ತೆಂಕನಿಡಿಯೂರು ಕಾಲೇಜು – ವಾರ್ಷಿಕೋತ್ಸವ

ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು  ಇಲ್ಲಿನ ೨೦೨೨-೨೩ನೇ ಸಾಲಿನ ವಾರ್ಷಿಕೋತ್ಸವವನ್ನು ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲ್ಲಿ ಆಯೋಜಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ಶಾಸಕರಾದ ಯಶ್‌ಪಾಲ್ ಎ. ಸುವರ್ಣ ವಾರ್ಷಿಕೋತ್ಸವಕ್ಕೆ ಶುಭಕೋರುತ್ತಾ  ತೆಂಕನಿಡಿಯೂರು ವಿದ್ಯಾ ಸಂಸ್ಥೆ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಖಾಸಗಿ ವಿದ್ಯಾಸಂಸ್ಥೆಗಳಿಗೆ ಕಡಿಮೆಯಿಲ್ಲದಂತೆ ಸಾಧಿಸಿರುವುದು ಶ್ಲಾಘನೀಯವೆಂದರು.
ಇನ್ನೋರ್ವ ಮುಖ್ಯ ಅತಿಥಿ ಮಾಜಿ ಶಾಸಕರಾದ ಕೆ. ರಘುಪತಿ ಭಟ್ ಸರಕಾರಿ ಕಾಲೇಜುಗಳಲ್ಲಿ ಮೊದಲಿಗೆ ಸ್ನಾತಕೋತ್ತರ ಪದವಿ ಕೋರ್ಸ್ಗಳನ್ನು ಆರಂಭಿಸಿದ ಹೆಗ್ಗಳಿಕೆಯಿರುವ ತೆಂಕನಿಡಿಯೂರು  ಸರಕಾರಿ ಪ್ರಥಮ ದರ್ಜೆ ಕಾಲೇಜು ಇದುವರೆಗೆ ಒಟ್ಟು ೪೮ ರ‍್ಯಾಂಕ್‌ಗಳನ್ನು ಗಳಿಸಿ ರಾಜ್ಯದ ಪ್ರತಿಷ್ಠಿತ ಸರಕಾರಿ ಕಾಲೇಜುಗಳಲ್ಲಿ ಒಂದಾಗಿದೆ. ಅಲ್ಲದೆ ಈ ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಉನ್ನತ ಶಿಕ್ಷಣದ ಕನಸನ್ನು ಸಾಕಾರಗೊಳಿಸಲು ಪ್ರೇರಣೆಯಾಗಲಿದೆಯೆಂದರು.

ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಹೆಚ್ಚುವರಿ ನಿರ್ದೇಶಕರಾದ ರಾಜಶೇಖರ ಹೆಬ್ಬಾರ್ ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿ ಸಿಗುವ ಸೌಲಭ್ಯಗಳು ಹಾಗೂ ಮಾರ್ಗದರ್ಶನದ ಸಂಪೂರ್ಣ ಪ್ರಯೋಜನ ಪಡೆದುಕೊಂಡು ತಮ್ಮ ವೃತ್ತಿ ಭವಿಷ್ಯ ರೂಪಿಸಿಕೊಳ್ಳುವಂತೆ ಸಲಹೆ ಇತ್ತರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ  ಪ್ರೊ. ಸುರೇಶ್ ರೈ ಕೆ. ತೆಂಕನಿಡಿಯೂರಿನಲ್ಲಿ ಕೆ.ಜಿ.ಯಿಂದ ಪಿ.ಜಿ. ತನಕದ ಉನ್ನತ ಶಿಕ್ಷಣದ ಸೌಲಭ್ಯ ಪಡೆಯುವಂತಾದದ್ದು ನಿಜಕ್ಕೂ ಹೆಮ್ಮೆಯ ವಿಚಾರವೆಂದರು.

ಕಾರ್ಯಕ್ರಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ರ‍್ಯಾಂಕ್ ವಿಜೇತ ಒಂಭತ್ತು ಮಂದಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿ ವಿಜೇತರು ಹಾಗೂ ಸಾಧಕರಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ರಾಧಾಕೃಷ್ಣ, ಡಾ. ದುಗ್ಗಪ್ಪ ಕಜೆಕಾರ್, ಐಕ್ಯುಎಸಿ ಸಂಚಾಲಕ ರಾದ ಡಾ. ಮೇವಿ ಮಿರಾಂದ, ವಿದ್ಯಾರ್ಥಿ ನಾಯಕರಾದ ಯಮುನಪ್ಪ ಮತ್ತು ಸ್ಪಂದನ ಮಯ್ಯ ಕಾರ್ಯದರ್ಶಿಗಳಾದ ದಿಶಾ ಕೆ.ಜಿ ಮತ್ತು ಅನ್ವಿತಾ ಜಿ.ವಿ ಹಾಗೂ ಶಿಕ್ಷಕ-ರಕ್ಷಕ ಸಂಘದ ಸುಜಾತ, ಕಾಲೇಜು ಅಭಿವೃದ್ಧಿ ಸಮಿತಿಯ ಕೋಶಾಧಿಕಾರಿ ದಯಾನಂದ ಶೆಟ್ಟಿ, ಉಪಸ್ಥಿತರಿದ್ದರು.
ವಿದ್ಯಾರ್ಥಿ ಪ್ರತಿನಿಧಿ ಸ್ಪಂದನ ಮಯ್ಯ ವಂದನಾರ್ಪಣೆ ಗೈದರೆ ಕನ್ನಡ ಸಹಪ್ರಾಧ್ಯಪಕರಾದ ವೆಂಕಟೇಶ್ ಹೆಚ್.ಕೆ ಮತ್ತು ಸಹಾಯಕ ಪ್ರಾಧ್ಯಾಪಕ ಡಾ. ರಘು ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಜರಗಿತು.

 
 
 
 
 
 
 
 
 
 
 

Leave a Reply