾಚಾರಣೆಯ ಸಾರ್ಥಕತೆ ಸನ್ನಿಹಿತವಾಗುತ್ತದೆ .

ಜಲಸಂಗ್ರಹ – ಯಮುನಾಪೂಜೆಯಿಂದ‌ ಕಲಶ ಪ್ರತಿಷ್ಠೆ , ಶೇಷ ಕಲ್ಪನೆ , ಮತ್ತೆ ಶಾಲಗ್ರಾಮ ಸ್ಥಾಪನೆಯ ಚಿಂತನೆ ಬಳಿಕ ದೋರದ ಮಹತ್ವ – ಧಾರಣೆ . ಇವು ಅನಂತವ್ರತದಲ್ಲಿ ವ್ಯಕ್ತವಾಗುವ ಮುಖ್ಯ ಅಂಶಗಳು .

‌‌‌‌‌ ಸಂಕ್ಷಿಪ್ತ ಅನಂತವ್ರತ ಕಥಾ ; ಅನಂತವ್ರತಕಥೆಯು ಯಾರಿಂದ ಯಾರಿಗೆ ಹೇಳಲ್ಪಟ್ಟಿತು ,ಕಲ್ಪೋಕ್ತ ಪೂಜಾವಿಧಾನದೊಂದಿಗೆ ದೋರ (ದಾರ) ಬಂಧನದ ಮಹತ್ವ…..ಇತ್ಯಾದಿ. ಕಪಟ ದ್ಯೂತದ ಪರಿಣಾಮವಾಗಿ ವನವಾಸಕ್ಕೆ ದ್ರೌಪದಿ ಸಹಿತ ಪಂಡವರು ಹೊರಡುತ್ತಾರೆ . ವಿಷಯ ತಿಳಿದ ಕೃಷ್ಣ ಕಾಡಿಗೆ ಬರುತ್ತಾನೆ .ಒದಗಿದ ಕಷ್ಟ ಪರಂಪರೆಗೆ ನಿವೃತ್ತಿ ಹೇಗೆ ಎಂದು ಧರ್ಮರಾಯನು ಕೇಳಲು , ಶ್ರೀಕೃಷ್ಣನು ‘ಅನಂತವ್ರತ’ವನ್ನು ಮಾಡುವಂತೆ ಸೂಚಿಸುತ್ತಾನೆ .

“ಅನಂತನೆಂದರೆ” ನಾನೆ ಆಗಿದ್ದೇನೆ ,ಆ ಅನಂತ ಸ್ವರೂಪವು ನನ್ನದೇ ಆಗಿದೆ ಎಂದು ತಿಳಿ” ಎಂದು ಅವತಾರದ ಸೂಕ್ಷ್ಮವನ್ನು ತಿಳಿಸುತ್ತಾನೆ .ಇಂತಹ ಅನಂತಸ್ವರೂಪವೇ ತಾನು ಎಂದು ಹೇಳುತ್ತಾನೆ ಕೃಷ್ಣ : ಕೃತಯುಗದಲ್ಲಿದ್ದ ಸುಮಂತನೆಂಬ ಬ್ರಾಹ್ಮಣನ ಕತೆಯನ್ನು ಹೇಳುವ ಮೂಲಕ ಅನಂತ ವ್ರತದ ಫಲಪ್ರಾಪ್ತಿಯ ವಿವರಣೆಯನ್ನು ನೀಡುತ್ತಾನೆ ಶ್ರೀಕೃಷ್ಣ. ಸುಮಂತನು ತನ್ನ ಮಗಳನ್ನು ಕೌಂಡಿನ್ಯನೆಂಬ ಮಹರ್ಷಿಗೆ ಗೃಹ್ಯಸೂತ್ರದ ಕ್ರಮದಲ್ಲಿ ಮದುವೆಮಾಡಿ ಕೊಡುತ್ತಾನೆ .

ನವವಧೂವರರಿಗೆ ಬಳುವಳಿಯಾಗಿ ಉತ್ತಮ ವಸ್ತುವನ್ನು ಕೊಡಬೇಕೆಂದು ಬಯಸಿ ಪತ್ನಿಯಲ್ಲಿ ಹೇಳಲು ,ಆಕೆ ಕೋಪಗೊಂಡು ಮನೆಯಲ್ಲಿದ್ದ ಸುವಸ್ತುಗಳನ್ನೆಲ್ಲ ಪೆಟ್ಟಿಗೆಯಲ್ಲಿ ಹಾಕಿ ಬಚ್ಚಿಡುತ್ತಾಳೆ . ಕೌಂಡಿನ್ಯನು‌ ತನ್ನ ಶಿಷ್ಯರ ಸಹಿತ ನವ ವಧುವಿನೊಂದಿಗೆ ಹೊರಡುತ್ತಾನೆ. ಬರಬರುತ್ತಾ ಯಮುನಾ ನದಿಯ ದಡದಲ್ಲಿ ಮಧ್ಯಾಹ್ನದ ಆಹ್ನಿಕಕ್ಕಾಗಿ‌ ಪ್ರಯಾಣವನ್ನು ನಿಲ್ಲಿಸಿ ಅನುಷ್ಠಾನ ಪೂರೈಸಲು ನದಿ ಬದಿಗೆ ಹೋಗುತ್ತಾನೆ .

ನವ ವಧು ಶೀಲೆಯು ಹೊಳೆ ಬದಿ ಹೋಗುತ್ತಾ ಕೆಂಪುಬಟ್ಟೆಯನ್ನು ಧರಿಸಿದ ಹೆಂಗಸರ ಗುಂಪು ಅನಂತ ವ್ರತದಲ್ಲಿ ತೊಡಗಿರುವುದನ್ನು ಕಾಣುತ್ತಾಳೆ . ವ್ರತದ ವಿವರವನ್ನು ತಿಳಿದುಕೊಂಡ ಶೀಲೆ ತಾನು ವ್ರತ ಮಾಡಲು ಸಿದ್ಧಳಾಗುತ್ತಾಳೆ . ಆಗ ಹೆಂಗಸರು ವ್ರತವಿಧಿಯನ್ನು ಹೇಳುತ್ತಾರೆ. ಈ ವ್ರತ ವಿಧಿಯಲ್ಲಿ ಅನಂತನು ಪೂಜಿಸಲ್ಪಡುತ್ತಾನೆ .

‌‌ ಒಂದು ಸೇರು ಅಕ್ಕಿಯಿಂದ ಪುರುಷನಾಮಕನಾದ ಪರಮಾತ್ಮನ ನಿಮಿತ್ತದಿಂದ ಪಾಕಮಾಡಿ ಅನಂತನಿಗರ್ಪಿಸಿ‌ ಅರ್ಧವನ್ನು ಬ್ರಾಹ್ಮಣನಿಗೆ ದಾನಮಾಡಿ ಉಳಿದರ್ಧವನ್ನು‌ ತಾನು ಭೋಜನಮಾಡಬೇಕು .ದ್ರವ್ಯದಲ್ಲಿ‌ ವಂಚನೆಮಾಡದೆ ತನ್ನ ಶಕ್ತಿಯಿದ್ದಷ್ಟು ದಕ್ಷಿಣೆ ಕೊಡಬೇಕು .ನದಿಯ ದಡದಲ್ಲಿ‌‌ ಅನಂತನನ್ನು‌ ಪೂಜಿಸಬೇಕು .

ದರ್ಭೆಯಿಂದ ಶೇಷನ ಪ್ರತಿಮೆಯನ್ನುಮಾಡಿ ಬಿದಿರಿನ ಪಾತ್ರದಲ್ಲಿಟ್ಟು ಸ್ನಾನಮಾಡಿ‌ ಮಂಡಲದ ಮೇಲೆ ಗಂಧ ,ಪುಷ್ಪ‌, ,ಧೂಪ‌,ದೀಪ‌ಗಳಿಂದ ಅನೇಕ‌ವಿಧ ಪಕ್ವಾನ್ನಗಳಿಂದೊಡಗೂಡಿದ ನೈವೇದ್ಯಗಳಿಂದ ದೇವರ ಮುಂಭಾಗದಲ್ಲಿ‌ ಕುಂಕುಮದಿಂದ ಕೆಂಪಾದ ದೃಢವಾದ ಹದಿನಾಲ್ಕು ಗಂಟುಗಳುಳ್ಳ‌ ದೋರವನ್ನಿಟ್ಟು‌ ಪೂಜಿಸಬೇಕು .ಅನಂತರ ದೋರವನ್ನು ಮೇಲೆ ಹೇಳಿದಂತೆ ಕಟ್ಟಿಕೊಳ್ಳಬೇಕು .

” ಸಂಸಾರವೆಂಬ ಮಹಾಸಮುದ್ರದಲ್ಲಿ‌ ಮುಳುಗಿದ್ದ ನನ್ನನ್ನು ,ಎಲೈ ,ಅನಂತನೆ‌, ವಾಸುದೇವನೆ ಉದ್ಧರಿಸು ,ನಾಶವಿಲ್ಲದ ನಿನ್ನ ರೂಪದಲ್ಲಿ ನನ್ನನ್ನು ವಿನಿಯೋಗಿಸು , ಸಾರೂಪ್ಯವೆಂಬ ಮೋಕ್ಷವನ್ನು ಕೊಡು . ಅನಂತರೂಪಿಯಾದ ನೀನು‌ ಈ ಸೂತ್ರದಲ್ಲಿ ಸನ್ನಿಹಿತನಾಗಿರುವೆ ,ನಿನಗೆ ನಮಸ್ಕಾರ ” ಎಂಬ ಮಂತ್ರದಿಂದ ದೋರವನ್ನು ಕಟ್ಟಿಕೊಳ್ಳಬೇಕು . ಹೀಗೆ ದೋರವನ್ನು ಕಟ್ಟಿಕೊಂಡ ಶೀಲೆಯು ಮನೆಗೆ ಬರಲಾಗಿ ಮನೆಯು ಧನ ದಾನ್ಯಗಳಿಂದ ತುಂಬಿತ್ತು, .

ಒಂದು ದಿನ ಕೌಂಡಿನ್ಯನು ಶೀಲೆಯ ತೋಳಿನಲ್ಲಿದ್ದ ದೋರವನ್ನು‌ ಕಂಡು ಕುಪಿತನಾಗಿ “ನನ್ನನ್ನು ವಶೀಕರಿಸಿಕೊಳ್ಳಲು‌ ಇದನ್ನು ಕಟ್ಟಿಕೊಂಡಿರುವೆಯಾ” ಎಂದು ಮೂದಲಿಸುತ್ತಾ ದೋರವನ್ನು ಕಿತ್ತು ಬೆಂಕಿಗೆ ಹಾಕುತ್ತಾನೆ .‌ ಆ ಕ್ಷಣ ಶೀಲೆಯು ದೋರವನ್ನು ಬೆಂಕಿಯಿಂದ ತೆಗೆದು ಹಾಲಿಗೆ ಹಾಕುತ್ತಾಳೆ .

[ಪ್ರಸ್ತುತ ವ್ರತಾಚರಣೆಯಲ್ಲಿ ತೊಡಗುವವರು , ಕಳೆದ ವರ್ಷ ಆರಾಧಿಸಿ ಕಟ್ಟಿಕೊಂಡ ದೋರವನ್ನು ಮತ್ತೆ ಕಟ್ಟಿಕೊಂಡು ,ಕಲ್ಪೋಕ್ತಪೂಜೆಯನ್ನು ನೆರವೇರಿಸಿ ಬಳಿಕ‌ ನೂತನವಾಗಿ ಪೂಜಿಸಲ್ಪಟ್ಟ ದೋರವನ್ನು‌ ಕಟ್ಟಿಕೊಂಡು ಹಳೆದೋರವನ್ನು‌ ಬಿಚ್ಚಿ ಹಾಲಿಗೆ ಹಾಕುವ ವಿಧಿ ಪೂಜಾಕ್ರಮದ ಅವಿಭಾಜ್ಯ ಅಂಗವಾಗಿದೆ.]

ಇಂತಹ ಘಟನೆಯಿಂದ ಸಕಲ‌ಸಂಪತ್ತನ್ನು ಕೌಂಡಿನ್ಯನು‌ ಕಳೆದುಕೊಂಡು ನಿರ್ಗತಿಕನಾದನು . ಎಂದು ಶ್ರೀಕೃಷ್ಣನು ಧರ್ಮರಾಯನಿಗೆ ವಿಸ್ತಾರವಾದ ಕಥೆಯನ್ನು ಹೇಳುತ್ತಾ ಕೌಂಡಿನ್ಯನು ಅನಂತನನ್ನು ಹುಡುಕಿ ಹೊರಟು ಕೊನೆಗೆ ಹೇಗೆ ಮರಳಿ ವ್ರತವನ್ನು ಮಾಡಿ ಅನಂತನ ಅನುಗ್ರಹದಿಂದ ಕಳಕೊಂಡ ಸಂಪತ್ತನ್ನು ಪಡೆದು ಬಾಳಿ ಬದುಕಿ ವೈಕುಂಠವನ್ನು ಸಿದ್ಧಿಸಿಕೊಂಡ ಎಂಬ ವಿವರವನ್ನು ಹೇಳುತ್ತಾನೆ .

ಯಾರು ಸಂಸಾರಿಯಾಗಿ ಸುಖಿಗಳಾಗಿ ಋಜುಮಾರ್ಗಿಗಳಾಗಿ ಬದುಕಲು ಬಯಸುವರೋ ಅವರು ಮೂರುಲೋಕಕ್ಕೂ ಸ್ವಾಮಿಯಾದ ಅನಂತದೇವನ್ನು ಭಕ್ತಿಯಿಂದ ಪೂಜಿಸಿ ಉತ್ತಮ ದೋರವನ್ನು ಬಲತೋಳಿನಲ್ಲಿ ಕಟ್ಟಿಕೊಳ್ಳುತ್ತಾರೆ.
ಬಹಳಷ್ಟು ಮನೆಗಳಲ್ಲಿ ನೋಂಪು ವ್ರತಾಚರಣೆ ಶತಮಾನಗಳಿಂದ ನಡೆದುಬಂದಿದೆ , ಶ್ದಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಈ ಪರ್ವ ವ್ರತವಾಗಿ ನೆರವೇರುತ್ತದೆ .ಪ್ರಸಿದ್ಧ ವಿಷ್ಣು ದೇವಾಲಯಗಳಲ್ಲಿ ,ಅನಂತ ಪದ್ಮನಾಭ ದೇವಳಗಳಲ್ಲಿ ಅನಂತವ್ರತ ಸಂಭ್ರಮದಿಂದ ನಡೆಯುತ್ತದೆ.

|ಹದಿನಾಲ್ಕು | : ಚತುರ್ದಶಿ ತಿಥಿಯಂದು ಅನಂತವ್ರತ‌ ಆಚರಣೆ . ಶುದ್ಧ ಪಕ್ಷದ ಹದಿನಾಲ್ಕನೇ ದಿನ . ಮರುದಿನ ಹುಣ್ಣಿಮೆ .ಅಂದರೆ ವೃದ್ಧಿ ಪಕ್ಷದ ಪರಿಪೂರ್ಣ ವೃದ್ಧಿಯ ಹಿಂದಿನ ದಿನ .‌ಚತುರ್ದಶಿಗೆ ದ್ವಿತೀಯ‌ ಹುಣ್ಣಿಮೆ . ಇದು ಬಹಳ ಪ್ರಸ್ತುತ. ಇದಕ್ಕೆ ಪೂರಕವಾಗಿ ದೋರದಲ್ಲಿ ಹದಿನಾಲ್ಕು ಗಂಟುಗಳು .ವ್ರತದ ಅನುಷ್ಠಾನ ಕ್ರಮದಂತೆ ನಿರಂತರ ಹದಿನಾಲ್ಕು ವರ್ಷ ನೆರವೇರಿಸಬೇಕು.

ಇದು ಶ್ರೀಕೃಷ್ಣನು ಧರ್ಮರಾಯನಿಗೆ ಉಪದೇಶಿಸಿದ ಅನಂತವ್ರತದ ಸೂಕ್ಷ್ಮ ವಿವರಗಳು. ಹದಿನಾಲ್ಕು ಲೋಕಗಳೆಂದು ಒಂದು ತಿಳಿವಳಿಕೆ , ಅದರಂತೆ ಏಳು + ಏಳು ಲೋಕಗಳು.ಲೋಕಗಳ ಎಣಿಕೆ.ಭುವನ ,ಅತಳ ,ವಿತಳ ..ಇತ್ಯಾದಿ. ಚತುರ್ದಶ ವಿದ್ಯೆ : ನಾಲ್ಕು ವೇದ , ಆರು ವೇದಾಂಗ ,ಧರ್ಮ ಶಾಸ್ತ್ರ ,ಪುರಾಣ ನ್ಯಾಯ, ಮೀಮಾಂಸೆ. ಚತುರ್ದಶ ರತ್ನ : ಲಕ್ಷ್ಮೀ ,ಕೌಸ್ತುಭ, ಪಾರಿಜಾತ, ಸುರಾ,ಧನ್ವಂತರಿ,ಚಂದ್ರಮ ,ಐರಾವತ, ಉಚ್ಚೈಃಶ್ರವ,ಶಂಖ ,ಹರಿಧನುಸ್ಸು,ಅಪ್ಸರೆ, ವಿಷ,ಅಮೃತ,ಕಾಮಧೇನು.
ಹೀಗೆ ಹದಿನಾಲ್ಕರ ನಿರೂಪಣೆಗಳಿವೆ.
(ಸಂಗ್ರಹ)

• ಕೆ .ಎಲ್ .ಕುಂಡಂತಾಯ

 
 
 
 
 
 
 
 
 
 
 

Leave a Reply