ಮಹಿಳಾ ಸಬಲೀಕರಣದಲ್ಲಿ ಮಹಿಳಾ ಮೋರ್ಚಾದ ಪಾತ್ರ ಮಹತ್ವಪೂರ್ಣ : ಶಶಿಕಲಾ ವಿ. ಟೆಂಗಳಿ

ಮಹಿಳೆಯರು ಇಂದು ಸ್ವಾವಲಂಬನೆ ಮತ್ತು ಆತ್ಮ ವಿಶ್ವಾಸದೊಂದಿಗೆ ಸಮಾಜದ ಮುಖ್ಯವಾಹಿನಿ ಯಲ್ಲಿ ತೊಡಗಿಸಿ ಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಮಹಿಳಾ ಸಬಲೀಕರಣದತ್ತ ಬಿಜೆಪಿ ಮಹಿಳಾ ಮೋರ್ಚಾದ ಪಾತ್ರ ಅತ್ಯಂತ ಮಹತ್ವಪೂರ್ಣ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ ಹೇಳಿದರು.

ಅವರು ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಬೇಟಿ ನೀಡಿ, ಜಿಲ್ಲಾ ಮಹಿಳಾ ಮೋರ್ಚಾದ ಸಭೆಯಲ್ಲಿ ಭಾಗವಹಿಸಿ, ನಿಗಮದಿಂದ ಮಹಿಳಾ ಅಭಿವೃದ್ಧಿಯ ಬಗ್ಗೆ ಲಭ್ಯವಿರುವ ವಿವಿಧ ಯೋಜನೆಗಳ ಮಾಹಿತಿ ನೀಡಿದರು.

ಸ್ವಸಹಾಯ ಸಂಘಗಳ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಸಂಬಂಧ ಪಟ್ಟಂತೆ ಹಾಗೂ ಮಹಿಳೆ ಯರು ಒಂದಾಗಿ ಪ್ರಾರಂಭಿಸುವ ಉತ್ಪಾದನಾ ಘಟಕಗಳಿಗೆ ರಿಯಾಯತಿ ದರದ ಸಾಲ ಸೌಲಭ್ಯದ ಜೊತೆಗೆ ಸುಕನ್ಯಾ ಸಮೃದ್ಧಿ ಯೋಜನೆಯಡಿ ಬಿಪಿಎಲ್ ಕಾರ್ಡು ಹೊಂದಿರುವ ಬೀದಿ ಬದಿ ಸಣ್ಣ ವ್ಯಾಪಾರಸ್ಥ ಮಹಿಳೆಯರಿಗೆ ರೂ.10,000 ಪ್ರೋತ್ಸಾಹ ಧನ ಮುಂತಾದ ಜನಪರ ಯೋಜನೆ ಗಳು ಚಾಲ್ತಿಯಲ್ಲಿವೆ.

ಬಿಜೆಪಿ ಕಾರ್ಯಕರ್ತರ ಕಾರ್ಯ ತತ್ಪರತೆ ಕೇವಲ ಚುನಾವಣೆ ಸಂದರ್ಭಕ್ಕೆ ಮಾತ್ರ ಸೀಮಿತ ವಾಗಿರದೆ, ನಿರಂತರವಾಗಿ ಜನ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದಾಗಿದೆ. ಈ ನಿಟ್ಟಿನಲ್ಲಿ ಮಹಿಳಾ ಮೋರ್ಚಾದ ಎಲ್ಲಾ ಸ್ತರದ ಪದಾಧಿಕಾರಿಗಳು ಹಾಗೂ ಸದಸ್ಯರು ಪಕ್ಷ ಸಂಘಟನೆಯ ಜೊತೆಗೆ ಸರಕಾರದ ವಿವಿಧ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.

ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಒಂದು ಉತ್ತಮ ಕಾರ್ಯ ತಂಡದೊಂದಿಗೆ ಸಾರ್ಥಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಪ್ರಶಂಸನೀಯ ಎಂದು ಅವರು ಹೇಳಿದರು.

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಯವರು ಶಶಿಕಲಾ ವಿ. ಟೆಂಗಳಿ ಯವರನ್ನು ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಸ್ವಾಗತಿಸಿ, ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಶಾಲು ಹೊದೆಸಿ ಉಡುಪಿ ಶಂಕರಪುರ ಖ್ಯಾತಿಯ ಮಲ್ಲಿಗೆ ಹೂವನ್ನು ಮುಡಿಗೇರಿಸಿ ಅವರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಕಾಪು ಮಂಡಲ ಅಧ್ಯಕ್ಷೆ ಸುಮಾ ಶೆಟ್ಟಿ, ಉಡುಪಿ ನಗರ ಉಪಾಧ್ಯಕ್ಷೆ ರಶ್ಮಿ.

ನಗರ ಪ್ರಧಾನ ಕಾರ್ಯದರ್ಶಿಗಳಾದ ಸುಜಾಲ, ಸುಧಾ ಪೈ, ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಮಾಯಾ ಕಾಮತ್, ರಮಾ ವೈ. ಶೆಟ್ಟಿ, ಪೂರ್ಣಿಮಾ ರತ್ನಾಕರ್, ದಯಾಶಿನಿ, ಶೋಭಾ, ಸರೋಜಾ.

ಸುಬೇಧಾ, ಲೈಲಾ, ಆಶಾ, ಲೀಲಾ ಆರ್. ಅಮೀನ್, ಭಾರತಿ ಚಂದ್ರಶೇಖರ್, ವಿದ್ಯಾ, ಅಶ್ವಿನಿ ಶೆಟ್ಟಿ, ಶಶಿಕಲಾ ಹಾಗೂ ತೆಂಕಪೇಟೆ ಮತ್ತು ಕಡಿಯಾಳಿ ಮಹಿಳಾ ಮೋರ್ಚಾ ಶಕ್ತಿಕೇಂದ್ರದ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply