ಪುತ್ತಿಗೆ ಶ್ರೀ ಸುಶ್ರೀಂದ್ರತೀರ್ಥ ಶ್ರೀಗಳಿಂದ ಮೂರ್ತಿ ಸ್ಪರ್ಶಿಸಿ ಕೃಷ್ಣಪೂಜೆ

ಉಡುಪಿ: ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಕೃಷ್ಣ ಮೂರ್ತಿಯನ್ನು ಸ್ಪರ್ಶಿಸಿ ಪೂಜೆ ನಡೆಸಿದ್ದಾರೆ. ಆಚಾರ್ಯ ಮಧ್ವ ಪ್ರತಿಷ್ಠಾಪಿತ ಉಡುಪಿ ಕೃಷ್ಣ ಮೂರ್ತಿಗೆ ಯತಿಗಳಿಂದಲೇ ಪೂಜೆ ನಡೆಸುವುದು ಸಂಪ್ರದಾಯ. ಅಷ್ಟಮಠಾಧೀಶರ ವಿನ: ಅನ್ಯ ಮಠಾಧೀಶರಾಗಲೀ, ಅರ್ಚಕರಾಗಲೀ ಕೃಷ್ಣಪೂಜೆ ನಡೆಸುವಂತಿಲ್ಲ.

ಪರ್ಯಾಯ ಪೀಠಸ್ಥ ಯತಿ ಮಹಾಪೂಜೆ ಮತ್ತು ರಾತ್ರಿಯ ಚಾಮರ ಪೂಜೆ ನಡೆಸಲೇಬೇಕಾದುದು ಮಧ್ವಪ್ರಣೀತ ನಿಯಮ. ಗುರುಗಳಿಂದ ಅಥವಾ ದ್ವಂದ್ವಮಠದ ಯತಿಗಳಿಂದ ದೀಕ್ಷೆ ಪಡೆದ ಅಷ್ಟಮಠದ ಯತಿ ಪ್ರಥಮ ಚಾತುರ್ಮಾಸ್ಯದ ಬಳಿಕ ದೀಕ್ಷೆಯಿತ್ತ ಗುರುಗಳ ಮಾರ್ಗದರ್ಶನದಲ್ಲಿ ಮೂರ್ತಿಯನ್ನು ಸ್ಪರ್ಷಿಸಿ ಪೂಜಾಧಿಕಾರ ಪಡೆಯುತ್ತಾರೆ.

ಕಳೆದ ಕೆಲವು ದಿನಗಳ ಹಿಂದೆ ಪುತ್ತಿಗೆ ಮಠದ  ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರಿಂದ ಕೃಷ್ಣ ಮೂರ್ತಿಯನ್ನು ಮುಟ್ಟಿಸಿ, ಪೂಜಾಧಿಕಾರ ನೀಡಿದ್ದರು ಎನ್ನಲಾಗಿದ್ದು, ಭಾನುವಾರ ಕಿರಿಯ ಯತಿಗಳೇ ಪೂಜೆ ನಡೆಸಿರುವುದು ಬಹಿರಂಗವಾಗಿದೆ.

ಆ ಮೂಲಕ ಕಳೆದ ಕೆಲವು ದಿನಗಳಿಂದ ಇದ್ದ ಕೃಷ್ಣ ಪೂಜಾಧಿಕಾರದ ಬಗೆಗಿನ ಸಂದೇಹಗಳಿಗೆ ತೆರೆ ಬಿದ್ದಂತಾಗಿದೆ.  ಕಳೆದ ಜ. 18ರಂದು ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ಅಕ್ಷಯ ಪಾತ್ರೆ ಪ್ರದಾನಿಸಿ, ಸರ್ವಜ್ಞ ಪೀಠದಲ್ಲಿ ಅದಮಾರು ಹಿರಿಯ ಶ್ರೀಗಳು ಕುಳ್ಳಿಸಿರುವುದು ಹಾಗೂ ದ್ವಂದ್ವ ಮಠಾಧೀಶ ನಿರ್ಗಮನ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಭಾವಿ ಪರ್ಯಾಯ ಪುತ್ತಿಗೆ ಶ್ರೀಗಳಿಗೆ ಅಕ್ಷಯ ಪಾತ್ರೆ ಹಸ್ತಾಂತರದ ಕರ್ತವ್ಯದಿಂದ ವಿಮುಖರಾಗಿರುವುದು ಉಲ್ಲೇಖನೀಯ.

ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಾಗರೋಲ್ಲಂಘನ ಮಾಡಿರುವ ಕಾರಣದಿಂದಾಗಿ ಕೃಷ್ಣ ಮೂರ್ತಿಯನ್ನು ಸ್ಪರ್ಶಿಸಿ ಪೂಜೆ ನಡೆಸುವುದನ್ನು ಅಷ್ಟ ಮಠಗಳ ಇತರ ಯತಿಗಳು ವಿರೋಧಿಸಿದ್ದು, ಕಳೆದ ಜ. 18ರಂದು ಪರ್ಯಾಯ ಸರ್ವಜ್ಞ ಪೀಠ ವೇರಿದ ಬಳಿಕ ತೀರಾ ಇತ್ತೀಚಿನ ದಿನಗಳ ವರೆಗೂ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಶ್ರೀಕೃಷ್ಣ ಮೂರ್ತಿಗೆ ನೈರ್ಮಾಲ್ಯ ವಿಸರ್ಜನೆ, ಅಭಿಷೇಕ, ಅಲಂಕಾರ ಪೂಜೆ ನಡೆಸಿದ್ದರು.

 

 
 
 
 
 
 
 
 
 
 
 

Leave a Reply