ಐಪಿಎಲ್: ಪ್ರಥಮ ಪಂದ್ಯ ಗೆದ್ದ ಆರ್.ಸಿ.ಬಿ

ದೇವದತ್ ಪಡಿಕ್ಕಲ್ ಮತ್ತು ಎಬಿ ಡಿವಿಲಿಯರ್ಸ್ ಅವರ ಅಮೋಘ ಬ್ಯಾಟಿಂಗ್ ಪರಿಣಾಮ ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು ತನ್ನ ಮೊದಲ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 10 ರನ್ ಗಳ ರೋಚಕ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚ್ಯಾಲೆಂಜರ್ಸ್, ದೇವದತ್ ಪಡಿಕ್ಕಲ್ (56 ರನ್, 42 ಎಸೆತ, 8 ಬೌಂಡರಿ) ಮತ್ತು ಎರೊನ್ ಫಿಂಚ್ (29 ರನ್, 27 ಎಸೆತ, 1 ಬೌಂಡರಿ, 2 ಸಿಕ್ಸ್) ಉತ್ತಮ ಜೊತೆಯಾಟದ ಭರವಸೆಯನ್ನು ನೀಡಿದರು. ಮೊದಲ ವಿಕೆಟ್ ಪತನವಾದಾಗ ಈ ಜೋಡಿ 90 ರನ್ ಸೇರಿಸಿಯಾಗಿತ್ತು.

ನಾಯಕ ವಿರಾಟ್ ಕೊಹ್ಲಿ ಕೇವಲ 14 ರನ್ ಗಳಿಸಲು ಮಾತ್ರ ಶಕ್ತರಾದರು. ಎಬಿ ಡಿವಿಲಿಯರ್ಸ್ ತನ್ನ ಎಂದಿನ ಸ್ಪೋಟಕ ಶೈಲಿಯಲ್ಲಿ ಬ್ಯಾಟ್ ಬೀಸುತ್ತಾ 30 ಎಸೆತಗಳಲ್ಲಿ ಅರ್ಧಶತಕ ಗಳಿಸಿ ರನೌಟ್ ಆದರು. ಅವರ ಭರ್ಜರಿ ಆಟದಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಗಳ ಸುರಿಮಳೆಯಾಗಿತ್ತು. ಅಂತಿಮವಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲ್ಲಲು 164 ರನ್ ಗಳ ದೊಡ್ಡ ಗುರಿಯನ್ನೇ ನೀಡಿದ ರಾಯಲ್ ಚ್ಯಾಲಂಜರ್ಸ್, ಬೌಲಿಂಗ್ ನಲ್ಲಿ ಎದುರಾಳಿ ತಂಡವನ್ನು ಕಟ್ಟಿಹಾಕಿತು.

ಯಜುವೇಂದ್ರ ಚಹಾಲ್ ಶಿಸ್ತಿನ ದಾಳಿ ನಡೆಸಿ 3 ವಿಕೆಟ್ ಕಬಳಿಸಿದರೆ, ನವದೀಪ್ ಸೈನಿ ಮತ್ತು ಶಿವಂ ದುಬೆ ತಲಾ 2 ವಿಕೆಟ್ ಪಡೆದರು. ಸನ್ ರೈಸರ್ಸ್ 153 ಗೆ ಸರ್ವಪತನವಾಗಿ 10 ರನ್ ಗಳಿಂದ ಸೋಲನ್ನು ಒಪ್ಪಿಕೊಂಡಿತು. ಸನ್ ರೈಸರ್ಸ್ ತಂಡಕ್ಕೆ ಜೊನಿ ಬೇರ್ಸ್ಟೊ (61 ರನ್, 43 ಎಸೆತ, 6 ಬೌಂಡರಿ, 2 ಸಿಕ್ಸ್) ಆಧಾರಸ್ಥಂಬವಾಗಿ ನಿಂತರೂ ಮನೀಶ್ ಪಾಂಡೆ ಬಿಟ್ಟರೆ ಉಳಿದ ಯಾರೂ ಜೊತೆಯಾಟವನ್ನು ನೀಡದ ಕಾರಣ ಪಂದ್ಯವು ಬೆಂಗಳೂರಿನ ಕಡೆಗೆ ತಿರುಗಿತು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply