ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಉಚಿತ ಗ್ಲುಕೋಮಾ ತಪಾಸಣಾ ಕಾರ್ಯಕ್ರಮ

ಉಡುಪಿ, 7 ನೇ  ಮಾರ್ಚ್ 2022: ಗ್ಲುಕೋಮಾ ಕಾಯಿಲೆಯು ಶಾಶ್ವತ ಕುರುಡುತನಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಗ್ಲುಕೋಮಾದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಗ್ಲುಕೋಮಾ ವಾರವನ್ನು ಪ್ರತಿವರ್ಷ ಮಾರ್ಚ್ ಎರಡನೇ ವಾರದಲ್ಲಿ  ವಿಶ್ವಾದ್ಯಂತ ಆಚರಿಸಲಾಗುತ್ತದೆ.

ವಿಶ್ವ ಗ್ಲುಕೋಮಾ ವಾರ 2022 ರ ಅಂಗವಾಗಿ  ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ  ನೇತ್ರಶಾಸ್ತ್ರ ವಿಭಾಗ ಮತ್ತು ಆಪ್ಟೋಮೆಟ್ರಿ ವಿಭಾಗ –MCHP ಇವರ ಸಂಯುಕ್ತ ಆಶ್ರಯದಲ್ಲಿ  7ನೇ ಮಾರ್ಚ್ 2022ರಂದು ಎರಡನೇ ಮಹಡಿಯಲ್ಲಿರುವ ನೇತ್ರಶಾಸ್ತ್ರ ವಿಭಾಗದ ಹೊರ ರೋಗಿ ವಿಭಾಗದಲ್ಲಿ  ಉಚಿತ ಗ್ಲುಕೋಮಾ ತಪಾಸಣಾ ಶಿಬಿರದ ಉದ್ಘಾಟನೆಯನ್ನು  ಆಯೋಜಿಸಿತ್ತು.  ಈ ವರ್ಷದ ಧ್ಯೇಯ ವಾಕ್ಯ “ವಿಶ್ವ ಪ್ರಕಾಶಮಾನವಾಗಿದೆ, ನಿಮ್ಮ ದೃಷ್ಟಿಯನ್ನು ಉಳಿಸಿಕೊಳ್ಳಿ ”. ಅಂದರೆ ನಿಯಮಿತ ಪರೀಕ್ಷೆಯೊಂದಿಗೆ ಜನರು ನಮ್ಮ ಸುತ್ತಲಿನ ಪ್ರಪಂಚವನ್ನು ನೋಡುತ್ತಲೇ ಇರುತ್ತಾರೆ ಎಂಬ ಭರವಸೆಯನ್ನು  ಇದು ಪ್ರತಿಬಿಂಬಿಸುತ್ತದೆ.

ಮಾಹೆ ಮಣಿಪಾಲದ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಅವರು ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, “ವಿಶ್ವ ಗ್ಲುಕೋಮಾ ಸಪ್ತಾಹವು ವಿಶ್ವಾದ್ಯಂತ ತಡೆಗಟ್ಟಬಹುದಾದ, ಬದಲಾಯಿಸಲಾಗದ ಅಂಧತ್ವದ ಕುರಿತು  ಗಮನ ಸೆಳೆಯುವ ಒಂದು ವಿಶಿಷ್ಟ   ಅಭಿಯಾನವಾಗಿದೆ . ಈ ಗ್ಲುಕೋಮಾ ಕಾಯಿಲೆ ಇರುವ ಬಗ್ಗೆ ಅರಿವೇ ಇಲ್ಲದವರು , ಈ ಕಾಯಿಲೆಗೆ ಹೇಗೆ ಚಿಕಿತ್ಸೆ ಪಡೆಯಬೇಕು ಎಂದು ತಿಳಿಯದವರೂ ಸಾಕಷ್ಟಿದ್ದಾರೆ ಎಂದರು. ಆದ್ದರಿಂದ ಈ ಜಾಗೃತಿ ಕಾರ್ಯಕ್ರಮವು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಗ್ಲುಕೋಮಾ ರೋಗಿಗಳಿಗೆ ಚಿಕಿತ್ಸೆ  ನೀಡುವ ಕಾರ್ಯದ ಒಂದು ಉತ್ತಮ ಕಾರ್ಯಕ್ರಮವಾಗಿದೆ ಎಂದರು. 

ಕೆಎಂಸಿ ಮಣಿಪಾಲದ ಡೀನ್ ಡಾ.ಶರತ್ ಕುಮಾರ್ ಸ್ವಾಗತಿಸಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ  ಡಾ.ಅವಿನಾಶ್ ಶೆಟ್ಟಿ ವಂದಿಸಿದರು. ಗ್ಲುಕೋಮಾ ಸಪ್ತಾಹ ಕಾರ್ಯಕ್ರಮಕ್ಕಾಗಿ ಶ್ರಮಿಸುತ್ತಿರುವ ಸ್ವಯಂಸೇವಕರಿಗೆ ಡಾ.ಜಿ.ಅರುಣ್ ಮಯ್ಯ , ಡೀನ್, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್  ಅವರು ಪ್ರಶಂಸಾ ಪತ್ರ ವಿತರಿಸಿದರು. ಡಾ.ಸುಲತಾ ಭಂಡಾರಿ ಮುಖ್ಯಸ್ಥರು, ನೇತ್ರ ಚಿಕಿತ್ಸಾ ವಿಭಾಗ ಅವರು ಗ್ಲುಕೋಮಾ ತಪಾಸಣಾ ಶಿಬಿರದ ಕುರಿತು ಅವಲೋಕನ ನೀಡಿದರು. ಆಪ್ಟೋಮೆಟ್ರಿ ವಿಭಾಗ –MCHP ಮುಖ್ಯಸ್ಥರಾದ ಡಾ. ಶೋನ್ ರಾಜ್  ಬಲ್ಲೆ ಗಣೇಶ್ ರಾವ್  ಉಪಸ್ಥಿತರಿದ್ದರು.

ಗ್ಲುಕೋಮಾ ನಿರ್ವಹಣೆಯಲ್ಲಿ ಸಂಬಂಧಿಕರು ವಹಿಸುವ ಪಾತ್ರದ ಕುರಿತು ನೇತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ ವಿಜಯ ಪೈ ಎಚ್ ಮತ್ತು ಸಹ ಪ್ರಾಧ್ಯಾಪಕರಾದ ಡಾ. ನೀತಾ ಕೆಐಆರ್ ಗ್ಲುಕೋಮಾವನ್ನು ಆರಂಭಿಕ ಹಂತದಲ್ಲಿ  ಪತ್ತೆಯ ಮಹತ್ವದ ಕುರಿತು ಮಾತನಾಡಿದರು. ಶಿಬಿರವು 7ನೇ ಮಾರ್ಚ್ 2022ರಿಂದ 12ನೇ ಮಾರ್ಚ್ 2022ರ ವರೆಗೆ  ಬೆಳೆಗ್ಗೆ  9.00ರಿಂದ  ಸಂಜೆ 3.00  ರ ವರೆಗೆ ಎರಡನೇ ಮಹಡಿಯಲ್ಲಿರುವ ನೇತ್ರಶಾಸ್ತ್ರ ವಿಭಾಗದ ಹೊರ ರೋಗಿ ವಿಭಾಗದಲ್ಲಿ ನಡೆಯಲಿದೆ.

 
 
 
 
 
 
 
 
 
 
 

Leave a Reply