ಜನಪ್ರಿಯ ಹಿರಿಯ ಆಯುರ್ವೇದ ವೈದ್ಯ ಡಾ ಯು.ಕರುಣಾಕರ ಶೆಟ್ಟಿ ನಿಧನ

ಭದ್ರಾವತಿಯ ಜನಪ್ರಿಯ ಹಿರಿಯ ಆಯುರ್ವೇದ ವೈದ್ಯ, ಸಮಾಜ ಸೇವಕ, ಬಂಟ ಸಮಾಜದ ಮುಂದಾಳು ಡಾ.ಯು.ಕರುಣಾಕ ಶೆಟ್ಟಿ (83) ಜುಲೈ 7ರಂದು ರಾತ್ರಿ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಉಡುಪಿ ತಾಲೂಕಿನ ಉಪ್ಪೂರಿನವರಾದ ಇವರು ತೆಂಕಬೆಟ್ಟು ಓಣಿಮನೆಯ ಪ್ರತಿಷ್ಠಿತ ಆಯುರ್ವೇದ ಪಂಡಿತರ ಕುಟುಂಬಕ್ಕೆ ಸೇರಿದವರು. ಉಡುಪಿಯ ಆಯುರ್ವೇದ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿ 1963ರಲ್ಲಿ ಭದ್ರಾವತಿಯ ಜನ್ನಾಪುರದಲ್ಲಿ “ಶ್ರೀ ರಾಮ ಕ್ಲಿನಿಕ್” ತೆರೆದು ತನ್ನ ಕೊನೆಯ ಕ್ಷಣದವರೆಗೂ ಆಯುರ್ವೇದ ವೈದ್ಯಕೀಯ ವೃತ್ತಿ ನಡೆಸಿಕೊಂಡು ಬಂದಿರುತ್ತಾರೆ.

ಯಕ್ಷಗಾನ ಮತ್ತು ರಂಗಭೂಮಿಯಲ್ಲೂ ತನ್ನನ್ನು ತೊಡಗಿಸಿಕೊಂಡು ಹವ್ಯಾಸಿ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದ ಇವರು ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿದ್ದರು.

ಭದ್ರಾವತಿಯ ತುಳುಕೂಟ ಹಾಗೂ ಬಂಟರ ಸಂಘಗಳ ಸ್ಥಾಪಕ ಅಧ್ಯಕ್ಷರಾಗಿ, ಸ್ಥಳೀಯ ಲಯನ್ಸ್ ಕ್ಲಬ್ನ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ ಹಾಗೂ ಶ್ರೀ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆಯ ಕೋಶಾಧಿಕಾರಿಯಾಗಿಯೂ  ಕಾರ್ಯ ನಿರ್ವಹಿಸಿದ್ದರು.

ಗುರುವಾರ ಅಪರಾಹ್ನ ಭದ್ರಾವತಿಯಲ್ಲಿ ನಡೆದ ಮೃತರ ಅಂತ್ಯಕ್ರಿಯೆಯಲ್ಲಿ ಸ್ಥಳೀಯ ಶಾಸಕ ಶ್ರೀ ಬಿ.ಕೆ. ಸಂಗಮೇಶ್ವರ ಹಾಗೂ ಊರ ಪರವೂರ, ಗಣ್ಯರು ಪಾಲ್ಗೊಂಡು ಮೃತರಿಗೆ ಅಂತಿಮ ನಮನ ಸಲ್ಲಿಸಿದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ.

 
 
 
 
 
 
 
 
 
 
 

Leave a Reply