ಹಸೆಮಣೆಯಲ್ಲಿದ್ದಾಗಲೇ ಕುಸಿದು ಬಿದ್ದು ಕೊನೆಯುಸಿರೆಳೆದ ವಧು!

ಸಾವು ಹೇಗೆ ಎದುರಾಗುತ್ತದೆ ಎಂಬುದು ಊಹಿಸಲೂ ಸಾಧ್ಯವಿಲ್ಲ. ನೂರಾರು ಕನಸು ಹೊತ್ತು ಹಸೆಮಣೆ ಏರಿದ್ದ ನವ ವಧು ವಿಧಿ-ವಿಧಾನ ನಡೆಯುತ್ತಿರುವಾಗಲೇ ಹೃದಯಾಘಾತದಿಂದ ಕೊನೆಯುಸಿರೆಳೆದ ಆಘಾತಕಾರಿ ಘಟನೆ ಗುಜರಾತ್ ನ ಭಾವ್ ನಗರದ ಸುಭಾಶ್ ನಗರ ಪ್ರದೇಶದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

ಈ ಘಟನೆ ಭಗವಾನೇಶ್ವರ ಮಹಾದೇವ್ ದೇವಸ್ಥಾನದ ಮುಂಭಾಗದ ಸ್ಥಳದಲ್ಲಿ ಈ ದುರಂತ ಘಟನೆ ನಡೆದಿದೆ. ವಧು ಹೇತಾಲ್ ಮತ್ತು ವರ ವಿಶಾಲ್ ಹಸೆಮಣೆಯಲ್ಲಿ ಕುಳಿತಿದ್ದು, ವಿಧಿ-ವಿಧಾನಗಳು ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವಧು ದಿಢೀರನೆ ಮೂರ್ಛೆ ತಪ್ಪಿ ಬಿದ್ದಿದ್ದಳು. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಆಕೆ ಹೃದಯಾಘಾತದಿಂದ ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿದ್ದರು.

ಆಕಸ್ಮಿಕವಾಗಿ ನಡೆದ ಘಟನೆಯಿಂದ ವಧು ಮತ್ತು ವರನ ಸಂಬಂಧಿಕರು ಆಘಾತಕ್ಕೊಳಗಾಗಿದ್ದರು. ಕೊನೆಗೆ ಏನೇ ಆಗಲಿ ವಿವಾಹ ಕಾರ್ಯಕ್ರಮ ರದ್ದು ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದು, ವಧುವಿನ ಸಹೋದರಿಯನ್ನೇ ವರನಿಗೆ ಕೊಟ್ಟು ವಿವಾಹ ನೆರವೇರಿಸುವ ಪ್ರಸ್ತಾಪ ವರನ ಕಡೆಯವರು ಮುಂದಿಟ್ಟಿದ್ದರು. ದುಃಖದ ನಡುವೆಯೇ ಹೇತಾಲ್ ಶವವನ್ನು ಶೈತ್ಯಾಗಾರದಲ್ಲಿ ಇಟ್ಟು, ವಿವಾಹ ಕಾರ್ಯಕ್ರಮ ನೆರವೇರಿಸಿರುವುದಾಗಿ ವರದಿ ವಿವರಿಸಿದೆ.

ಒಂದು ಶುಭ ಕಾರ್ಯ ನಡೆಯುವ ವೇಳೆ ಇಂತಹ ಘಟನೆ ನಡೆದಿರುವುದು ಆಘಾತ ತಂದಿದೆ. ತಮ್ಮ ಮಗಳು ಸಾವನ್ನಪ್ಪಿರುವ ದುರಂತದ ನಡುವೆಯೂ ವರನ ಕುಟುಂಬಸ್ಥರು ನೊಂದ ಮನಸ್ಸಿನಿಂದ ವಾಪಸ್ ಹೋಗಬಾರದು ಎಂಬ ದೃಷ್ಟಿಯಲ್ಲಿ ವಧುವಿನ ಸಹೋದರಿಯನ್ನು ಕೊಟ್ಟು ವಿವಾಹ ಮಾಡಿಕೊಡುವ ಮೂಲಕ ಮಾದರಿಯಾಗಬೇಕು ಎಂಬುದಾಗಿ ಸಮಾಜದ ಮುಖಂಡರು ವಧುವಿನ ಕುಟುಂಬದವರಿಗೆ ಮನವರಿಕೆ ಮಾಡಿಕೊಟ್ಟ ಮೇಲೆ ವಿವಾಹ ಕಾರ್ಯಕ್ರಮ ನೆರವೇರಿತ್ತು. ನಂತರ ವಧುವಿನ ಅಂತ್ಯ ಸಂಸ್ಕಾರ ನೆರವೇರಿಸಲಾಯ್ತು ಎಂದು ಮಾಲ್ದಾರಿ ಸಮಾಜದ ಮುಖಂಡ ಲಕ್ಷ್ಮಣ್ ಭಾಯಿ ರಾಥೋಡ್ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply