ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 2,14,650 ಮತದಾರರಿದ್ದಾರೆ~ ಚುನಾವಣಾಧಿಕಾರಿ ಸೀತಾ ಎಂ. ಸಿ

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 226 ಮತಗಟ್ಟೆಗಳಿದ್ದು 1,03,704 ಪುರುಷ ಮತದಾರರು 1,10,945 ಮಹಿಳಾ ಮತದಾರರು ಹಾಗೂ ಒಬ್ಬರು ತೃತೀಯ ಲಿಂಗಿ ಮತದಾರರು ಸೇರಿ 2,14,650 ಮತದಾರರಿದ್ದಾರೆ ಎಂದು ಉಡುಪಿ ಕ್ಷೇತ್ರದ ಚುನಾವಣಾ ಅಧಿಕಾರಿ ಸೀತಾ ಎಂ. ಸಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು. 
 
 ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಯಾವುದೇ ಸಭೆ ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳು ರಾಜಕೀಯ ಸಭೆ,  ಪ್ರಚಾರ ಸಭೆ,  ಇತ್ಯಾದಿಗೆ ಅನುಮತಿ ಪಡೆದುಕೊಳ್ಳಬೇಕು ಎಂದರು.  ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ವಿಜಯ ಅವರನ್ನು ನೋಡಲು ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. 
 
 ಚುನಾವಣಾ ಅಕ್ರಮ ತಡೆಗಟ್ಟಲು ಸಾರ್ವಜನಿಕರು ದೂರು ನೀಡಲು ಸಿ~ವಿಜಿಲ್ ಆಪ್  ಚಾಲನೆಯಲ್ಲಿ ಇರುತ್ತದೆ.  ಅನಾಮದೇಯ ದೂರುಗಳಿಗೂ ಇದರಲ್ಲಿ ಅವಕಾಶವಿದೆ.  ನಮ್ಮ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತದೆ ಎಂದರು.  24 ತಾಸು ನಿರ್ವಹಣೆ ಮಾಡಲು ಕಂಟ್ರೋಲ್ ರೂಮ್ ತೆರೆಯಲಾಗಿದೆ 0820-2001090 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಚುನಾವಣೆ ನೀತಿ ಸಹಿತ ಉಲ್ಲಂಘನೆ ಕುರಿತು ದೂರು ನೀಡಬಹುದು ಎಂದರು. 
 
80 ವರ್ಷ ಮೇಲ್ಪಟ್ಟವರಿಗೆ, ವಿಕಲಾಂಗರಿಗೆ ಹಾಗೂ ಕೋವಿಡ್ ಪಾಸಿಟಿವ್ ಮತದಾರರಿಗೆ ಅಂಚೆಯ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯ ವರ್ಗಗಳಿಗೆ ಅಂಚೆ ಮತ ಪತ್ರ ಸೌಲಭ್ಯ ಒದಗಿಸುವ ಸಂಬಂಧ ನೂಡಲ್ ಅಧಿಕಾರಿಯನ್ನಾಗಿ ತಹಶೀಲ್ದಾರರುಗ್ರೇಡ್ -2 ಉಡುಪಿ ಅವರನ್ನು ನೇಮಕ ಮಾಡಲಾಗಿದೆ ಎಂದರು. 
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೆ 3437 ಯುವ ಮತದಾರರು ನೋಂದಣಿ ಮಾಡಿಸಿ ಕೊಂಡಿದ್ದಾರೆ. 1805 ಮಂದಿ ಅಂಗವಿಕಲ ಮತದಾರರು, ಹಾಗೂ 7,827 ಮಂದಿ, 80 ವರ್ಷ ಮೇಲ್ಪಟ್ಟ ಮತದಾರರಾಗಿದ್ದಾರೆ.  10495 ಸ್ಟಿಕ್ಕರ್ಸ್ ಗಳನ್ನು ಮುದ್ರಣ ಗೊಳಿಸಲಾಗಿದ್ದು 6897 ಎಲೆಕ್ಟ್ರಾನಿಕ್ ನೋಂದಣಿ ಮಾಡಿಸಲಾಗಿದೆ. 
ಕೋಲ, ಜಾತ್ರೆ, ಉತ್ಸವ ನಡೆಸುವವರಿಗೆ ಚುನಾವಣಾ ಪ್ರಕ್ರಿಯೆಗಳಿಂದ ತೊಂದರೆಯಾಗಬಾರದು.  ಸಂಘಟಕರು ಹಿಂದಿನಂತೆ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆಯ ಮೂಲಕವಾಗಿ ಮೈಕ್ ಪರವಾನಿಗೆ ಪಡೆದು ಕಾರ್ಯಕ್ರಮಗಳನ್ನು ಆಯೋಜಿಸಬಹುದು.  ಆದರೆ ಇಂತಹ ಕಾರ್ಯಕ್ರಮಗಳಲ್ಲಿ ರಾಜಕೀಯ ಚಟುವಟಿಕೆ ನಡೆಯಬಾರದು.  ಯಕ್ಷಗಾನ ಮೆಹಂದಿ ಸಮಾರಂಭಗಳು, ಸಂಜೆ6.00 ರಿಂದ 10ರೊಳಗೆ ನಡೆಯಬೇಕು.  ಬಳಿಕ ಮೈಕ್ ಅಳವಡಿಸುವಂತಿಲ್ಲ ಎಂದರು.  
 
 
 
 
 
 
 
 
 
 
 
 
 
 

Leave a Reply