ವಿಶ್ವ ಪ್ರಕೃತಿ ವಿಕೋಪ ನಿಯಂತ್ರಣ ದಿನಾಚರಣೆ

ಕುಂದಾಪುರ : ಇತ್ತೀಚಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪಗಳು ಜಾಸ್ತಿಯಾಗುತ್ತಿವೆ. ಮನುಷ್ಯ ಮತ್ತು ಪ್ರಕೃತಿಯ ಒಡನಾಟದಲ್ಲಿ ಸಾಮರಸ್ಯ ತಪ್ಪಿರುವುದೇ ಇದಕ್ಕೆ ಕಾರಣ. ಅತಿವೃಷ್ಟಿ, ನೆರೆ ಹಾವಳಿ, ಭೂ ಕುಸಿತ, ಮೇಘ ಸ್ಪೋಟ ಇತ್ಯಾದಿಗಳು ಒಂದಿಲ್ಲೊಂಡೆದೆ ದಿನನಿತ್ಯ ಎಂಬಂತಾಗಿದೆ. ಪ್ರಾಕೃತಿಕ ವಿಕೋಪಗಳನ್ನು ತಡೆಯುವುದು ಅಸಾಧ್ಯವಾದರೂ, ಅವುಗಳ ಬಗ್ಗೆ ಅರಿವು ಹೊಂದಿದ್ದರೆ, ಜೀವ ಮತ್ತು ಆಸ್ತಿ ಹಾನಿಯನ್ನು ಕಡಿಮೆ ಮಾಡಬಹುದು. ಇದಕ್ಕಾಗಿ ವಿವಿಧ ಇಲಾಖೆಗಳಿದ್ದರೂ, ಸಾರ್ವಜನಿಕರು ಕೈ ಜೋಡಿಸದೆ ವಿಪತ್ತು ತಪ್ಪಿಸಲು ಅಸಾಧ್ಯ. ಆದರೆ, ಉಡುಪಿ ಜಿಲ್ಲೆಯಲ್ಲಿ ಇಂತಹ ಎಲ್ಲ ವಿಷಮ ಪರಿಸ್ಥಿತಿಗಳಲ್ಲೂ ಇಲಾಖೆಗಳೊಂದಿಗೆ ಸಹಕರಿಸಿ, ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗುವ ಉತ್ಸಾಹಿ ಯುವ ಪಡೆಯೇ ಇದೆ. ವಿವಿಧ ಸಂಘ – ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ರಕ್ಷಣಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ತರಬೇತಿಗಳನ್ನು ನೀಡುವುದರಿಂದ ಸಾಮಾಜಿಕ ಸುರಕ್ಷೆಗೆ ದೊಡ್ಡ ಕೊಡುಗೆ ಸಲ್ಲಿಸಿದಂತಾಗುತ್ತದೆ – ಎಂದು ಕುಂದಾಪುರದ ಡಿ ವೈ ಎಸ್ ಪಿ ಕೆ. ಶ್ರೀಕಾಂತ್ ಹೇಳಿದರು.

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್, ದ ಕ ಮತ್ತು ಉಡುಪಿ ಜಿಲ್ಲೆ ಹಾಗೂ ಕುಂದಾಪುರ – ಬೈಂದೂರು ವಲಯ ಇವರ ನೇತೃತ್ವದಲ್ಲಿ ಬೀಜಾಡಿಯ ಐಶ್ವರ್ಯ ಮೀಡಿಯಾ ಮತ್ತು ಸ್ಟುಡಿಯೋ ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆ, ಅಗ್ನಿಶಾಮಕ ಠಾಣೆ ಕುಂದಾಪುರ, ಕೋಟೇಶ್ವರದ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಘಟಕ ಇವರ ಸಹಯೋಗದೊಂದಿಗೆ ಕಾಲೇಜಿನಲ್ಲಿ ನಡೆದ ವಿಶ್ವ ಪ್ರಕೃತಿ ವಿಕೋಪ ನಿಯಂತ್ರಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿ ಪ್ರಾಂಶುಪಾಲ ಡಾ. ರಾಜೇಂದ್ರ ನಾಯಕ್ ಮಾತನಾಡಿ, ಪ್ರಕೃತಿಯ ಮಹತ್ವವನ್ನು ತಿಳಿಸುವ ಅಂಶಗಳು ಇಂದು ಶಿಕ್ಷಣದಲ್ಲಿಲ್ಲ. ಶಿಕ್ಷಣ ಮತ್ತು ಸಂಸ್ಕಾರ ದೂರಾಗಿವೆ. ಇಂದು ಶಿಕ್ಷಣ ಮತ್ತು ಶ್ರೇಯಾಂಕ ಎಂದಾಗಿದೆ. ಹೀಗೆ ಪ್ರತಿಭೆಯನ್ನು ಮಾತ್ರ ಪುರಸ್ಕರಿಸಿ, ಸಮಾಜವನ್ನು ಬದಿಗೆ ಸರಿಸಿದ್ದರಿಂದ, ಪ್ರಾಕೃತಿಕ ವಿಕೋಪಗಳು ಮತ್ತಿತರ ವಿಷಮ ಪರಿಸ್ಥಿತಿಗಳಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೆ ಇತರರ ಬಗ್ಗೆ ಕಾಳಜಿ ವಹಿಸುವ ಪೊಲೀಸರು, ಅಗ್ನಿಶಾಮಕರು, ಸ್ವಯಂ ಸೇವಕರು ಇತರರ ಬಗ್ಗೆ ಸುಶಿಕ್ಷಿತರೂ ಗೌರವಾದರ ತೋರಲು ಮರೆಯುವಂತಾಗಿದೆ. ಆದ್ದರಿಂದಲೇ ಇಂತಹ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ನಡೆಸಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಫೋಟೋಗ್ರಾಫರ್ಸ್ ಅಸೋಸಿಯೇಷನ್ ನವರ ಕಾರ್ಯಗಳನ್ನು ಶ್ಲಾಘಿಸಿದರು.

ಎಸ್ ಕೆಪಿಎ ಕುಂದಾಪುರ-ಬೈಂದೂರು ವಲಯ ಅಧ್ಯಕ್ಷ ದೊಟ್ಟಯ್ಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಿನ್ಸಿಪಾಲ್ ರಾಜೇಂದ್ರ ನಾಯಕ್ ಆಪತ್ಭಾಂದವರನ್ನು ಸನ್ಮಾನಿಸಿದರು. ಕುಂದಾಪುರ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಬಾಬು ಶೆಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ಮತ್ತು ಕೆಳಕಂಡಂತಿವೆ ಪ್ರಾತ್ಯಕ್ಷತೆಯನ್ನು ನಡೆಸಿಕೊಟ್ಟರು. ಕಾಲೇಜಿನ ಎನ್ಎಸ್ಎಸ್ ಘಟಕದ ಯೋಜನಾಧಿಕಾರಿಗಳಾದ ಸಂತೋಷ್ ನಾಯ್ಕ್, ಸುಚಿತ್ರ, ಎಸ್ ಕೆಪಿಎ ಕುಂದಾಪುರ-ಬೈಂದೂರು ವಲಯದ ಸಲಹಾ ಸಮಿತಿ ಅಧ್ಯಕ್ಷ ನಾಗರಾಜ್ ರಾಯಪ್ಪನ ಮಠ, ಪ್ರಧಾನ ಕಾರ್ಯದಶಿ೯ ಸುರೇಶ್, ನಿಕಟಪೂರ್ವಧ್ಯಕ್ಷ ರಾಜ ಮಠದಬೆಟ್ಟು, ಎಸ್ ಕೆ ಪಿ ಎ ಸೊಸೈಟಿ ನಿದೇ೯ಶಕ ಗಣೇಶ್ ಬೆನಕ, ಉಪಾಧ್ಯಕ್ಷ ಶೀನ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ಆಪತ್ಬಾಂಧವರಾದ ಕುಂದಾಪುರ ಅಗ್ನಿಶಾಮಕ ಠಾಣಾಧಿಕಾರಿ ಬಾಬು ಶೆಟ್ಟಿ, ಅಗ್ನಿಶಾಮಕ ಪ್ರದೀಪ್ ಜಿ. ನಾಯ್ಕ್ ಮತ್ತು ಶೌರ್ಯ ಮತ್ತು ವಿಪತ್ತು ನಿರ್ವಹಣಾ ವಿಭಾಗದ ಕೋಟೇಶ್ವರ-ಕಾಳಾವರ ಘಟಕದ ಸಂಯೋಜಕ ರಾಜಶೇಖರ್ ಕುಂದರ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅಗ್ನಿ ಅವಘಡ, ಪ್ರಾಕೃತಿಕ ವಿಕೋಪಗಳ ಸಂದರ್ಭಗಳನ್ನು ನಿರ್ವಹಿಸುವ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆಗಳೊಂದಿಗೆ ಮಾಹಿತಿ ನೀಡಲಾಯಿತು.
ಐಶ್ವರ್ಯ ಮೀಡಿಯಾದ ಮುಖ್ಯಸ್ಥ, ಪತ್ರಕರ್ತ ಗಣೇಶ್ ಐಶ್ವರ್ಯ ಬೀಜಾಡಿ ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕ ವೆಂಕಟರಾಮ ಭಟ್ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ಶಾಸ್ತ್ರದ ಉಪನ್ಯಾಸಕ ನಾಗರಾಜ ಯು ಸನ್ಮಾನ ಪತ್ರ ವಾಚಿಸಿದರು. ಸಂತೋಷ್ ನಾಯ್ಕ್ ವಂದಿಸಿದರು.

 
 
 
 
 
 
 
 
 
 
 

Leave a Reply