ನಾಡೋಜ ಕೆ. ಪಿ ರಾವ್ ಅವರಿಗೆ ಅಭಿನಂದನಾ ಸಮಾರಂಭ 

ನಾಡಿನ ಹಿರಿಯ ವಿದ್ವಾಂಸ ಕಂಪ್ಯೂಟರ್ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿರುವ ನಾಡೋಜ ಪ್ರೊ ಕೆ. ಪಿ ರಾವ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಕಾರದೊಂದಿಗೆ ನಾಡೋಜ ಕೆ. ಪಿ . ರಾವ್ ಅಭಿನಂದನಾ ಸಮಿತಿ ಉಡುಪಿಯು ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಿದೆ .

ಉಡುಪಿಯ ವಿವಿಧ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಇದೇ ಬರುವ ಆಗಸ್ಟ್ 6ರಂದು ಈ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನಾಡೋಜ ಕೆ. ಪಿ. ರಾವ್ ಅವರ ಕಿರು ಪರಿಚಯ

ಕಿನ್ನಿಕಂಬಳ ಪದ್ಮನಾಭ ರಾವ್ (ಫೆಬ್ರವರಿ ೨೯, ೧೯೪೦), ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ಧರು. ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆಯ ಮೂಲ ವಿನ್ಯಾಸವನ್ನು (‘ನುಡಿ’ ವಿನ್ಯಾಸ) ರೂಪಿಸಿದ್ದು ಶ್ರೀ ಕೆ. ಪಿ. ರಾವ್ ಅವರ ಸಾಧನೆ.

ಜನನ ಮತ್ತು ವಿದ್ಯಾಭ್ಯಾಸ : ಜನನ ೧೯೪೦ರ ಫೆಬ್ರುವರಿ ೨೯ರಂದು, ಮಂಗಳೂರು ಬಳಿಯ ಕಿನ್ನಿಕಂಬಳದಲ್ಲಿ. ಕಿನ್ನಿಕಂಬಳದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಮಂಗಳೂರಿನಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗ. ೧೯೫೯ರಲ್ಲಿ ಮಂಗಳೂರಿನ ಅಲೋಶಿಯಸ್ ಕಾಲೇಜಿನಿಂದ ಬಿಎಸ್ಸಿ ಪದವಿ.

ಕುಟುಂಬ : ಪತ್ನಿ ಶ್ರೀಮತಿ ನಿರ್ಮಲ ಉಡುಪಿಯವರು, ವಿವಾಹವಾದದ್ದು ೧೯೬೪ರಲ್ಲಿ. ಈ ದಂಪತಿಗೆ ಇಬ್ಬರು ಮಕ್ಕಳು ಹಾಗೂ ನಾಲ್ವರು ಮೊಮ್ಮಕ್ಕಳು.

ಉದ್ಯೋಗ : ಮೊದಲಿಗೆ ಮುಂಬಯಿಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್(ಟಿಐಎಫ್‌ಆರ್)ನ ಆಣುಶಕ್ತಿ ವಿಭಾಗದಲ್ಲಿ ಸಂಶೋಧಕರು. ೧೯೭೦ರ ದಶಕದಲ್ಲಿ ಟಾಟಾ ಪ್ರೆಸ್ ಸೇರಿದಾಗ ಅಕ್ಷರಗಳೊಡನೆ ಒಡನಾಟದ ಪ್ರಾರಂಭ. ಮುಂದೆ ಮಾನೋಟೈಪ್ ಸಂಸ್ಥೆಯ ನಿರ್ದೇಶಕರಾಗಿ, ಕ್ವಾರ್ಕ್ ಎಕ್ಸ್‌ಪ್ರೆಸ್ -ಅಡೋಬಿ ಸಿಸ್ಟಂಸ್ ಮುಂತಾದ ಸಂಸ್ಥೆಗಳ ಸಲಹೆಗಾರರಾಗಿ, ಮಣಿಪಾಲ ಸಮೂಹದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಣೆ.

ಸಾಧನೆಗಳು: ಸಿಂಧೂ ಲಿಪಿಯನ್ನು ಕಂಪ್ಯೂಟರ್ ಬಳಸಿ ಮುದ್ರಿಸುವ ಪ್ರಯತ್ನದಲ್ಲಿ ಮಹತ್ವದ ಪಾತ್ರ. ಉಚ್ಚಾರಣಾತ್ಮಕ ತರ್ಕ ಬಳಸಿದ ಮೊದಲ ಕೀಬೋರ್ಡ್ ವಿನ್ಯಾಸದ ಸೃಷ್ಟಿ. ಇದೇ ತರ್ಕ ಬಳಸಿ ಕನ್ನಡದ ಕೀಬೋರ್ಡ್ ವಿನ್ಯಾಸ ತಯಾರಿಕೆ. ಕನ್ನಡದ ಪದಸಂಸ್ಕಾರಕ ತಂತ್ರಾಂಶ ‘ಸೇಡಿಯಾಪು’ ರಚಿಸಿ ಮುಕ್ತ ಬಳಕೆಗೆ ನೀಡಿದ ಹಿರಿಮೆ.

ಪ್ರಶಸ್ತಿ ಗೌರವಗಳು : ಕನ್ನಡ ಕೀಲಿಮಣೆ ವಿನ್ಯಾಸಕ್ಕೆ ‘ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ವಿನ್ಯಾಸ’ವೆಂಬ ಮಾನ್ಯತೆ. ತುಳು ಅಕಾಡೆಮಿ ಸೇರಿದಂತೆ ಹಲವು ಸಂಘಸಂಸ್ಥೆಗಳಿಂದ ಗೌರವ ಸಮರ್ಪಣೆ. ಆಳ್ವಾಸ್ ನುಡಿಸಿರಿ ೨೦೦೯ರಲ್ಲಿ ಸನ್ಮಾನ. ೨೦೧೩ ರಲ್ಲಿ ವಿಶ್ವಕರ್ಮ ಪ್ರಶಸ್ತಿ. ೨೦೧೩ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ.

೨೦೧೩ ರ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನ ಉದಯಭಾನು ಕಲಾಸಂಘದಿಂದ ಪರಿಚಯಾತ್ಮಕ ಕೃತಿ “ಕಂಪ್ಯೂಟರ್ ಕನ್ನಡ ಕೆ. ಪಿ. ರಾವ್” ಪ್ರಕಟಣೆ. ೨೦೧೩ ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ. ೨೦೨೧ ರಲ್ಲಿ ‘ಕಾರಂತ ಬಾಲವನ ಪ್ರಶಸ್ತಿ’

ಕೃತಿಗಳು: ರಾವ್ ಅವರು ‘ವರ್ಣಕ’ ಎಂಬ ಕಾದಂಬರಿಯನ್ನು ಬರೆದಿದ್ದಾರೆ. ೨೦೨೧ರಲ್ಲಿ ಅಂಕಿತ ಪ್ರಕಾಶನದಿಂದ ಪ್ರಕಟಗೊಂಡಿದೆ.

 
 
 
 
 
 
 
 
 
 
 

Leave a Reply