ಹೀಗಿದೆ ಗೇರು ಬೆಳೆಯಲ್ಲಿ ಎಲೆ ತಿನ್ನುವ ದುಂಬಿಗಳ ನಿರ್ವಹಣೆ

ಉಡುಪಿ ಸೇರಿದಂತೆ ಹಲವು ಭಾಗಗಳಲ್ಲಿ ಗೇರು ಬೆಳೆಯಲ್ಲಿ ಎಲೆ ತಿನ್ನುವ ದುಂಬಿಗಳು ಕಾಣಿಸಿಕೊಳ್ಳುತ್ತಿದ್ದು, ಸೂಕ್ತ ಹತೋಟಿ ಕ್ರಮ ಕೈಗೊಳ್ಳುವುದು ಉತ್ತಮ.

ಈ ದುಂಬಿಗಳು ಕ್ರೈಸೋಮೆಲ್ಲಿಡೇ ಜಾತಿಗೆ ಸೇರಿದ್ದು, ವೈಜ್ಞಾನಿಕವಾಗಿ ಮೋನೊಲಿಪ್ಟಾ ಲೊಂಗಿಟಾರ್ಸಸ್ ಎಂದು ಕರೆಯಲಾಗುತ್ತದೆ. ಪಶ್ಚಿಮ ಕರಾವಳಿ ಭಾಗದಲ್ಲಿ ಕಂಡುಬರುವ ಪ್ರಮುಖ ಕೀಟ ಇದಾಗಿದ್ದು, ಕೆಂಪು ಬಣ್ಣದಿಂದ ಕೂಡಿರುತ್ತದೆ.

ಈ ದುಂಬಿಗಳು ಅಧಿಕ ಪ್ರಮಾಣದಲ್ಲಿ ಗುಂಪು ಗುಂಪಾಗಿ ಕಂಡುಬಂದು ಎಳೆಯ ಗಿಡಗಳು, ಮರದ ಚಿಗುರು ಹಾಗೂ ಸಸ್ಯಾಗಾರದ ಗಿಡಗಳಲ್ಲಿ ಅಧಿಕ ಹಾನಿ ಮಾಡುತ್ತವೆ. ಮುಂಗಾರಿನ ಸಮಯದಲ್ಲಿ (ಜೂನ್-ಅಗಸ್ಟ್) ಈ ಕೀಟದ ಬಾಧೆ ಅಧಿಕವಾಗಿದ್ದು, ಚಿಗುರು ಎಲೆ ಹಾಗೂ ಕಾಂಡಗಳಿಗೆ ಹಾನಿ ಮಾಡುತ್ತವೆ.

ಹಾನಿಯ ಲಕ್ಷಣ

ದುಂಬಿಗಳು ಚಿಗುರೆಲೆಗಳ ತಳಭಾಗದಿಂದ ಪತ್ರ ಹರಿತ್ತನ್ನು ಕೆರೆದು ತಿನ್ನುವುದರಿಂದ ಎಲೆಗಳು ಅಸ್ಥಿಪಂಜರದಂತಾಗಿ ಒಣಗಲು ಶುರುವಾಗುತ್ತದೆ. ಇದೇ ರೀತಿ ಕಾಂಡದ ಮೃದು ಭಾಗವನ್ನು ಕೆರೆದು ತಿನ್ನುವುದರಿಂದ ಕಾಂಡದ ತುದಿಯೂ ಸಂಪೂರ್ಣ ಒಣಗಿದಂತಾಗುತ್ತದೆ. ಈ ದುಂಬಿಗಳ ಜೊತೆಗೆ ಮೈಲ್ಲೋಸೆರಸ್ ಜಾತಿಗೆ ಸೇರಿದ ಜೀರುಂಡೆಗಳು ಚಿಗುರೆಲೆ ಹಾಗೂ ಚಿಕ್ಕ ಗಿಡಗಳಿಗೆ ಅಧಿಕ ಹಾನಿಯನ್ನುಂಟುಮಾಡುತ್ತವೆ.

ಹತೋಟಿ ಕ್ರಮ

ಕೀಟ ಬಾಧೆ ತಡೆಯಲು ಮಾನೋಕ್ರೊಟೋಫಾಸ್ ಕೀಟನಾಶಕವನ್ನು 1.5 ಮಿ.ಲೀ. ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿ- ಡಾ. ಸಚಿನ್ ಯು. ಎಸ್, ವಿಜ್ಞಾನಿ (ಸಸ್ಯ ಸಂರಕ್ಷಣೆ) (8095313797) ಅಥವಾ ಡಾ. ಧನಂಜಯ ಬಿ., ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply