ಬಿಜೆಪಿ ಕೊರೊನಾ ವಾರಿಯರ್ಸ್ ಸೇವೆ ಶ್ಲಾಘನೀಯ – ಉದಯಕುಮಾರ್ ಶೆಟ್ಟಿ

ಉಡುಪಿ: ಕೋವಿಡ್ ಸಂಕಷ್ಟ ಕಾಲದಲ್ಲಿ ದೇಶದ ಲಕ್ಷಾಂತರ ಮಂದಿ ಬಿಜೆಪಿ ಕಾರ್ಯಕರ್ತರು ಕೊರೊನಾ ವಾರಿಯರ್ಸ್ ಗಳಾಗಿ ಕೆಲಸ ಮಾಡಿದ್ದಾರೆ. ಶವ ಸಂಸ್ಕಾರದಿಂದ ತೊಡಗಿ, ಲಸಿಕಾ ಕೇಂದ್ರಗಳಲ್ಲೂ ದುಡಿದಿದ್ದಾರೆ. ಆಹಾರ ಕಿಟ್, ಔಷಧೀಯ ಸಲಕರಣೆ ವಿತರಣೆ ಮಾಡಿದ್ದಾರೆ. ಅವರೆಲ್ಲರ ಕಾರ್ಯ ಶ್ಲಾಘನೀಯ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ಅಭಿನಂದಿಸಿದ್ದಾರೆ.

ಇದೀಗ ಕೋವಿಡ್ 2ನೇ ಅಲೆ ಹತೋಟಿಗೆ ಬಂದಿದ್ದು, ಬಿಜೆಪಿ ಕೇಂದ್ರೀಯ ಘಟಕ ಆಯ್ದ ಬಿಜೆಪಿ ಕಾರ್ಯಕರ್ತರು ಹಾಗೂ ಸಮಾಜಸೇವೆಯಲ್ಲಿ ಆಸಕ್ತಿಯುಳ್ಳ ಯುವಕ ಹಾಗೂ ಯುವತಿಯರಿಗೆ ತರಬೇತಿ ನೀಡಿ ಆರೋಗ್ಯ ಕಾರ್ಯಕರ್ತರಾಗಿ ಸಮಾಜಕ್ಕೆ ಸೇವೆ ನೀಡುವ ಕಾರ್ಯಕ್ಕೆ ಮುಂದಾಗಿದೆ. ಅದನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಹಾಗೂ ಮಂಡಲ ಮಟ್ಟದಲ್ಲಿ ನಡೆಸಲಾಗುವುದು. ಈ ಆರೋಗ್ಯ ಕಾರ್ಯಕರ್ತರಿಗೆ ಥರ್ಮಲ್ ಸ್ಕ್ಯಾನರ್, ಆಕ್ಸಿಮೀಟರ್, ಕೋವಿಡ್ ಸೋಂಕಿನ ಹೋಮ್ ಟೆಸ್ಟ್ ಕಿಟ್ ಮತ್ತು ಆಮ್ಲಜನಕ ಸಾಂದ್ರಕಗಳನ್ನು ಹಾಗೂ ಸರಳ ವೈದ್ಯಕೀಯ ಪರಿಕರಗಳನ್ನು ಉಪಯೋಗಿಸುವ ಕ್ರಮವನ್ನು ಕಲಿಸಲಾಗುತ್ತದೆ. ಅಲ್ಲದೆ, ರೋಗನಿರೋಧಕ ಮಟ್ಟ ಹೆಚ್ಚಿಸುವ ಚಟುವಟಿಕೆ, ಮಕ್ಕಳ ಬಗ್ಗೆ ಕಾಳಜಿ ವಹಿಸುವ ಬಗ್ಗೆಯೂ ಈ ಆರೋಗ್ಯ ಸ್ವಯಂಸೇವಕರು ಜಾಗೃತಿ ಮೂಡಿಸುತ್ತಾರೆ. ಸೋಂಕು ಮತ್ತು ಅದು ಉಲ್ಬಣಗೊಂಡ ಸಂದರ್ಭದಲ್ಲಿ ಸೋಂಕಿತರು ಮತ್ತು ಹತ್ತಿರದ ಆರೋಗ್ಯ ಕೇಂದ್ರಗಳ ನಡುವಿನ ಸೇತುವೆಯಾಗಿ ಅವರು ಕಾರ್ಯನಿರ್ವಹಿಸುತ್ತಾರೆ.

ದ. ಕ. ಉಡುಪಿ ಮತ್ತು ಕೊಡಗು ಜಿಲ್ಲೆಯನ್ನೊಳಗೊಂಡ ಮಂಗಳೂರು ವಿಭಾಗದಲ್ಲಿ ನಗರ, ಸ್ಥಳೀಯ ಸಂಸ್ಥೆ ಹಾಗೂ ಗ್ರಾಮಗಳಲ್ಲಿ ಒಬ್ಬ ಯುವಕ ಹಾಗೂ ಒಬ್ಬ ಮಹಿಳಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲು ಪಕ್ಷ ತೀರ್ಮಾನಿಸಿದೆ. ದೇಶದಲ್ಲಿ 2 ಲಕ್ಷ ಕಾರ್ಯಕರ್ತರಿಗೆ ತರಬೇತಿ ನೀಡುವ ಯೋಜನೆಯನ್ನು ಬಿಜೆಪಿ ರಾಷ್ಟ್ರೀಯ ಸಮಿತಿ ಹೊಂದಿದೆ.ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸ್ವಯಂಸೇವಕರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಕೈ ಜೋಡಿಸುವ ಜೊತೆಗೆ ಲಸಿಕೆ ನೀಡಿಕೆ ಪ್ರಕ್ರಿಯೆಯಲ್ಲಿ ಸಹಕರಿಸುತ್ತಾರೆ. ಅದರಿಂದಾಗಿ ಕೊರೊನಾ 3ನೇ ಅಲೆ ಬಂದರೂ ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ. ಇಷ್ಟೆ ಅಲ್ಲದೆ, ಕೊರೊನಾ ಹೊರತಾಗಿಯೂ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಉಡುಪಿ ಜಿಲ್ಲೆಯಲ್ಲಿರುವ ಸುಮಾರು 13 ಲಕ್ಷ ಜನಸಂಖ್ಯೆಗೆ ಈಗಿರುವ ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ನಗರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು 74 ಇದ್ದು, ಅದರಲ್ಲಿ 1,028 ಆಶಾ ಕಾರ್ಯಕರ್ತೆಯರು, 1,150 ಅಂಗನವಾಡಿ ಕಾರ್ಯಕರ್ತೆಯರು, 265 ನರ್ಸ್ ಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ಈ ಆರೋಗ್ಯ ಕಾರ್ಯಕರ್ತರನ್ನು ಜೋಡಿಸಿಕೊಂಡು ಪರಿಣಾಮಕಾರಿ ಸೇವೆಯನ್ನು ಆರೋಗ್ಯ ಕ್ಷೇತ್ರದಲ್ಲಿ ನೀಡಲು ಸಾಧ್ಯವಾಗುತ್ತದೆ ಎಂದು ಉದಯಕುಮಾರ್ ಶೆಟ್ಟಿ ಹೇಳಿದ್ದಾರೆ

 
 
 
 
 
 
 
 
 
 
 

Leave a Reply