ಸಸ್ಯಸಂತ ಡಾ ಕೆ ಜಿ ಭಟ್, ರಂಗ ಋಷಿ ಡಾ ಸಾಣೆಹಳ್ಳಿ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ಯವರನ್ನು ಅಭಿನಂದಿಸಿ ಉಡುಪಿ ಧನ್ಯವಾಯಿತು

ಭಾನುವಾರ ಉಡುಪಿಯಲ್ಲಿ ಎರಡು ಅಪೂರ್ವ ಕಾರ್ಯಕ್ರಮಗಳ ನಡೆದವು. ಆದರೆ ಉಲ್ಲೇಖನೀಯ ಎಂದರೆ ಈ ಎರಡೂ ಕಾರ್ಯಕ್ರಮಗಳು ಭಿನ್ನ ವೇದಿಕೆಯಲ್ಲಿ ನಡೆದರೂ ಒಂದೇ ಸಂಸ್ಥೆಯ ಆವರಣದೊಳಗೇ ನಡೆಯಿತು..!! ಆದ್ದರಿಂದ ಎರಡಕ್ಕೂ ಸಾಕ್ಷಿಯಾಗುವ ಸುಯೋಗ ನಮ್ಮದಾಯಿತು .

ದಶಕಗಳಿಂದ ಉಡುಪಿಯ ಸಾಂಸ್ಕೃತಿಕ ಹಿರಿಮೆ ಗರಿಮೆಗಳಿಗೆ ಆಡುಂಬೊಲದಂತಿರುವ ಪ್ರತಿಷ್ಠಿತ ಎಂ‌ಜಿಎಂ ಕಾಲೇಜಿನ ಆವರಣದೊಳಗೆ ಈ ಎರಡೂ ನಡೆಯಿತು. ರಂಜನಿ ಮೆಮೋರಿಯಲ್ ಟ್ರಸ್ಟ್‌ ರಿ ಉಡುಪಿಯು , ದೇಶವೇ ಹೆಮ್ಮೆಪಡಬೇಕಾದ ಸಸ್ಯ ಸಂತ ಡಾ ಕೆ ಗೋಪಾಲಕೃಷ್ಣ ಭಟ್ಟರ ಕುರಿತಾಗಿ ಅಪೂರ್ವ ಕೃತಿಯೊಂದನ್ನು ಬಿಡುಗಡೆಗೊಳಿಸಿ ಅಭಿನಂದಿಸುವ ಕಾರ್ಯಕ್ರಮವನ್ನು ಸದ್ರಿ ಕಾಲೇಜಿನ ಗೀತಾಂಜಲಿ ಮಂದಿರದಲ್ಲಿ ನಡೆಸಿದರೆ , ಉಡುಪಿಯ ಪ್ರತಿಷ್ಠಿತ ರಂಗಭೂಮಿ ರಿ ಸಂಸ್ಥೆಯು ನಾಡಿನ ಅಪೂರ್ವ ಸಾಂಸ್ಕೃತಿಕ ಆಧ್ವರ್ಯು ರಂಗ ಋಷಿ ಡಾ ಸಾಣೆಹಳ್ಳಿ ಪಂಡಿತಾಚಾರ್ಯ ಶಿವಾಚಾರ್ಯ ಸ್ವಾಮೀಜಿ ಯವರಿಗೆ ರಂಗಪಂಚಾನನ ಎಂಬ ಅಭಿದಾನದೊಂದಿಗೆ ಈ ಬಾರಿಯ ರಂಗಭೂಮಿ ಪ್ರಶಸ್ತಿ ನೀಡಿ ಅಭಿನಂದಿಸಿತು .

ನಿಸ್ಸಂಶಯವಾಗಿ ಈ ಎರಡೂ ಸಂಸ್ಥೆಗಳು ಉಡುಪಿಯ ನಾಗರಿಕರ ವೈಜ್ಞಾನಿಕ ಬದ್ಧತೆ ಮತ್ತು ಸಾಂಸ್ಕೃತಿಕ ಪ್ರಜ್ಞೆ ಗೆ ಹೆಗಲು ಕೊಟ್ಟಿರುವುದು ಅತ್ಯಂತ ಅಭಿನಂದನೀಯ. ಸಸ್ಯ ಸಂತ ಡಾ ಕಾಕುಂಜೆ ಗೋಪಾಲಕೃಷ್ಣ ಭಟ್ಟರದ್ದು ವ್ಯಷ್ಟಿ ಸಾಧನೆಯಾದರೆ ಡಾ ಸಾಣೆಹಳ್ಳಿ ಸ್ವಾಮೀಜಿಯವರದ್ದು ಸಮಷ್ಟಿ ಸಾಧನೆ ಎನ್ನಬಹುದು .

ಅತ್ಯಂತ ಕಷ್ಟಕರವಾದ ಸಸ್ಯವರ್ಗೀಕರಣ ಶಾಸ್ತ್ರವನ್ನು ಆಯ್ದುಕೊಂಡು ಅದರಲ್ಲಿ ಉನ್ನತ ಪದವಿಗಳನ್ನೂ ಪಡೆದ ಬಳಿಕ ದಶಕಗಳಿಂದ ಅನನ್ಯ ನಿಷ್ಠೆ ಶ್ರದ್ಧೆಯಿಂದ ತಪಸ್ಸಿನ ರೀತಿಯಲ್ಲಿ ಅಧ್ಯಯನ ಅಧ್ಯಾಪನ ನಡೆಸಿ ಈ ಭೂಮಿಯಲ್ಲಿರುವ ಸಸ್ಯ ಸೃಷ್ಟಿಯ ಸೊಬಗು – ಸೊಗಡುಗಳನ್ನು , ವೈವಿಧ್ಯ- ವಿಶೇಷಗಳನ್ನು ಪ್ರಪಂಚವೇ ಬೆರಗಾಗುವ ರೀತಿಯಲ್ಲಿ ತೆರೆದಿಟ್ಟ ಡಾ ಭಟ್ಟರು ಬಹುತೇಕ‌ ಒಬ್ಬಂಟಿಯಾಗಿಯೇ ಈ ಸಾಧನೆಗೈದವರು . ಈ ಕ್ಷೇತ್ರದಲ್ಲಿ ಅವರು ನಡೆಸಿದ ತಪಸ್ಸು , ರಚಿಸಿ ಕೊಟ್ಟ ಕೃತಿಗಳು ಈ ನಾಡಿನ ಸಾರ್ವಕಾಲಿಕ ಮಾನ್ಯವೆನಿಸುವ ಆಕರ ಗ್ರಂಥಗಳೇ ಆಗಿವೆ .‌

ಡಾ ಭಟ್ಟರದ್ದು ಮೌನ ಸಾಧನೆ . ಅವರು ಕಂಡುಹಿಡಿದ ಐದಾರು ಸಸ್ಯಪ್ರಭೇದಗಳನ್ನು ಮೆಚ್ಚಿದ ಅಂತಾರಾಷ್ಟ್ರೀಯ ಬಯೋಲಜಿಕಲ್ ಸೊಸೈಟಿ ಆ ಸಸ್ಯಗಳಿಗೆ ಭಟ್ಟರ ಹೆಸರನ್ನು ಸಂಯೋಜಿಸಿ ಭಟ್ರ ಶ್ರಮವನ್ನು ಬಹುಮಾನಿಸಿದ್ದು ಸಾಮಾನ್ಯದ ಸಂಗತಿಯಲ್ಲ.

ಡಾ ಭಟ್ಟರ ಕುರಿತಾಗಿ ಉಡುಪಿಯ ಮತ್ತೋರ್ವ ಸಸ್ಯಶಾಸ್ತ್ರ ಪ್ರಾಧ್ಯಾಪಕ , ಸಾಂಸ್ಕೃತಿಕ ಧುರೀಣರೂ , ರಂಜನಿ ಮೆಮೋರಿಯಲ್ ಟ್ರಸ್ಟ್ ನ ರೂವಾರಿಗಳೂ ಆಗಿರುವ ಪ್ರೊ ವಿ ಅರವಿಂದ ಹೆಬ್ಬಾರರು ಸಾಂದರ್ಭಿಕವಾಗಿ ರಚಿಸಿದ ಟ್ಯಾಕ್ಸೊನೊಮಿ ಭಟ್ಟರ ಯಾನ ಕೃತಿ ಭಟ್ಟರ ಅನೂಹ್ಯ ಸಾಧನೆ ಶ್ರಮಗಳಿಗೆ ಕನ್ನಡಿಯಾಗಿದ್ದು ಅದರ ಬಿಡುಗಡೆ ಸಮಾರಂಭ ಈ ಕಾರಣಕ್ಕೆ ಬಹುಕಾಲ ಸ್ಮರಣೀಯವಾಗಿದೆ .‌ಈ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ , ಕೃತಿ ಬಿಡುಗಡೆಗೊಳಿಸಿ ಡಾ ಭಟ್ಟರ ಬಹುಕಾಲದ ಒಡನಾಡಿ ಸಹೋದ್ಯೋಗಿ ಹಾಗೂ ನಾಡಿನ ಮತ್ತೋರ್ವ ಅಪೂರ್ವ ಸಸ್ಯ ವಿಜ್ಞಾನಿ ಡಾ ಸಿ ಆರ್ ನಾಗೆಂದ್ರನ್ ರು ಮಾತನಾಡಿ ಡಾ ಕೆ ಗೋಪಾಲಕೃಷ್ಣ ಭಟ್ಟರ ತಪಸ್ಸು , ಅಧ್ಯಯನ ನಿಷ್ಠೆಗಳ ಆಳ ಅಗಲಗಳನ್ನು ತೆರೆದಿಟ್ಟು ಭಟ್ಟರ ಬಗೆಗಿನ ನಮ್ಮ ಅಭಿಮಾನ ಆದರಗಳನ್ನು ನೂರ್ಮಡಿಸಿದರು . ಅದಕ್ಕಾಗಿ ಡಾ ನಾಗೇಂದ್ರನ್ ಗೆ ಹಾಗೂ ಪ್ರೊ ಅರವಿಂದ ಹೆಬ್ಬಾರ್ ಗೆ ನಾನು ಆಭಾರಿ.

ಇನ್ನೊಂದೆಡೆ ಇದೇ ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿಯು , ಬಹುಕಾಲದಿಂದಲೂ ಡಾ ಸಾಣೆಹಳ್ಳಿ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿಯವರು ಬಹುಕಾಲದಿಂದ ನಡೆಸಿಕೊಂಡುಬಂದ ಸಾಂಸ್ಕೃತಿಕ ತಪಸ್ಸು , ಸಾಹಿತ್ಯಕ ಕೊಡುಗೆ ಕೈಂಕರ್ಯಗಳಿಗಾಗಿ ರಂಗಪಂಚಾನನ ಎಂಬ ಅಭಿದಾನದೊಂದಿಗೆ ಗೌರವಿಸುವ ಸಾರ್ಥಕ ಕಾರ್ಯ ನಡೆಸಿದ್ದು ಅತ್ಯಂತ ಶ್ಲಾಘನೀಯ .

ಖಾವಿ ತೊಟ್ಟ ಸನ್ಯಾಸಿಯೋರ್ವರ ಸಾಂಸ್ಕೃತಿಕ ಪ್ರಜ್ಞೆ , ಸಮಾಜಮುಖಿ ಚಿಂತನೆಗಳು ಹಾಗೂ ಆ ನಿಟ್ಟಿನಲ್ಲಿ ಅನೇಕ ವರ್ಷಗಳಿಂದ ಅವರು ನಡೆಸಿಕೊಂಡು ಬಂದ ಶ್ರಮಪೂರ್ವಕವಾದ ಕೃಷಿ , ಅವರು ರಚಿಸಿದ ಹತ್ತಾರು ಸಾಹಿತ್ಯಕ ಕೃತಿಗಳು , ರಂಗ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವಂತೆ ಅವರು ಸಾಣೆಹಳ್ಳಿ ಮತ್ತು ಇತರೆಡೆಗಳಲ್ಲಿ ನಿರ್ಮಿಸಿಕೊಟ್ಟ ರಂಗಮಂದಿರಗಳು , ನಾಟಕ ತಂಡ ಕಟ್ಟಿಕೊಂಡು ದೇಶದುದ್ದಗಲ ಸಂಚರಿಸಿ ಅವರು ನಡೆಸಿದ ಸಾಹಸದ ರಂಗಪ್ರಯೋಗಗಳು ಮೇರುಸದೃಶವಾಗಿವೆ .‌ ಈ ಕಾರ್ಯಕ್ರಮದ ವೇದಿಕೆಯ ಬಳಿಯಲ್ಲಿ ಈ ಎಲ್ಲವುಗಳನ್ನು ಬಿಂಬಿಸುವ ಚಿತ್ರಪದರ್ಶನವು ಸ್ವಾಮೀಜಿಯವರ ಸಾಧನೆಗಳನ್ನು ಅತ್ಯಂತ ಸಮರ್ಥವಾಗಿ ಸಾಕ್ಷೀಕರಿಸಿ ಬೆರಗು ಮೂಡಿಸಿತು .

ಕಾರ್ಯಕ್ರಮದಲ್ಲಿ ಅಭಿವಂದನಾ ಭಾಷಣ ಮಾಡಿದ ನಾಡಿನ ಹಿರಿಯ ರಂಗಕರ್ಮಿ ಡಾ ಶ್ರೀನಿವಾಸ ಕಪ್ಪಣ್ಣ ಅವರು ಸ್ವಾಮೀಜಿಯವರು ನಾಡಿನ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸಲು ನೀರೆರೆದು ಪೋಷಿಸಿದ ಪರಿ ಹಾಗೂ ಮಾಡಿದ ಕ್ರಾಂತಿಕಾರ್ಯಗಳನ್ನು ಮನೋಜ್ಞವಾಗಿ ಬಿಡಿಸಿಟ್ಟು ಉಡುಪಿಯ ಸಾಂಸ್ಕೃತಿಕ ಮನಸ್ಸುಗಳ ಕದತಟ್ಟಿದರು .‌ ಆ ಕಾರಣಕ್ಕೆ ಶ್ರೀ ಕಪ್ಪಣ್ಣ ಅವರಿಗೂ ಪ್ರಣಾಮಗಳು .

ಮತ್ತೊಮ್ಮೆ ಅದ್ಭುತ ಸಾಧಕರೀರ್ವರಾದ ಡಾ ಕಾಕುಂಜೆ ಗೋಪಾಲಕೃಷ್ಣ ಭಟ್ ಮತ್ತು ಡಾ ಸಾಣೆಹಳ್ಳಿ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿಯವರಿಗೆ ಅನಂತ ಅಭಿನಂದನೆ ಅಭಿವಂದನೆಗಳನ್ನು ಸಲ್ಲಿಸುತ್ತಾ ಈ ಈರ್ವರೂ ಬಹುಕಾಲ ನಮ್ಮೊಡನಿದ್ದು ಸಮಾಜಕ್ಕೆ ಇನ್ನಷ್ಟು ಕೊಡುಗೆ ಹಾಗೂ ಮಾರ್ಗದರ್ಶನವನ್ನು ನೀಡುವಂತಾಗಲೆಂದು ಶ್ರೀಕೃಷ್ಣನಲ್ಲಿ ಪ್ರಾರ್ಥಿಸುತ್ತೇನೆ .

ಈ ಎರಡೂ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಉತ್ತಮರೀತಿಯಲ್ಲಿ ಅದೂ ಅಲ್ಲದೇ ಅಚ್ಚರಿ ಎಂಬಂತೆ ಒಂದೇ ದಿನ ಒಂದೇ ಸ್ಥಳದಲ್ಲಿ ಸಾರ್ಥಕವಾಗಿ ನಡೆಸಿಕೊಟ್ಟ ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟ್ ಮತ್ತು ರಂಗಭೂಮಿ ಸಂಸ್ಥೆಗೆ ಹೃದಯಪೂರ್ವಕ ಕೃತಜ್ಞತೆಗಳು ಮತ್ತು ಶುಭಹಾರೈಕೆಗಳು ..

 

– ಜಿ ವಾಸುದೇವ ಭಟ್ ಪೆರಂಪಳ್ಳಿ

 
 
 
 
 
 
 
 
 
 
 

Leave a Reply