ಬ್ರಹ್ಮಾವರ: “ಹಸಿರು ನನ್ನೂರು – ನಡೂರು” ಕಾರ್ಯಕ್ರಮಕ್ಕೆ ಚಾಲನೆ

ಬ್ರಹ್ಮಾವರ: ಗಿಡಗಳ ರಕ್ಷಣೆ ಮತ್ತು ಪೋಷಣೆಯ ಮೂಲಕ ಹಸಿರೀಕರಣದ ಜವಾಬ್ದಾರಿಯನ್ನು ನಿರ್ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಹೇಳಿದ್ದಾರೆ.

ಕಾಡೂರು ಗ್ರಾಮ ಪಂಚಾಯತ್‍ನಲ್ಲಿ ಜರುಗಿದ ‘’ಹಸಿರು ನನ್ನೂರು – ನಡೂರು ‘’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸುಸ್ಥಿರ ಅಭಿವೃದ್ಧಿಗೆ ಅರಣ್ಯ ಸಂರಕ್ಷಣೆ ಮೂಲವಾಗಿದ್ದು ‘’ಹಸಿರು ನಡೂರು’’ ನಂತಹ ನವೀನ ಪರಿಕಲ್ಪನೆಯ ಮೂಲಕ ಯುವಕರನ್ನು ಈ ಕಾರ್ಯದಲ್ಲಿ ತೊಡಗಿಸುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹೆಚ್.ವಿ. ಇಬ್ರಾಹಿಂಪುರ ಮಾತನಾಡಿ ಗ್ರಾಮ ಪಂಚಾಯತ್‍ಗಳು ಹಸಿರೀಕರಣದ ಜವಾಬ್ದಾರಿಯನ್ನು ನಿರ್ವಹಿಸುವುದು ಕಡ್ಡಾಯ ಪ್ರಕಾರ್ಯವೂ ಆಗಿದೆ. ಈ ನಿಟ್ಟಿನಲ್ಲಿ ನಡೂರು ಗ್ರಾಮದಲ್ಲಿ ಹಮ್ಮಿಕೊಂಡ ಕಾರ್ಯ ಪ್ರಶಂಸನೀಯ ಎಂದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉತ್ತಮ ಸಮನ್ವಯದಿಂದ ಕಾರ್ಯನಿರ್ವಹಿಸಿದಲ್ಲಿ ಇಂತಹ ಹೊಸ ಕಲ್ಪನೆಯ ಕಾರ್ಯಗಳು ಸಾಧ್ಯ ಎಂದರು. 

ಕಾಡೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್.ಕೆ ಮಾತನಾಡಿ ವೈಯಕ್ತಿಕ ಜವಾಬ್ದಾರಿಯೊಂದಿಗೆ ಗಿಡ ನೆಡುವ, ರಕ್ಷಿಸುವ ಹಾಗೂ ಪ್ರತೀ ಹಂತವನ್ನು ತಾಂತ್ರಿಕವಾಗಿ ಮೇಲ್ವಿಚಾರಣೆ ಮಾಡುವ ಮತ್ತು ಪ್ರಶಂಸಾ ಪತ್ರವನ್ನು ನೀಡುವ ಪರಿಕಲ್ಪನೆ ಇದಾಗಿದ್ದು ಎಲ್ಲರ ಸಹಕಾರ ಅಗತ್ಯ ಎಂದರು.

ಕಾಡೂರು ಗ್ರಾಮಪಂಚಾಯತ್ ಅದ್ಯಕ್ಷ ಪಾಂಡುರಂಗ ಶೆಟ್ಟಿ ಮಾತನಾಡಿ ಪಂಚಾಯತ್ ವ್ಯಾಪ್ತಿಯ ಎಲ್ಲಾ ಸಂಘಟನೆಗಳು ಹಾಗೂ ಯುವಮಿತ್ರರ ಸಹಕಾರದಿಂದ ‘’ನನ್ನ ಗಿಡ – ನನ್ನ ಜವಾಬ್ದಾರಿ’’ ತತ್ವದಡಿ ಕಾರ್ಯಕ್ರಮ ಜರುಗುತ್ತಿದ್ದು ಎಲ್ಲರ ಪಾಲ್ಗೊಳ್ಳುವಿಕೆ ಉತ್ಸಾಹ ಹೆಚ್ಚಿಸಿದೆ ಎಂದು ತಿಳಿಸಿದರು.

ಪಂಚಾಯತ್ ಉಪಾಧ್ಯಕ್ಷೆ ಅಮಿತಾ, ಸದಸ್ಯರಾದ ವಿಜಯ ಮರಕಾಲ, ಗುಲಾಬಿ, ವೀಣಾ, ಗಿರೀಶ್‍ ರಾವ್, ಸತೀಶ್ ಕುಲಾಲ ,ಜಲಂಧರ್,ಗಿರಿಜಾ,ಅಮ್ಮಣಿ, ಪ್ರಭಾವತಿ, ಗ್ರಾಮದ ಸಂಘಟಣೆಗಳ ಪ್ರತಿನಿಧಿಗಳು, ಎಸ್.ಎಲ್.ಆರ್.ಎಂ ಕಾರ್ಯಕರ್ತರು, ಪಂಚಾಯತ್ ಸಿಬ್ಬಂದ್ದಿ ಹಾಗೂ ಗಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್. ಕೆ ಕಾರ್ಯಕ್ರಮ ನಿರ್ವಹಿಸಿದರು.

   

 
 
 
 
 
 
 
 
 
 
 

Leave a Reply