ನಂದಳಿಕೆ ಗೋಳಿಕಟ್ಟೆ ಶಾಸನದ ಮರು ಅಧ್ಯಯನ

ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಗೋಳಿಕಟ್ಟೆಯ ಶಾಸನವನ್ನು ಶಿರ್ವದ ಎಂ.ಎಸ್.ಆರ್.ಎಸ್ ಕಾಲೇಜಿನ ಪುರಾತತ್ತ್ವ ವಿದ್ಯಾರ್ಥಿಗಳು ತಮ್ಮ ಪುರಾತತ್ತ್ವ ಉಪನ್ಯಾಸಕರದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇವರ ಮಾರ್ಗದರ್ಶನದಲ್ಲಿ ಮರು ಅಧ್ಯಯನಕ್ಕೆ ಒಳಪಡಿಸಿದ್ದು ಶಾಸನದ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಕಣ (ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು ವರ್ತುಲಾಕಾರದಲ್ಲಿದ್ದು ಮೇಲ್ಭಾಗದಲ್ಲಿ ಸೂರ್ಯ-ಚಂದ್ರರ ಕೆತ್ತನೆಯನ್ನು ನೋಡಬಹುದು. 20 ನೇ ಶತಮಾನದ 8 ಸಾಲಿನ ಕನ್ನಡ ಲಿಪಿಯನ್ನು ಒಳಗೊಂಡ ಈ ಶಾಸನವು 167 ಸೆಂ.ಮೀ ಉದ್ದ ಮತ್ತು 88 ಸೆಂ.ಮೀ ಸುತ್ತಳತೆಯನ್ನು ಹೊಂದಿದೆ.

‘1905 ನೆ ಮಾಂಣ ಒಟ್ಟು ಅಂತಯ್ಯ ಶೆಟ್ರು’ ಎಂಬ ಉಲ್ಲೇಖವನ್ನು ಹೊಂದಿರುವ ಈ ಶಾಸನದಲ್ಲಿ “ಮಾಂಣ ಒಟ್ಟು” ಎಂಬ ಪ್ರದೇಶದ‌‌ ಉಲ್ಲೇಖವಿದ್ದು ಪ್ರಸ್ತುತ ಈ ಪ್ರದೇಶವು “ಮಾನೊಟ್ಟು” ಎಂದು ಕರೆಯಲ್ಪಡುತ್ತಿದ್ದು ಶಾಸನ ದೊರೆತ ಸ್ಥಳದಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿದೆ.

ಈ ಶಾಸನವನ್ನು ಈ ಮೊದಲು ಅಧ್ಯಯನ ಮಾಡಿದ ವಿದ್ವಾಂಸರು ‘ಮಾಂಣ ಒಟ್ಟು’ ಇರುವುದನ್ನು ಮರಣ ಮತ್ತು ಬೆಣಿಯ ಎಂದು, ‘ಅಂತಯ್ಯ’ ಇರುವುದನ್ನು ಅಂಕಯ್ಯ ಎಂದು ಓದಿ, ಇದನ್ನು ‘ಅಂಕಯ್ಯ ಶೆಟ್ಟಿಯವರ ಮರಣ ಶಾಸನ’ವೆಂದು ಹೇಳಿರುತ್ತಾರೆ.

ಆದರೆ ಕ್ಷೇತ್ರಕಾರ್ಯ ಶೋಧನೆಯಲ್ಲಿ ಶಾಸನವಿರುವ ಜಾಗದಲ್ಲಿ ದೊಡ್ಡ ಗೋಳಿಯ ಮರವಿದ್ದು ಇದಕ್ಕೆ ಇಲ್ಲಿನ‌ ಪ್ರಸಿದ್ಧ ವ್ಯಕ್ತಿಯಾದ ಅಂತಯ್ಯ ಶೆಟ್ರು ಕಟ್ಟೆಯನ್ನು ಕಟ್ಟಿಸಿದ‌ರು ಎಂಬುದನ್ನು ಸ್ಥಳೀಯರು‌ ಈಗಲೂ ಹೇಳುತ್ತಾರೆ. ಪ್ರಸ್ತುತ ಗೋಳಿಮರದ ಸುತ್ತಲೂ ಈ ಕಟ್ಟೆಯ ಕುರುಹುಗಳನ್ನು ಕಾಣಬಹುದು.

ಹಾಗಾಗಿ ಈ ಶಾಸನವು ಅಂತಯ್ಯ ಶೆಟ್ರ ಮರಣ ಶಾಸನವಾಗಿರದೆ ಗೋಳಿಮರಕ್ಕೆ ಕಟ್ಟೆಯನ್ನು ಕಟ್ಟಿಸಿದ ಸ್ಮರಣಾರ್ಥಕವಾಗಿ ಅವರ ಹೆಸರಿನಲ್ಲಿ ಹಾಕಿಸಿರುವಂತಹ ಶಾಸನವಾಗಿರುತ್ತದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.

 
 
 
 
 
 
 
 
 
 
 

Leave a Reply