ಲಾರಿ ಟೆಂಪೋ ಮಾಲಕ ಚಾಲಕರ ಸಮಸ್ಯೆಗೆ ಕಾಂಗ್ರೆಸ್ಸಿನ ಆಡಳಿತ ವೈಫಲ್ಯವೇ ನೇರ ಕಾರಣ : ಕುಯಿಲಾಡಿ ಸುರೇಶ್ ನಾಯಕ್

ಜಿಲ್ಲೆಯಲ್ಲಿ ಸಿಆರ್ಜಡ್ ಸಮಸ್ಯೆ ಇದ್ದಾಗ ಜನಸಾಮಾನ್ಯರಿಗೆ ತೊಂದರೆ ಆಗಬಾರದೆಂಬ ನೆಲೆಯಲ್ಲಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ಕೂಡಾ ಅಂದಿನ ಬಿಜೆಪಿ ಸರಕಾರದ ಸಚಿವರಾಗಿದ್ದ ಡಾ! ವಿ.ಎಸ್. ಆಚಾರ್ಯರವರು ಮರಳು ತೆಗೆಯುವ ವ್ಯವಸ್ಥೆ ಮಾಡಿದ್ದರು. ಕಾಂಗ್ರೆಸ್ಸಿಗೆ ಇಂತಹ ಯಾವುದೇ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಇಚ್ಛಾಶಕ್ತಿ ಇಲ್ಲ. ಜಿಲ್ಲೆಯ ಲಾರಿ-ಟೆಂಪೋ ಮಾಲಕ ಚಾಲಕರ ಪ್ರಸಕ್ತ ಸಮಸ್ಯೆಗೆ ಕಾಂಗ್ರೆಸ್ಸಿನ ಆಡಳಿತ ವೈಫಲ್ಯವೇ ನೇರ ಕಾರಣ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮತ್ತು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್ ರವರ ಹತಾಶೆಯ ಹೇಳಿಕೆಯನ್ನು ನೋಡುವಾಗ ಅಯ್ಯೋ ಪಾಪ ಎನಿಸುತ್ತದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರಕ್ಕೆ ಯಾವುದೇ ನೀತಿ ಧೋರಣೆಗಳಿಲ್ಲ. ಸರಕಾರ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಮನೆ, ಕಟ್ಟಡ ನಿರ್ಮಾಣಕ್ಕೆ ಕಲ್ಲು, ಮಣ್ಣು, ಹೊಯ್ಗೆ, ಜಲ್ಲಿ ಇತ್ಯಾದಿ ಸಾಮಗ್ರಿಗಳು ದೊರಕುತ್ತಿಲ್ಲ. ಆಸ್ತಿ ನೋಂದಣಿ ದರವನ್ನು ಶೇಕಡಾ 30ರಷ್ಟು ಏರಿಸಿ, ಸರಕಾರದ ಖಜಾನೆ ತುಂಬಿಸುವ ಯೋಜನೆ ಮಧ್ಯಮ ವರ್ಗದ ಜನತೆಯ ಆಸ್ತಿ ಖರೀದಿ ಮತ್ತು ಮನೆ ನಿರ್ಮಾಣದ ಕನಸಿಗೆ ತಣ್ಣೀರೆರಚಿದೆ. ಹೊಸ ರೇಷನ್ ಕಾರ್ಡು ನೋಂದಾವಣೆ ಆಗುತ್ತಿಲ್ಲ. ಸರಕಾರ ಸರ್ವರ್ ಡೌನ್ ಎಂಬ ನೆಪವೊಡ್ಡಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳನ್ನು ಅವಕಾಶವಂಚಿತರನ್ನಾಗಿಸಿದೆ. ಎಲ್ಲ ಸಮಸ್ಯೆಗಳಿಗೂ ಕುಂಟು ನೆಪ ಹೇಳುವ ಬೊಗಳೆ ಸರಕಾರ ಇದಾಗಿದೆ. ಬರದ ಬಗ್ಗೆ ಯಾವುದೇ ಚಿಂತೆ ಇಲ್ಲ. ಸರಕಾರ ಅಸ್ತಿತ್ವಕ್ಕೆ ಬಂದು 3 ತಿಂಗಳೊಳಗೆ ಪಕ್ಷ ಮತ್ತು ಸರಕಾರದ ನಡುವಿನ ಆಂತರಿಕ ಕಚ್ಚಾಟ ಮುಗಿಲು ಮುಟ್ಟಿದೆ. ಸಮಸ್ಯೆಗಳ ಕೂಪದಂತಿರುವ ಕಾಂಗ್ರೆಸ್ ಸರಕಾರಕ್ಕೆ ರಾಜ್ಯದ ಜನತೆ ಹಿಡಿ ಶಾಪ ಹಾಕುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ಸರಕಾರದ ಹುಳುಕುಗಳನ್ನು ಮುಚ್ಚಿಡಲು ಕಾಂಗ್ರೆಸಿಗರು ಬಿಜೆಪಿ ಹಾಗೂ ಜಿಲ್ಲೆಯ ಕ್ರಿಯಾಶೀಲ ಶಾಸಕರುಗಳ ಮೇಲೆ ಗೂಬೆ ಕೂರಿಸುವ ವಿಫಲ ಯತ್ನದಲ್ಲಿ ನಿರತರಾಗಿರುವುದು ಹಾಸ್ಯಾಸ್ಪದ. ರಾಜ್ಯ ಸರಕಾರ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ಸೂಕ್ತ ನೀತಿ ನಿಯಮಗಳನ್ನು ರೂಪಿಸದೆ, ಕೇವಲ ಪೊಲೀಸರ ಕೈಗೆ ಅಧಿಕಾರವನ್ನು ನೀಡಿ ಕೈಕಟ್ಟಿ ಕುಳಿತಿರುವುದನ್ನು ಜಿಲ್ಲೆಯ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಕಾಂಗ್ರೆಸ್ ಮುಖಂಡರ ಬೇಜವಾಬ್ದಾರಿ ಹೇಳಿಕೆಗಳು ರಾಜ್ಯ ಸರಕಾರದ ಅಸಹಾಯಕತೆಯನ್ನು ಪ್ರತಿಬಿಂಬಿಸುವಂತಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಈ ಪ್ರಮಾಣದ ಯಾವುದೇ ಗೊಂದಲಗಳು ಇರಲಿಲ್ಲ. ಲಾರಿ ಟೆಂಪೋ ಮಾಲಕರು ಬೀದಿಗೆ ಬಂದು ಸರಣಿ ಮುಷ್ಕರದಲ್ಲಿ ನಿರತರಾಗಿದ್ದರೂ ಸರಕಾರ ಮಾತ್ರ ಎಚ್ಚೆತ್ತುಕೊಂಡಿಲ್ಲ ಎಂದರೆ ಸರಕಾರದ ಜನವಿರೋಧಿ ನೀತಿಯ ಅಗಾಧತೆಯನ್ನು ಜನತೆ ಪ್ರಶ್ನಿಸುವಂತಾಗಿದೆ.

ಕಾಂಗ್ರೆಸ್ಸಿನ ಪಾಪದ ಕೊಡ ತುಂಬಿದೆ: ಪ್ರಸಕ್ತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ 100 ದಿನ ಕಳೆದರೂ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳದೆ, ಅನುದಾನವನ್ನೂ ಬಿಡುಗಡೆ ಮಾಡದೇ, ಸಮಸ್ಯೆಗಳ ಪರಿಹಾರಕ್ಕೆ ಮುಂದಾಗದೆ ಸ್ತಬ್ಧವಾಗಿದ್ದು, ಕೇವಲ ಒಂದೇ ವರ್ಗದ ತುಷ್ಟೀಕರಣ ಮತ್ತು ಹಿಂದೂ ವಿರೋಧಿ ಹಾಗೂ ಜನವಿರೋಧಿ ನೀತಿಯಲ್ಲಿ ಮಾತ್ರ ಸಕ್ರಿಯವಾಗಿದೆ ಎಂದರೆ ಕಾಂಗ್ರೆಸ್ಸಿನ ಪಾಪದ ಕೊಡ ತುಂಬಿದೆ ಎಂಬ ಮಾತು ಸ್ಪಷ್ಟವೆನಿಸುತ್ತಿದೆ. ರಾಜ್ಯದ ಜನತೆ ಕಾಂಗ್ರೆಸ್ಸಿನ ನಯವಂಚಕತನವನ್ನು ಚೆನ್ನಾಗಿಯೇ ಅರಿತುಕೊಂಡಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply