ನಮ್ಮ ಭೂಮಿ ರಾಯಭಾರಿ ರಾಮಾಂಜಿಯವರಿಗೆ “ವರ್ಷದ ವ್ಯಕ್ತಿ 2022” ಪ್ರಶಸ್ತಿ

ಮಂಗಳೂರು:ನಗರದ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಆಶ್ರಯದಲ್ಲಿ ಗಾಂಧಿ ಜಯಂತಿ ಆಚರಣೆಯು ಮಂಗಳೂರಿನ ಬಾವುಟಗುಡ್ಡೆ ಠಾಗೋರ್ ಪಾರ್ಕ್ ನಲ್ಲಿ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ “ವರ್ಷದ ವ್ಯಕ್ತಿ 2022” ಪ್ರಶಸ್ತಿಯನ್ನು ನಮ್ಮ ಭೂಮಿ ರಾಯಭಾರಿ ರಾಮಾಂಜಿಯವರಿಗೆ ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ ಖ್ಯಾತ ವೈದ್ಯರೂ, ನಾಡಿನ ಸಾಮಾಜಿಕ ಚಿಂತಕರೂ ಆದ ಡಾ.ಬಿ.ಕಕ್ಕಿಲ್ಲಾಯರು ಮಾತಾಡುತ್ತಾ, ಬಹುತ್ವ ಪ್ರಧಾನವಾದ ಭಾರತೀಯ ಪರಂಪರೆಯೆಂದರೆ ,ಅದನ್ನು ಗಾಂಧಿ ಪರಂಪರೆಯೆಂದು ಕರೆಯಬಹುದು. ಸ್ವಾತಂತ್ರ್ಯ ಸಮರದ ಸಮಯದಲ್ಲಿ ಗಾಂಧೀಜಿಯವರು ಮಂಗಳೂರಿಗೆ 3 ಸಲ ಬಂದಿದ್ದರು. ಅವರಿಂದ ಪ್ರೇರಿತರಾದ ಕಾರ್ನಾಡ್ ಸದಾಶಿವರಾವ್ ಅವರು, ಕುದ್ಮಲ್ ರಂಗರಾಯರು,ಈ ಮಣ್ಣಿನಲ್ಲಿ ಅಹಿಂಸಾ ಬೀಜವನ್ನು ಬಿತ್ತಿ ಬೆಳೆದಿದ್ದರು.

ಸರ್ವಜನಾಂಗಗಳ ಸಮನ್ವಯದಿಂದ ಮಂಗಳೂರಿನಲ್ಲಿ ಸ್ವಾತಂತ್ರ್ಯದ ಕಹಳೆಯನ್ನು ಊದಿದರು. ಆಗ ಗುಲಾಮಗಿರಿಯಿಂದ ಮುಕ್ತರಾಗುವ ಏಕ ಮಾತ್ರ ಉದ್ದೇಶದಿಂದ ಮಂಗಳೂರಿನಲ್ಲಿ ಸಂಘಟಿತರಾದುದು ಇತಿಹಾಸ.

ಇಲ್ಲಿನ‌ ಠಾಗೋರ್ ಪಾರ್ಕ್ ಜನ ಸ್ನೇಹಿ ಸ್ಮಾರಕಗಳು ಸ್ವಾತಂತ್ರ್ಯ ಚಳುವಳಿಯ ಉದ್ದೇಶಕ್ಕಾಗಿಯೇ ನಿರ್ಮಾಣವಾಗಿರಬಹುದು ಎಂದು ಅಭಿಪ್ರಾಯ ಪಟ್ಟರು.

ರಾಜ್ಯ ರಾಜ್ಯಗಳಲ್ಲಿ ಸುತ್ತಾಡಿ ಜನ ಸಾಮಾನ್ಯರ ದುಃಖ ನೋವುಗಳನ್ನು ಅರ್ಥ ಮಾಡಿಕೊಂಡು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ ಬಂದಿರುವ ರಾಮಾಂಜಿಯವರು ನಾಡಿನ ಜನಮಾನಸದಲ್ಲಿ ಸ್ಥಾಯಿಯಾಗಿ ಉಳಿದವರು.
ಅಂಡಮಾನ್ ನಿಕೋಬಾರ್ ಮುಂತಾದ ದ್ವೀಪಗಳಲ್ಲಿ ಸಂಚರಿಸಿ ದಮನಿತರ ನೋವನ್ನು ಅರ್ಥ ಮಾಡಿಕೊಂಡವರು.ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಇವರು ವಿಶ್ವವಿದ್ಯಾಲಯ ಕಂಡ ಅಪೂರ್ವ ಪ್ರತಿಭೆ‌. ಅಧ್ಯಯನ ಮಾಡುತ್ತಲೇ ಸಮಾಜ ಸೇವೆಯಲ್ಲಿ ತೊಡಗಿಕೊಂಡವರು.ಇವರನ್ನು ವರ್ಷದ ವ್ಯಕ್ತಿಯನ್ನಾಗಿ ಆಯ್ಕೆ ಮಾಡಿರುವುದು ಪ್ತತಿಷ್ಠಾನಕ್ಕೂ ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ರಾಮಾಂಜಿಯವರು ಎಲ್ಲಾ ಮಿತಿಗಳನ್ನು ಮೀರಿ ಮನುಷ್ಯ ಸಮಾಜದ ಬಹು ದೊಡ್ಡ ಸಾಧಕರಾಗಿ ಮೂಡಿಬರಲಿ ಎನ್ನುವುದು ಪ್ರತಿಷ್ಠಾನದ ಹಾರೈಕೆ.

ಗಾಂಧಿ ಪುರಸ್ಕಾರವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿ ಮಾತನಾಡಿದ ರಾಮಾಂಜಿಯವರು, ಎರಡು ಜಿಲ್ಲೆಯ ಜನತೆ ನನಗೆ ಬಹಳಷ್ಟು ಪ್ರೀತಿಯನ್ನು ಹಂಚಿದ್ದಾರೆ ಅವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸುತ್ತಾ.. ಯುವಕರ ಮುಂದೆ ಇವತ್ತು ಸಾಕಷ್ಟು ಸವಾಲುಗಳಿಗೆ ಆ ಎಲ್ಲಾ ಸವಾಲುಗಳಿಗೆ ಗಾಂಧಿ ವಿಚಾರಧಾರೆಗಳೇ ಪರಿಹಾರವನ್ನು ಸೂಚಿಸುತ್ತವೆ. ಆ ನಿಟ್ಟಿನಲ್ಲಿ ಗಾಂಧಿ ಚಿಂತನೆಯನ್ನು ಯುವ ಸಮುದಾಯದತ್ತ ಕೊಂಡೊಯ್ಯುವ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡುತ್ತೇನೆ ಎಂದು ಪ್ರತಿಜ್ಞೆಯನ್ನು ಮಾಡಿದರು.

ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷರುಗಳಾದ ಪ್ರಭಾಕರ್ ಶ್ರೀಯಾನ್ ಮತ್ತು ಹಾಜಿ ಇಬ್ರಾಹಿಂ ಕೋಡಿಜಾಲ್ ಇವರುಗಳು ಸಂದರ್ಭೋಚಿತವಾಗಿ ಮಾತಾಡಿದರು.

ರಾಮಾಂಜಿಯವರ ಮಾರ್ಗದರ್ಶಕರು ಹಾಗೂ ಅಂತಾರಾಷ್ಟ್ರೀಯ ದುಡಿಯುವ ಮಕ್ಕಳ ಹೋರಾಟಗಾರರು ಆಗಿರುವ ಎಂ.ಎಂ. ಗಣಪತಿಯವರು ರಾಮಾಂಜಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಅವರನ್ನು ಸನ್ಮಾನಿಸಿದ ಗಾಂಧಿ ಪ್ರತಿಷ್ಠಾನಕ್ಕೆ ವಂದನೆಗಳನ್ನು ಸಲ್ಲಿಸಿದರು.ಅವರ ವಿದ್ಯಾ ಗುರು ವಸಂತಿ.ಎಸ್. ‌ರಾವ್ ಅವರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕಿ ಶಮಾ ಅವರು ಅಭಿನಂದನಾ ಪತ್ರವನ್ನು ವಾಚಿಸಿದರು.ಡಾ.ಇಸ್ಮಾಯಿಲ್ ಅವರು ಪ್ರಾಸ್ತಾವಿಕ ಮಾತುಗಳನ್ನು ಹೇಳಿ ಎಲ್ಲರನ್ನು ಸ್ವಾಗತಿಸಿದರು.ಪ್ರೇಮ್ ಚಂದ್ ವಂದಿಸಿದರು. ಕಲ್ಲೂರು ನಾಗೇಶ್ ಅವರು ಕಾರ್ಯ ಕ್ರಮವನ್ನು ನಿರೂಪಿಸಿದರು.

ಬಲ್ಮಠದ ಮಹಿಳಾ ಸರಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಶೈಲಾ ಅವರ ಮಾರ್ಗ
ದರ್ಶನ ದಲ್ಲಿ ಅವರ ವಿದ್ಯಾರ್ಥಿಗಳು ಮತ್ತು ರಾಮಕೃಷ್ಣ ಆಶ್ರಮದಲ್ಲಿದ್ದು ನಗರದ ಕಾಸಿಯಾ ಪ್ರೌಢಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಗೂ ಗಾಂಧಿ ಭಜನೆಗಳನ್ನು ಹಾಡಿದರು.

 
 
 
 
 
 
 
 
 
 
 

Leave a Reply