ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡ್ತಿದ್ದ ಐವರು MBBS ವಿದ್ಯಾರ್ಥಿಗಳು ಅರೆಸ್ಟ್

ತಾವು ವಾಸವಿದ್ದ ಬಾಡಿಗೆ ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಐವರು MBBS ವಿದ್ಯಾರ್ಥಿಗಳನ್ನ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಶಿವಮೊಗ್ಗದ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ಅಬ್ದುಲ್ ಖಯ್ಯಂ, ಅರ್ಪಿತಾ, ವಿಘ್ನರಾಜ್, ವಿನೋದ್ ಕುಮಾರ್, ಪಾಂಡಿದೊರೈ ಬಂಧಿತ ಆರೋಪಿಗಳು.

ಅಬ್ದುಲ್ ಖಯ್ಯಂ, ವಿಘ್ನರಾಜ್ ಹಾಗೂ ಅರ್ಪಿತಾ ಶಿವಮೊಗ್ಗದ ಶಿವಗಂಗಾ ಲೇಔಟ್ ನಲ್ಲಿ ವಾಸಕ್ಕೆ ಬಾಡಿಗೆ ಮನೆ ಪಡೆದಿದ್ದರು. ಅದೇ ಮನೆಯಲ್ಲೇ ಹೂ ಬೆಳೆಯುವ ಪಾಟ್‌ಗಳಲ್ಲಿ ಗಾಂಜಾ ಬೆಳೆದು, ಅದನ್ನು ಟೇಬಲ್‌ಫ್ಯಾನ್ ಗಾಳಿಯಿಂದ ಒಣಗಿಸಿ, ಪ್ಯಾಕೆಟ್ ಮಾಡಿ ಮಾರಾಟ ಮಾಡುತ್ತಿದ್ದರು. ಇವರ ಬಳಿ ಗಾಂಜಾ ಕೊಳ್ಳಲು ಪಾಂಡಿದೊರೈ ಹಾಗೂ ವಿನೋದ್ ಕುಮಾರ್ ಹೋಗಿದ್ದರು.

ಖಚಿತ ಮಾಹಿತಿ ಮೇರೆಗೆ ಶಿವಗಂಗಾ ಲೇಔಟ್ ನಿವಾಸದ ಮೇಲೆ ದಾಳಿ ನಡೆಸಿದ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಆರೋಪಿಗಳಿಂದ 6 ಸಾವಿರ ರೂ. ಮೌಲ್ಯದ ಹಸಿ ಗಾಂಜಾ, 20 ಸಾವಿರ ರೂ. ಮೌಲ್ಯದ ಒಣ ಗಾಂಜಾ, 30 ಸಾವಿರ ರೂ. ಮೌಲ್ಯದ ಚರಸ್, ಸೀರಿಂಜ್‌ಗಳು, ಹುಕ್ಕಾ ಕೊಳವೆ, 6 ಟೇಬಲ್ ಫ್ಯಾನ್ ಸೇರಿದಂತೆ ಇತರೆ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರಿದಿದೆ.

ಶಿವಮೊಗ್ಗಕ್ಕೆ MBBS ವ್ಯಾಸಂಗ ಮಾಡಲು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ವಿದ್ಯಾರ್ಥಿಗಳು ಆಗಮಿಸಿದ್ದರು. ಹೆತ್ತವರು ಸಹ ತಮ್ಮ ಮಕ್ಕಳು ಡಾಕ್ಟರ್ ಆಗುತ್ತಾರೆ ಎಂಬ ಕನಸು ಕಂಡಿದ್ದರು. ಶಿವಮೊಗ್ಗದ ಖಾಸಗಿ ಕಾಲೇಜಿಗೆ ಲಕ್ಷಾಂತರ ಹಣ ಕೊಟ್ಟು ಎಂಬಿಬಿಎಸ್ ಪದವಿಗೆ ಸೇರಿಸಿದ್ದರು. ಆದ್ರೆ ಈ ವಿದ್ಯಾರ್ಥಿಗಳು ತಾವು ವಾಸವಿದ್ದ ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದರು. ಎಂಬಿಬಿಎಸ್ ಪದವಿ ಪಡೆದು ವೈದ್ಯರಾಗಬೇಕಿದ್ದ ವಿದ್ಯಾರ್ಥಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ.

 
 
 
 
 
 
 
 
 
 
 

Leave a Reply