ಜಗದ ಜನರ ಭವಸಾಗರದ ಬವಣೆ ನೀಗಲು ಸನ್ಯಾಸಿಯ ಸಾಗರೋಲ್ಲಂಘನ

ಮುಚ್ಚು ಮರೆ ಇಲ್ಲದೆ ಮನೆ ಅಂಗಳದಿ ಅಚ್ಚಮಲ್ಲಿಗೆ ಅರಳಿ ಮನೆಯ ತುಂಬ ಘಮವ ತುಂಬಿ ಮನವ ಉಲ್ಲಸಿತಗೊಳಿಸುವಂತೆ ಜಗದೊಡೆಯ ಶ್ರೀ ಕೃಷ್ಣನ ಭಕ್ತಿಧಾರೆ ಶರಧಿಯ ದಾಟಿ ಜಗದಗಲ ಭಕ್ತ ಜನರನ್ನು ಉದ್ದರಿಸಲಿ ಎಂಬ ಆಶಯದಿ ಪುತ್ತಿಗೆ ಮಠಾಧೀಶ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಸಾಗರೋಲ್ಲಂಘನಕ್ಕೀಗ ರಜತ ಸಂಭ್ರಮ.

ಪುತ್ತಿಗೆ ಶ್ರೀಗಳು ಕಾವಿ ವಸ್ತ್ರವ ಸ್ವೀಕರಿಸಿ ಐವತ್ತು ವರ್ಷಗಳು ಕಳೆದು ಇದೀಗ ಸನ್ಯಾಸಾಶ್ರಮದ ಸುವರ್ಣ ಸಂಭ್ರಮದೊಂದಿಗೆ ಅವರ ನಾಲ್ಕನೆಯ ಪರ್ಯಾಯೋತ್ಸವದ ಸಡಗರ. ಅಖಿಲಪ್ರದ ಶ್ರೀ ಕೃಷ್ಣನ ಪೂಜಾ ದೀಕ್ಷರಾಗುವ ಈ ಸುಸಂದರ್ಭದಲ್ಲಿ ಭಗವಂತ ತನ್ನ ಸಖ ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವಾದ ಭಗವದ್ಗೀತೆಯನ್ನು ಪ್ರಪಂಚದಾದ್ಯಂತ ಭಗವದ್ ಭಕ್ತರಿಗೆ ತಲುಪಿಸುವ ಕೈಂಕರ್ಯಕ್ಕೆ ಕಟಿಬದ್ಧರಾಗಿ ಕೋಟಿಗೀತಾ ಲೇಖನ ಯಜ್ಞ ದೀಕ್ಷೆಯೊಂದಿಗೆ ವಿಶ್ವಗೀತೋತ್ಸವದ ಮೂಲಕ ವಿಶ್ವಗೀತಾ ಪರ್ಯಾಯದ ಸಂಕಲ್ಪ ಪೂಜ್ಯ ಶ್ರೀಗಳದ್ದು.

ಕಳೆದ ಇಪ್ಪತ್ತೈದು ವರ್ಷಗಳಿಂದ ಜಂಬೂ ದ್ವೀಪದ ಭರತ ಖಂಡ ಮಾತ್ರವಲ್ಲದೆ ವಿಶ್ವನಿಯಾಮಕ ಶ್ರೀ ಕೃಷ್ಣ ಲೋಕವನ್ನು ಉದ್ಧರಿಸಲೆಂಬ ಆಶಯದಿ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ತಮ್ಮ ಯತಿ ಪರಂಪರೆಗೆ ಹಾಗು ಯಾವುದೇ ಧಾರ್ಮಿಕ ವಿಧಿ ವಿಧಾನಗಳಿಗೆ ಚ್ಯುತಿ ಬರದಂತೆ ಅಚ್ಯುತನನ್ನು ಪ್ರತಿಷ್ಠಾಪಿಸಿದರು. ನಿತ್ಯ ನಿರಂತರ ಪೂಜೆ, ಯಾಗ, ಯಜ್ಞ, ಹವನಗಳಿಂದ ಗೋವಿಂದನನ್ನು ಪೂಜಿಸಿ ಅವನ ಅನುಗ್ರಹಕ್ಕೆ ಸರ್ವ ಜನರು ಪಾತ್ರರಾಗುವಂತೆ ಪ್ರೇರೇಪಿಸಿದ ಶಕ್ತಿ.

ವಿಶ್ವಶಾಂತಿಯ ದೀಕ್ಷೆಯನ್ನು ಹೊತ್ತು ವಿದೇಶದಲ್ಲಿರುವ ಭಾರತೀಯ ಮೂಲದ ಕಿಶೋರರಲ್ಲಿ, ಪುಟ್ಟ ಮಕ್ಕಳಲ್ಲಿ ಸನಾತನ ಸಂಸ್ಕೃತಿ, ಹಿಂದೂ ಸಂಪ್ರದಾಯ , ಭಾರತೀಯ ಧಾರ್ಮಿಕ ಆಚರಣೆ, ಆಧ್ಯಾತ್ಮಿಕ ಅಭಿವೃದ್ಧಿಯ ಜಾಗೃತಿ ಹಾಗು ಜ್ಞಾನ, ಭಕ್ತಿ, ಸಂಸ್ಕಾರಗಳ ಪರಿಚಯದೊಂದಿಗೆ ಹಿರಿಯರಿಗೆ ಅನುವಂಶಿಕ ಪೂಜಾ ವಿಧಾನ, ಪಿತೃ ಆರಾಧನೆ, ಹಬ್ಬ ಹರಿದಿನ ಮುಂತಾದ ಧಾರ್ಮಿಕ ಆಚರಣೆಗಳನ್ನು ನಡೆಸಲು ಒಂದು ಸುಸಂಸ್ಕೃತ ವೇದಿಕೆ ಸೃಷ್ಟಿ ಮಾಡಿದ ಸನ್ಯಾಸಿ.

ವಿಶ್ವ ಶಾಂತಿಯ ಆಶಯದ ಜಾಗತಿಕ ಸಮ್ಮೇಳನಗಳು ಹಾಗೂ ಮಹಾರುದ್ರ ಯಾಗ, ಇಂಗ್ಲಿಷ್ ಭಾಗವತ ಸಪ್ತಾಹ, ಗೀತಾ ಜಯಂತಿ, ಶ್ರೀಕೃಷ್ಣ ಜನ್ಮಾಷ್ಟಮಿ, ಶ್ರೀನಿವಾಸ ಕಲ್ಯಾಣ ಹೀಗೆ ಶ್ರೀಕೃಷ್ಣನಿಗೆ ಪ್ರಿಯವಾದ ಆಧ್ಯಾತ್ಮಿಕ, ದೈವಿಕ ಕಾರ್ಯಕ್ರಮ ಗಳನ್ನು ಆಯೋಜಿಸುತ್ತಾ ಪರಮಾತ್ಮನಿಗೆ ಪ್ರಿಯರಾಗಿದ್ದಾರೆ. ತಮ್ಮ ಪ್ರಥಮ ಪರ್ಯಾಯದ ಅವಧಿಯಲ್ಲಿ ಶ್ರೀ ಕೃಷ್ಣನ ಪೂಜೆಯೊಂದಿಗೆ ದ್ವಿತೀಯ ಪರ್ಯಾಯ ಅವಧಿಯಲ್ಲಿ ಲಕ್ಷಗೀತಾ ಲೇಖನ ಯಜ್ಞ ಹಾಗೂ ಉಡುಪಿಯಲ್ಲಿ ವಿಶಿಷ್ಟ ಗೀತಾ ಮಂದಿರದ ನಿರ್ಮಾಣದ ಮೂಲಕ ಜನಸಾಮಾನ್ಯರಲ್ಲಿ ಗೀತೆಯ ಬಗ್ಗೆ ಜಾಗೃತಿ ಮೂಡಿಸಿದವರು. ಮೂರನೆಯ ಪರ್ಯಾಯದ ಅವಧಿಯಲ್ಲಿ ಭಗವದ್ಗೀತೆಯ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಿ ಕೃಷ್ಣ ಪ್ರೇಮದೊಂದಿಗೆ ಸಾತ್ವಿಕ ಭಕ್ತಿಯ ಪರಿವ್ರಾಜಕರಾದವರು.

ಜಗದ್ ರಕ್ಷಕ ಶ್ರೀ ಕೃಷ್ಣ ನೆಲೆಯೂರಿದ ನಾಡಿನಲ್ಲಿ ಮಾತ್ರವಲ್ಲದೆ ಜಗತ್ತಿನ ನಾನಾ ಕಡೆ ಇರುವ ಅವನ ಭಕ್ತರು ಕೃಷ್ಣ ಸಾನಿಧ್ಯದ ಅನುಭವದಿಂದ ಅನುಗ್ರಹಿತರಾಗುವಂತೆ ಪೂಜ್ಯ ಯತಿವರೇಣ್ಯರು ನಡೆಸಿಕೊಂಡು ಬಂದ ಕಾರ್ಯ ಸ್ತುತ್ಯರ್ಹ. ಅಮೇರಿಕಾದ ನ್ಯೂ ಜೆರ್ಸಿಯಲ್ಲಿ ಶ್ರೀಕೃಷ್ಣ ವೃಂದಾವನ ನಿರ್ಮಾಣ, ಲಾಸ್ ಎಂಜಲೀಸ್ ನಲ್ಲಿ ಶ್ರೀಕೃಷ್ಣ ಮಂದಿರ, ಹ್ಯೂಸ್ಟಮ್ , ಅಟ್ಲಾಂಟಾ, ಡಲ್ಲಾಸ್, ಫೀನಿಕ್ಸ್, ಲಾಸ್ ಏಂಜಲೀಸ್, ಸ್ಯಾನ್ ಹೋಸೆ ಮುಂತಾದ ನಗರಗಳಲ್ಲಿ ಮಾತ್ರವಲ್ಲದೆ ಇಂಗ್ಲೆಂಡಿನ ಲಂಡನ್ನಿನಲ್ಲಿ ಆಸ್ಟ್ರೇಲಿಯಾದ ಸಿಡ್ನಿ, ಮೆಲ್ಬರ್ನ್ ಹೀಗೆ ಪ್ರಪಂಚದಾದ್ಯಂತ ಇಪ್ಪತ್ತೆಂಟು ದೇಶಗಳಲ್ಲಿ ಕೃಷ್ಣ ದೇವಾಲಯಗಳ ನಿರ್ಮಾಣದ ರೂವಾರಿ.

ಶ್ರೀಕೃಷ್ಣ ವಿಠಲನ ಪರಮ ಭಕ್ತ ಈ ಸ್ವಾಮೀಜಿ ಸಾಗರೋಲ್ಲಂಘನೆಯ ಬಳಿಕ ಸಾಗರೋತ್ತರ ದೇಶಗಳಲ್ಲಿ ಅಸಾಮಾನ್ಯ ಸಾಧನೆಗೈದಿದ್ದು ಶ್ಲಾಘನೀಯ. ತಮ್ಮ ಈ ಚತುರ್ಥ ಪರ್ಯಾಯಾವಧಿಯಲ್ಲಿ ಶ್ರೀ ಕೃಷ್ಣ ಪರಮಾತ್ಮನಿಗೆ ಪ್ರಿಯವಾದ ಗೀತೆಯನ್ನು ನಿರಂತರ ಎರಡು‌ ವರುಷ ಪರ್ಯಂತ ಕೋಟಿ ಜನರಿಂದ ಬರೆಸಿ ಅದರ ಚಿಂತನ‌ ಮಂಥನದೊಂದಿಗೆ ಉದಯಾಸ್ತಮಾನ ಅಖಂಡ ಗೀತಾ ಪಾರಾಯಣ ಸಂಕಲ್ಪದೊಂದಿಗೆ ಪಾರ್ಥ ಸಾರಥಿ ಶ್ರೀ ಕೃಷ್ಣನಿಗೆ ಸುವರ್ಣ ಪಾರ್ಥಸಾರಥಿ ರಥ ಸಮರ್ಪಣೆಯ ಆಶಯ. ದೇಶ ವಿದೇಶಗಳಿಂದ ಆಗಮಿಸುವ ಭಕ್ತ ಜನರ ಅನುಕೂಲಕ್ಕಾಗಿ ಅಷ್ಟೋತ್ತರ ಭವನ ಎನ್ನುವ ವಿಶಿಷ್ಟ ವಸತಿ ಸಂಕೀರ್ಣ ಸ್ಥಾಪನೆಯೊಂದಿಗೆ ಆಚಾರ್ಯ ಮಧ್ವರ ಕರ ಕಮಲ ಶೋಭಿತ ಶ್ರೀ ಕೃಷ್ಣ ಸಹಿತ ಸ್ವಾಗತಂ ಕೃಷ್ಣ ಎಂಬ ಸ್ವಾಗತ ಭವನ ನಿರ್ಮಾಣದ ಮಹತ್ತರ ಯೋಜನೆ ಇವರದು.

ಸಕಲ ಜೀವರ ಜೀವನವನ್ನು ಉದ್ಧರಿಸುವ, ಸಮಸ್ತರಿಗೂ ಜ್ಞಾನದ ಬೆಳಕು ತೋರುವ, ಸರ್ವರಿಗೂ ಮೋಕ್ಷಕ್ಕೆ ದಾರಿದೀಪವಾಗುವ ಭಗವದ್ಗೀತೆಯ ಚಿಂತನೆಯನ್ನು ಮನೆ ಮನಗಳಲ್ಲಿ ಉದ್ದೀಪನಗೊಳಿಸುವ ಮಹತ್ಕಾರ್ಯ ನಿರತ ಈ ಸನ್ಯಾಸಿಯ ಸಾಗರೋಲ್ಲಂಘ ನೆಯ ರಜತ ಸಂಭ್ರಮ ಹಾಗೂ ಸನ್ಯಾಸಾಶ್ರಮದ ಸುವರ್ಣ ಸಂಭ್ರಮದ ಈ ವಿಶ್ವಗೀತೋತ್ಸವ ಮನೆ ಮನಗಳಲ್ಲಿ ನಿತ್ಯೋತ್ಸವ ವಾಗಲಿ ಎಂದು ಜಗದ್ ನಿಯಾಮಕನಲ್ಲಿ ಪ್ರಾರ್ಥನೆ.

ಲೋಕಾ ಸಮಸ್ತಾ ಸುಖಿನೋಭವಂತು ಎಂಬ ಪೂಜ್ಯರ ಈ ಹಂಬಲಕ್ಕೆ ಭಕ್ತ ಜನರ ಬೆಂಬಲ ಬಯಸುತ್ತಾ ವಿಶ್ವ ಗೀತಾ ಪರ್ಯಾಯೋತ್ಸವದ ವಿಶ್ವ ವಂದ್ಯ ಪೂಜ್ಯ ಪುತ್ತಿಗೆ ಯತಿಗಳಿಗೆ ಭಕ್ತಿ ಪೂರ್ವಕ ಅಕ್ಷರ ನಮನ.

ಲೇಖನ: ಪೂರ್ಣಿಮಾ ಜನಾರ್ದನ್ ಕೊಡವೂರು.

 
 
 
 
 
 
 
 
 
 
 

Leave a Reply