ಬಸ್-ಲಾರಿ-ಬೈಕ್ ನಡುವೆ ಭೀಕರ ಅಪಘಾತ; ಮಹಿಳೆ ತಲೆಮೇಲೆ ಹರಿದ ಲಾರಿ

ಬಸ್-ಲಾರಿ-ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಬೆಂಗಳೂರು- ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ ಬಳಿ ನಡೆದಿದೆ. ಈ ಅಪಘಾತದಲ್ಲಿ ಬೈಕ್‌ನಲ್ಲಿದ್ದ ಓರ್ವ ಮಹಿಳೆ ಸಾವನ್ನಪ್ಪಿದ್ದು, ಮತ್ತೊಬ್ಬರಿಗೆ ಗಂಭೀರ ಗಾಯವಾಗಿದೆ. 

ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಕೆಳಭಾಗದಿಂದ ನಾಯಂಡಹಳ್ಳಿ ಜಂಕ್ಷನ್‌ಗೆ ತೆರಳುವ ಮಾರ್ಗದಲ್ಲಿ ಇಕ್ಕಟ್ಟಾದ ಸ್ಥಳವಿದ್ದು, ಮೇಲ್ಸೇತುವೆಗೆ ಹೋಗುವವರು ಹಾಗೂ ಜಂಕ್ಷನ್‌ ಕಡೆಗೆ ಹೋಗುವವರ ನಡುವೆ ಯಾವಾಗಲೂ ಕಿತ್ತಾಟ ನಡೆಯುತ್ತದೆ. ಇನ್ನು ಬೈಕ್‌ ಸವಾರರು ಅಡ್ಡಾದಿಡ್ಡಿಯಾಗಿ ಸಂಚಾರ ಮಾಡುವುದು ಇಲ್ಲಿ ಮಾಮೂಲಿಯಾಗಿದೆ. ಪ್ರತಿನಿತ್ಯ ಇಲ್ಲಿ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಇದಕ್ಕೆ ಕ್ಯಾರೇ ಎನ್ನದೇ ಬಿಬಿಎಂಪಿ ನಿರ್ಲಕ್ಷ್ಯ ಮಾಡಿದೆ. ಇಂದು ಮಧ್ಯಾಹ್ನ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಲಾರಿ ನಡುವೆ ಸಿಕ್ಕಿಕೊಂಡು ಬೈಕ್‌ ಅಪಘಾತ ಉಂಟಾಗಿದೆ.

ಬೈಕ್‌ನಲ್ಲಿ ಅಜ್ಜಿ, ಮಗಳು ಹಾಗೂ ಮೊಮ್ಮಗು ಹೋಗುವಾಗ ಹಿಂದಿನಿಂದ ಬಂದ ಸಿಮೆಂಟ್‌ ಲಾರಿ ಗುದ್ದಿದೆ. ಬೈಕ್‌ ಚಲಾಯಿಸುತ್ತಿದ್ದ ಅನುಷಾ (34) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಇನ್ನು ಅಜ್ಜಿ ಮಂಜಮ್ಮ ಹಾಗೂ ಮಗುವಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಲಾರಿಯಲ್ಲಿದ್ದ ಸಿಮೆಂಟ್‌ ಮೂಟೆಗಳು ಕೂಡ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇನ್ನು ಇಡೀ ರಸ್ತೆಯಲ್ಲಿ ಸುಮಾರು 1 ಗಂಟೆಗೂ ಅಧಿಕ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿದ್ದರಿಂದ ವಾಹನ ಸಂಚಾರ ಸುಗಮ ವ್ಯವಸ್ಥೆ ಮಾಡಲು ಪೊಲೀಸರು ಪರದಾಡುತ್ತಿದ್ದಾರೆ. 

ನಾಯಂಡಹಳ್ಳಿ ಜಂಕ್ಷನ್‌ ಅಪಘಾತದಲ್ಲಿ ಉಂಟಾದ ಬೈಕ್‌ ಅಪಘಾತದಲ್ಲಿ ಅಜ್ಜಿ ಮಂಜಮ್ಮ ಹಾಗೂ ಅವರ ಮೊಮ್ಮಗುವಿಗೆ ಕೂಡ ಗಾಯವಾಗಿದೆ. ಲಾರಿ ಚಾಲಕನ ಅಜಾಗರೂಕ ಚಾಲನೆಯಿಂದ ಅಪಘಾತ ಉಂಟಾಗಿದ್ದು ಇದಕ್ಕೆ ನ್ಯಾಯ ಸಿಗಲೇಬೇಕು ಎಂದು ಗಾಯಾಳು ಅಜ್ಜಿಯ ಸಂಬಂಧಿಕರು ಲಾರಿಯ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇನ್ನು ಅಪಘಾತದ ದೃಶ್ಯವನ್ನು ನೋಡಲು ಸ್ಥಳದಲ್ಲಿ ನೂರಾರು ಜನರು ಸ್ಥಳದಲ್ಲಿ ಜಮಾವಣೆ ಆಗಿದ್ದು, ಇದರಿಂದ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿತ್ತು. ಇನ್ನು ಟ್ರಾಫಿಕ್‌ ನಿಯಂತ್ರಣಕ್ಕೆ ತರಲು ಪೊಲೀಸರು ಜನರ ಮೇಲೆ ಲಘು ಲಾಠಿ ಪ್ರಹಾರ ಮಾಡಿದ್ದಾರೆ. 

ಇನ್ನು ಲಾರಿ ಮತ್ತು ಬಸ್ಸಿನ ನಡುವೆ ಸಿಲುಕಿಕೊಂಡ ಇಬ್ಬರು ಬೈಕ್‌ ಸವಾರರಲ್ಲಿ ಹಿಂಬದಿ ಸವಾರಳಾದ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಇನ್ನು ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರ ಸ್ಥಿತಿಯೂ ಗಂಭೀರವಾಗಿದೆ. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಬೆನ್ನಲ್ಲೇ ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಬಂದು ಪರಿಶೀಲನೆ ಮಾಡಿದ್ದಾನೆ. ಇನ್ನು ಬಸ್‌ ಮತ್ತು ಲಾರಿಗಳು ಕೂಡ ಒಂದಕ್ಕೊಂದು ಉಜ್ಜಿಕೊಂಡಿದ್ದು ಸ್ಥಳದಲ್ಲಿ ಸುಮಾರು 1 ಗಂಟೆಗೂ ಅಧಿಕ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಬೆಂಗಳೂರಿನಲ್ಲಿ ನಾಯಂಡಹಳ್ಳಿ ಜಂಕ್ಷನ್‌ ಬಳಿ ಅವೈಜ್ಞಾನಿಕ ಕಾಮಗಾರಿ ಮಾಡಲಾಗಿದೆ. ಒಂದು ಕಡೆ ಮೆಟ್ರೋ ನಿಲ್ದಾಣ, ಮತ್ತೊಂದು ಕಡೆ ಮೇಲ್ಸೇತುವೆ ಕೊನೆಗೊಳ್ಳುವ ಇಳಿಜಾರು ಹಾಗೂ ಮತ್ತೊಂದು ಬದಿಯಲ್ಲಿ ಫುಟ್‌ಪಾತ್‌ ಒತ್ತುವರಿ ಮಾಡಲಾಗಿದೆ. ಇನ್ನು ರಸ್ತೆ ತುಂಬಾ ಕಿರಿದಾಗಿದ್ದು, ವಾಹನ ಸಂಚಾರಕ್ಕೂ ತೀವ್ರ ಅನಾನುಕೂಲ ಉಂಟಾಗುತ್ತಿದೆ. ಜೊತೆಗೆ, ಇದೇ ಕಿರಿದಾದ ಜಾಗದಲ್ಲಿ ಪಾದಾಚಾರಿ ಮೇಲ್ಸೇತುವೆ ಮಾರ್ಗವನ್ನೂ ನಿರ್ಮಾಣ ಮಾಡಲಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಜನರು ಇಳಿಯಲು ಮೆಟ್ಟಿಲುಗಳು ಹಾಗೂ ಲಿಫ್ಟ್‌ ಮಾಡಿದ್ದಾರೆ. ಇದರಿಂದ ರಸ್ತೆಯ ವಿಸ್ತೀರ್ಣ ಮತ್ತಷ್ಟು ಕಿರಿದಾಗಿದೆ. ಕೂಡಲೇ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

 
 
 
 
 
 
 
 
 
 
 

Leave a Reply