ಜ. 7ರಿಂದ 13ರ ತನಕ ಉಡುಪಿ ತುಳುಕೂಟದ 22ನೇ ವರ್ಷದ ಕೆಮ್ತೂರು ತುಳು ನಾಟಕ ಪರ್ಬ-2024

ಉಡುಪಿ : ಕರಾವಳಿಯ ತುಳುರಂಗಭೂಮಿಯ ಬೆಳವಣಿಗೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಮಹಾನೀಯರಲ್ಲಿ ದಿ| ಕೆಮ್ತೂರು ದೊಡ್ಡಣ್ಣ ಶೆಟ್ಟಿಯವರು ಅಗ್ರಗಣ್ಯರು. ಅವರ ತುಳು ರಂಗ ಚಳುವಳಿಯ ದೆಸೆಯಿಂದ ತುಳುಭಾಷೆ ಮತ್ತೆ ಪುನಶ್ಚೇತನಗೊಂಡಿತು ಎಂದರೆ ತಪ್ಪಾಗಲಿಕ್ಕಿಲ್ಲ. ಇದನ್ನು ಮನಗಂಡ ತುಳುಕೂಟ ಉಡುಪಿ(ರಿ) ಸಂಸ್ಥೆಯು ಕೆಮ್ತೂರು ದೊಡ್ಡಣ ಶೆಟ್ಟಿ ಅವರ ಸವಿನೆನಪಿಗಾಗಿ ತುಳುನಾಟಕ ಸ್ಫರ್ಧೆಯನ್ನು ಉಡುಪಿಯಲ್ಲಿ ನಿರಂತರವಾಗಿ ನಡೆಸುತ್ತಾ ಬಂದಿದೆ. ಈ ಮೂಲಕ ತುಳು ರಂಗಭೂಮಿಯನ್ನು ಜೀವಂತವಾಗಿರಿಸುವ ಹಾಗೂ ಸೃಜನಶೀಲ ಆಧುನಿಕ ರಂಗಪ್ರಜ್ಞೆಯ ಪ್ರಯೋಗಗಳು ಹೊರಹೊಮ್ಮಬೇಕು ಎಂಬ ಸದುದ್ಧೇಶವನ್ನು ಹೊಂದಲಾಗಿದೆ. ಕೆಮ್ತೂರು ನಾಟಕ ಸ್ಫರ್ಧೆಯ ಮೂಲಕ ಸಾವಿರಾರು ಕಲಾವಿದರನ್ನು ಹುಟ್ಟುಹಾಕಿ, ತುಳು ರಂಗಭೂಮಿ ಅನ್ಯಭಾಷಾ ರಂಗಭೂಮಿಗಳಿಗೆ ಸರಿಸಮನಾಗಿ ಬೆಳೆಯುವ ನಿಟ್ಟಿನಲ್ಲಿ ಪ್ರೇರೇಪಣೆ ನೀಡುವ ಪ್ರಯತ್ನ ಮಾಡಲಾಗಿದೆ. 

ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆಯ ಇಪ್ಪತ್ತೆರಡನೇ ವರ್ಷದ ಸ್ಪರ್ಧೆಯನ್ನು ಈ ಬಾರಿ ಜನವರಿ. ೭ ರಿಂದ ೧೩ರ ತನಕ ಉಡುಪಿ ಎಂಜಿಎo ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾಗಿದೆ. ಈ ವರ್ಷದ ಕೆಮ್ತೂರು ತುಳುಕೂಟ ನಾಟಕಪರ್ಬವನ್ನು ಇತ್ತೀಚೆಗೆ ನಿಧನರಾದ ಹಿರಿಯ ರಂಗಕರ್ಮಿ, ಸಮಾಜರತ್ನ ಕರಂದಾಡಿ ಲೀಲಾಧರ್ ಶೆಟ್ಟಿ ಅವರಿಗೆ ಅರ್ಪಣೆ ಮಾಡಲಿದ್ದೇವೆ. 

ಕೆಮ್ತೂರು ನಾಟಕ ಪರ್ಬದಲ್ಲಿ ದೇಶದ ಯಾವುದೇ ಪ್ರದೇಶದ ಯೋಗ್ಯ ತುಳು ಹವ್ಯಾಸಿ ನಾಟಕ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವ ಕೆಮ್ತೂರು ತುಳುನಾಟಕ ಸ್ಪರ್ಧೆಗೆ ಒಟ್ಟು ಏಳು ವಿವಿಧ ತಂಡಗಳನ್ನು ಆಯ್ಕೆ ಮಾಡಿ ಏಳು ತುಳು ನಾಟಕಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ಜ.೭ರಂದು ಸಂಜೆ ೫.೩೦ಗಂಟೆಗೆ ಉಡುಪಿ ವಿಧಾನ ಸಭಾಕ್ಷೇತ್ರದ ಶಾಸಕ ಯಶ್‌ಪಾಲ್ ಎ.ಸುವರ್ಣ ಅವರು ಕೆಮ್ತೂರು ತುಳುನಾಟಕ ಪರ್ಬವನ್ನು ಉದ್ಘಾಟಿಸಲಿರುವರು. ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿಯ ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಪುಣೆ ತುಳುಕೂಟದ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮುಖ್ಯಅತಿಥಿಗಳಾಗಿ ಭಾಗವಹಿಸಲಿರುವರು.

ಜ.೭ರಂದು ನಾಟಕೋತ್ಸವದ ಪ್ರಥಮ ದಿನದಂದು ಸಂಜೆ ೬.೩೦ಕ್ಕೆ ಪುತ್ತೂರು ಗಯಾಪದ ಕಲಾವಿದೆರ್ ಉಬರ್ ತಂಡದ ಶಶಿಕುಮಾರ್ ಕೂಳೂರು ಮಂಜೇಶ್ವರ ರಚಿಸಿ,ನಿರ್ದೇಶಿಸಿರುವ ಮುರಳಿ ಈ ಪಿರ ಬರೊಲಿ ನಾಟಕ ಪ್ರದರ್ಶನಗೊಳ್ಳಲಿದೆ. ಜ.೮ರಂದು ಸಂಜೆ ೬.೩೦ಕ್ಕೆ ಮದ್ದಡ್ಕ ಶ್ರೀ ವಿಷ್ಣು ಕಲಾವಿದೆರ್ ತಂಡದ ಮೂಡುಬಿದ್ರಿ ದಿನೇಶ್ ಕರ್ಕೇರ ನಿರ್ದೇಶನದ ಬ್ರಹ್ಮದಂಡ ನಾಟಕ ಪ್ರದರ್ಶನಗೊಳ್ಳಲಿದೆ. ಜ.೯ರಂದು ಕುಡ್ಲ ಬಿ.ಸಿ.ರೋಡ್ ಓಂಶ್ರೀ ಕಲಾವಿದೆರ್ ತಂಡದ ಸುರೇಶ್ ಕುಲಾಲ್ ಬಿ.ಸಿ.ರೋಡ್ ನಿರ್ದೇಶನದ ಅಂದ್‌oಡ ಅಂದ್ ಪನ್ಲೆ ನಾಟಕ ಪ್ರದರ್ಶನಗೊಳ್ಳಲಿದೆ.

ಜ.೧೦ರಂದು ಸಂಜೆ ೬.೩೦ಕ್ಕೆ ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆಯ ಸಂತೋಷ್ ನಾಯಕ್ ಪಟ್ಲ ನಿರ್ದೇಶನದ ಒಂಜಿ ದಮ್ಮ ಪದ ನಾಟಕ ಪ್ರದರ್ಶನಗೊಳ್ಳಲಿದೆ. ಜ.೧೧ರಂದು ಸಂಜೆ ೬.೩೦ಕ್ಕೆ ಮಣಿಪಾಲ ಸಂಗಮ ಕಲಾವಿದೆರ್ ತಂಡದ ರೋಹಿತ್ ಎಸ್.ಬೈಕಾಡಿ ನಿರ್ದೇಶನದ ಮರಣ ಗೆಂದಿನಾಯೆ ನಾಟಕ ಪ್ರದರ್ಶನಗೊಳ್ಳಲಿದೆ. ಜ.೧೨ರಂದು ಸಂಜೆ ೬.೩೦ಕ್ಕೆ ಕೊಡವೂರು ನವಸುಮ ರಂಗಮAಚ ತಂಡದ ಬಾಲಕೃಷ್ಣ ಕೊಡವೂರು ನಿರ್ದೇಶನದ ಗಿಡ್ಡಿ ನಾಟಕ ಪ್ರದರ್ಶನಗೊಳ್ಳಲಿದೆ. ಜ.೧೩ರಂದು ಸಂಜೆ ೬.೩೦ಕ್ಕೆ ಮಲ್ಪೆ ಕರಾವಳಿ ಕಲಾವಿದೆರ್ ತಂಡದ ವಿಜಯ್ ಆರ್.ನಾಯಕ್ ಮಾರ್ಪಳ್ಳಿ ನಿರ್ದೇಶನದ ಎನ್ನುಲಾಯಿದಾಲ್ ನಾಟಕ ಪ್ರದರ್ಶನಗೊಳ್ಳಲಿದೆ.

ನಾಟಕ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ ರೂ. ೨೦,೦೦೦.೦೦, ರೂ. ೧೫,೦೦೦.೦೦, ರೂ. ೧೦,೦೦೦.೦೦ ನಗದು ಬಹುಮಾನ, ಅಲ್ಲದೇ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲಿ ಪ್ರಥಮ ರೂ. ೧,೦೦೦.೦೦ ಮತ್ತು ದ್ವಿತೀಯ, ತೃತೀಯ ಬಹುಮಾನಗಳನ್ನು ಫೆಬ್ರುವರಿ ತಿಂಗಳಲ್ಲಿ ನಡೆಯುವ ಬಹುಮಾನ ವಿತರಣಾ ಸಮಾರಂಭದಲ್ಲಿ ವಿತರಿಸಲಾಗುವುದು. ಸ್ಪರ್ಧೆಗೆ ಆಯ್ಕೆಯಾದ ರಾಜ್ಯದೊಳಗಿನ ತಂಡಗಳಿಗೆ ರೂ. ೫,೦೦೦.೦೦ ಹಾಗೂ ಹೊರರಾಜ್ಯದ ತಂಡಗಳಿಗೆ ರೂ. ೧೦,೦೦೦.೦೦ ಭತ್ಯೆಯೊಂದಿಗೆ ಊಟ ಉಪಚಾರ ಮತ್ತು ಉತ್ತಮ ಸೌಕರ್ಯಗಳನ್ನು ಉಡುಪಿ ತುಳುಕೂಟದ ವತಿಯಿಂದ ಒದಗಿಸಲಾಗುವುದು. ಉಡುಪಿ ತುಳುಕೂಟದ ಪ್ರತಿಷ್ಠಿತ ಹಾಗೂ ಯಶಸ್ವಿ ಕಾರ್ಯಕ್ರಮವಾದ ಕೆಮ್ತೂರು ತುಳುನಾಟಕ ಪರ್ಬವು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಎಂಜಿಎo ಕಾಲೇಜು ಉಡುಪಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಆಯೋಜನೆ ಮಾಡಲಾಗಿದೆ.

 
 
 
 
 
 
 
 
 
 
 

Leave a Reply