ಓರ್ವ ಜನಪ್ರತಿನಿಧಿಯಾಗಿ ಗೂಂಡಾ ಸಂಸ್ಕೃತಿ ಪ್ರದರ್ಶಿಸುವ ರಮೇಶ್ ಕಾಂಚನ್ ಯಾವ ಸೀಮೆಯ ದೊಣ್ಣೆ ನಾಯಕ?: ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಪ್ರಶ್ನೆ

ಓರ್ವ ಜನಪ್ರತಿನಿಧಿಯಾಗಿ ಶಾಸಕರು ಹಾಗೂ ಮಾಜಿ ಸಚಿವರ ಬಗ್ಗೆ ಮಾತನಾಡುವಾಗ ಯಾವ ರೀತಿಯ ಪದ ಬಳಕೆ ಮಾಡಬೇಕು ಎನ್ನುವ ಕನಿಷ್ಠ ಪರಿಜ್ಞಾನ ಇಲ್ಲದ ಮತ್ತು ಈ ಹಿಂದೆ ಉಡುಪಿ ನಗರಸಭಾ ಅಧಿವೇಶನದಲ್ಲಿ ದಾರಿಯ ಸಮಸ್ಯೆಯೊಂದರ ಇತ್ಯರ್ಥದ ಸಂದರ್ಭದಲ್ಲಿ ನಾಗರಿಕರೊಬ್ಬರ ಮೇಲೆ ಹಾಗೂ ತಮ್ಮದೇ ಪಕ್ಷದ ಮಹಿಳಾ ನಗರಸಭಾ ಸದಸ್ಯೆಯ ಮೇಲೆ ಕೈಮಾಡಿ ನೂಕಾಟ ತಳ್ಳಾಟ ನಡೆಸಿ ಗೂಂಡಾಗಿರಿ ಪ್ರದರ್ಶಿಸಿದ್ದ ನಗರಸಭಾ ಸದಸ್ಯ ರಮೇಶ್ ಕಾಂಚನ್ ಯಾವ ಸೀಮೆಯ ದೊಣ್ಣೆ ನಾಯಕ ಎಂದು ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಪ್ರಶ್ನಿಸಿದ್ದಾರೆ.

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆ ಯಾವ ರೀತಿ ಸೌಜನ್ಯತೆಯಿಂದ ವರ್ತಿಸಬೇಕು ಎಂಬುದನ್ನು ಕೇವಲ ಪ್ರಚಾರದ ತೆವಲಿಗೆ ಅಸಂಬದ್ಧ ಹೇಳಿಕೆ ನೀಡುತ್ತಿರುವ ರಮೇಶ್ ಕಾಂಚನ್ ಮೊದಲು ಅರಿತುಕೊಳ್ಳುವುದು ಉತ್ತಮ. ಬಿಜೆಪಿ ಸದಾ ಶೋಷಿತ ವರ್ಗ ಹಾಗೂ ಬಡ ಜನತೆಯ ಪರ ನಿಲ್ಲುತ್ತದೆ. ಅನ್ಯಾಯದ ವಿರುದ್ಧ ಸಿಡಿದೆದ್ದ ಲಾರಿ ಮಾಲಕರು, ಚಾಲಕರು ಹಾಗೂ ಕಾರ್ಮಿಕರು ಪ್ರಜಾಪ್ರಭುತ್ವ ರೀತಿಯಲ್ಲಿ ನಡೆಸಿದ್ದ ಮುಷ್ಕರಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಿದೆ. ಮುಷ್ಕರವನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಕೈಗೊಂಡ ಕ್ರಮ ಹಾಗೂ ಸರಕಾರದ ಜನ ವಿರೋಧಿ ನೀತಿಯನ್ನು ಬಯಲು ಮಾಡಿರುವ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಕಾರ್ಯವೈಖರಿ ಕಾಂಗ್ರೆಸ್ಸಿಗರ ನಿದ್ದೆಗೆಡಿಸಿದೆ. ಈ ಕಾರಣಕ್ಕಾಗಿ ಜಿಲ್ಲೆಯ ಓರ್ವ ಕ್ರಿಯಾಶೀಲ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ವಿ.ಸುನೀಲ್ ಕುಮಾರ್ ರವರನ್ನು ‘ದೊಣ್ಣೆ ನಾಯಕ’ ಎಂಬ ಪದ ಬಳಸಿ ಅವಮಾನಿಸಿರುವುದು ನಗರಸಭಾ ಸದಸ್ಯ ರಮೇಶ್ ಕಾಂಚನ್ ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.  

ಬಿಜೆಪಿ ಹೋರಾಟಗಳ ಮೂಲಕವೇ ಸೋಲನ್ನು ಗೆಲುವಾಗಿಸಿಕೊಂಡಿರುವ ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷ. ಒಂದು ಕಾಲದಲ್ಲಿ ಸುಧೀರ್ಘ ಅವಧಿಗೆ ಸರ್ವಾಧಿಕಾರದ ಮೂಲಕ ದುರಾಡಳಿತ ನಡೆಸಿದ್ದ ಕಾಂಗ್ರೆಸ್ ಇಂದು ಜನರಿಂದ ತಿರಸ್ಕೃತಗೊಂಡು ಕೇಂದ್ರದಲ್ಲಿ ಎರಡಂಕೆಗಿಳಿದು ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವೂ ಇಲ್ಲದೆ ಮೂಲೆ ಗುಂಪಾಗಿರುವುದನ್ನು ರಮೇಶ್ ಕಾಂಚನ್ ನೆನಪಿಸಿಕೊಳ್ಳುವುದರ ಜೊತೆಗೆ ಈ ಹಿಂದೆ ಬಿಜೆಪಿ ಬೆಂಬಲಿತ ತಾಲೂಕು ಪಂಚಾಯತ್ ಸದಸ್ಯನಾಗಿ ಅಧಿಕಾರ ಅನುಭವಿಸಿದ ಬಳಿಕ ಪಕ್ಷಾಂತರ ಮಾಡಿರುವ ತನ್ನ ರಾಜಕೀಯ ಹಿನ್ನೆಲೆಯ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ. ಈ ಹಿಂದೆ ಭಾರತ್ ಬಂದ್ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ರಮೇಶ್ ಕಾಂಚನ್ ಲಾಟಿ ಚಾರ್ಜ್ ರುಚಿ ಅನುಭವಿಸಿರುವುದು ತನ್ನ ಗೂಂಡಾ ವರ್ತನೆಗಾಗಿಯೇ ಹೊರತು ಯಾವುದೇ ಜನಪರ ಹೋರಾಟಕ್ಕಾಗಿ ಅಲ್ಲ ಎಂದು ಅವರು ಕುಟುಕಿದ್ದಾರೆ.

ನಕಲಿ ಗ್ಯಾರಂಟಿಗಳ ಮೂಲಕ ಜನತೆಯನ್ನು ಯಾಮಾರಿಸಿ, ರಾಜ್ಯದ ಹಿತವನ್ನೇ ಮರೆತು, ಖಜಾನೆಯನ್ನು ಬರಿದಾಗಿಸುವ ಜೊತೆಗೆ ಪಂಚರಾಜ್ಯ ಚುನಾವಣೆಗಾಗಿ ರಾಜ್ಯವನ್ನು ಲೂಟಿಗೈಯುತ್ತಿರುವ ವಚನ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಲು ರಾಜ್ಯದ ಜನತೆ ಸರ್ವ ಸನ್ನದ್ಧರಾಗಿದ್ದಾರೆ. ಬುದ್ಧಿವಂತರ ಜಿಲ್ಲೆ, ಕಾಂಗ್ರೆಸ್ ಮುಕ್ತ ಉಡುಪಿಯಲ್ಲಿ ನಯವoಚಕರ ಆಟ ನಡೆಯದು ಎಂಬ ಅರಿವಿದ್ದರೂ, ‘ಯಥಾ ರಾಜಾ ತಥಾ ಪ್ರಜಾ’ ಎಂಬoತೆ ವರ್ತಿಸುತ್ತಿರುವ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ವರ್ತನೆ ಹಾಸ್ಯಾಸ್ಪದವಾಗಿದೆ.

‘ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್’ ಎಂಬಂತೆ ಹಲವರಿಗೆ ರಾಜಕೀಯವೇ ಉದ್ಯೋಗ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ವರಿಷ್ಠರಿಬ್ಬರೂ ಬೇಲ್ ಮೇಲೆ ಹೊರಗಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದಡಿ ಸಿಬಿಐ ತನಿಖೆ ಎದುರಿಸುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧದ ಪ್ರಕರಣವನ್ನು ಹಿoಪಡೆವ ನಿರ್ಣಯ ಕೈಗೊಂಡಿರುವ ರಾಜ್ಯ ಕಾಂಗ್ರೆಸ್ ಸರಕಾರದ ಸಾಚಾತನ ಏನೆಂಬುದನ್ನು ರಾಜ್ಯದ ಜನತೆ ಚೆನ್ನಾಗಿಯೇ ಅರಿತಿದ್ದಾರೆ. ರಾಜ್ಯದ ಅಭಿವೃದ್ಧಿಯನ್ನು ಬಲಿಕೊಟ್ಟು, ಕೇವಲ ಅಧಿಕಾರ ದಾಹದಿಂದ ಪೊಳ್ಳು ಪ್ರಚಾರದ ಮೂಲಕ ಜನತೆಯನ್ನು ಯಾಮಾರಿಸಲು ಹೆಣಗಾಡುತ್ತಿರುವ ಕಾಂಗ್ರೆಸ್ಸಿಗೆ ಜನತೆ ಮುಂದಿನ ಎಲ್ಲ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಹೇಶ್ ಠಾಕೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply