ಹಾಲಿನ ಕ್ಷೇತ್ರವನ್ನು ಕಡೆಗಣಿಸಿ, ಆಲ್ಕೋಹಾಲನ್ನು ಪ್ರೋತ್ಸಾಹಿಸುವ ಸರಕಾರದ ನಡೆ ಖಂಡನೀಯ: ಸಾಣೂರು ನರಸಿಂಹ ಕಾಮತ್ 

ಸಂಪನ್ಮೂಲ ಕ್ರೋಢೀಕರಣಕ್ಕೆ ಒಂದೆಡೆ ಆಲ್ಕೋಹಾಲನ್ನು ಪ್ರೋತ್ಸಾಹಿಸುವ ರಾಜ್ಯ ಸರ್ಕಾರ, ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವ ಲಕ್ಷಾಂತರ ಕುಟುಂಬಗಳ ಹಿತವನ್ನು ಕಡೆಗಣಿಸಿ ಹಾಲಿನ ಕ್ಷೇತ್ರದ ಸಮಸ್ಯೆಗಳ ಕಡೆಗೆ ಲಕ್ಷ ಹರಿಸುತ್ತಿಲ್ಲ. 
ಮಾಲ್ ಗಳಲ್ಲಿ ದಿನ ಬಳಕೆಯ ವಸ್ತುಗಳ ಜೊತೆಗೆ ಸುಲಭವಾಗಿ ಆಲ್ಕೋಹಾಲ್ ಲಭ್ಯವಾಗುವಂತೆ ಮದ್ಯ ಮಾರಾಟದ ಹೊಸ ಲೈಸೆನ್ಸ್ ನ್ನು ವಿತರಿಸಲು ಸಿದ್ಧತೆ ಮಾಡಿಕೊಂಡಿರುವ ಸರಕಾರ ವ್ಯಸನ ಮುಕ್ತ ಸಮಾಜ ನಿರ್ಮಾಣದ ಆಶಯಕ್ಕೆ ಎಳ್ಳು ನೀರು ಬಿಡುವಂತೆ ಕಾಣುತ್ತಿದೆ.
ಈ ಬಾರಿ ಮುಂಗಾರು ಮಳೆ ಒಂದು ತಿಂಗಳು ತಡವಾಗಿ ಪ್ರಾರಂಭವಾಗಿ ಹಿಂಗಾರು ಮಳೆಯು ಸಾಕಷ್ಟು ಪ್ರಮಾಣದಲ್ಲಿ ಸುರಿಯದೆ, ಇಡೀ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದೆ.
ಪಶುಗಳಿಗೆ ಮೇವಿನ ಕೊರತೆ ,ಪಶು ಆಹಾರದ ದರ ಏರಿಕೆ, ಸಣ್ಣ ಹಿಡುವಳಿದಾರ ರೈತರಿಗೆ ಹಸಿರುಮೇವು ಬೆಳೆಸಲು ಜಾಗದ ಕೊರತೆ, ವಿದ್ಯುತ್ ದರ ಕೂಲಿಯಾಳುಗಳ ಸಂಬಳದಲ್ಲಿ ಏರಿಕೆ, ಪಶು ವೈದ್ಯರ ಕೊರತೆ, ಔಷಧಿ ಮತ್ತು ಚಿಕಿತ್ಸಾದರದಲ್ಲಿ ಏರಿಕೆ ಮುಂತಾದ ಹಲವಾರು ಸಮಸ್ಯೆಗಳಿಂದ ನಲುಗುತ್ತಿರುವ ಹೈನುಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಸಮರ್ಪಕವಾದ ಯೋಜನೆ ಮತ್ತು ಅನುದಾನಗಳನ್ನು ನೀಡಲು ಸರಕಾರವು ಗಮನ ಹರಿಸದೆ, ಜನರ ದುಡಿಮೆಯ ಹಣವನ್ನು ಮದ್ಯದಂಗಡಿಗಳ ಕಡೆಗೆ ಸೆಳೆಯಲು ಯೋಜನೆ ರೂಪಿಸುತ್ತಿರುವುದು ವಿಪರ್ಯಾಸಕರ.
ರಾಜ್ಯದಲ್ಲಿ ಒಂದೆಡೆ ಸರಕಾರ ಮದ್ಯದ ಹೊಳೆಯನ್ನು ಹರಿಸಲು ಮುಂದಾದರೆ, ಇನ್ನೊಂದೆಡೆ ಹೈನುಗಾರಿಕಾ ಕ್ಷೇತ್ರದ ಕಡೆಗಣನೆಯಿಂದಾಗಿ ಹಾಲಿನ ಅಭಾವ ತಲೆದೋರಿ ಮತ್ತೊಂದು ಸಮಸ್ಯೆಗೆ ಕಾರಣವಾದೀತು ಎಂದು ಎಚ್ಚರಿಸಿರುತ್ತಾರೆ. 
ರಾಜ್ಯದಾದ್ಯಂತ ಗ್ರಾಮೀಣ ಭಾಗದಲ್ಲಿ ಸಾವಿರಾರು ಎಕರೆ ಗೋಮಾಳ ಭೂಮಿ ಲಭ್ಯವಿದ್ದು, ಜಿಲ್ಲಾಧಿಕಾರಿಗಳ ಮೂಲಕ ಹೈನುಗಾರರಿಗೆ ಹಸಿರುಮೇವು ಬೆಳೆಸಲು ಈ ಭೂಮಿಯನ್ನು ಒದಗಿಸಿದರೆ, ಹಸಿರು ಮೇವನ್ನು ಬೆಳೆಸುವುದರ ಮೂಲಕ ಮೇವಿನ ಕೊರತೆಯನ್ನು ನೀಗಿಸಿ ಹೈನುಗಾರಿಕೆಗೆ ಪ್ರೋತ್ಸಾಹವನ್ನು ನೀಡಿದಂತಾಗುವುದು ಎಂದು ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ರವರು ರಾಜ್ಯಸರಕಾರವನ್ನು ಆಗ್ರಹಿಸಿದ್ದಾರೆ.
 
 
 
 
 
 
 
 
 
 
 

Leave a Reply